Site icon Vistara News

Bangalore Kambala : ಕ್ರಿಕೆಟ್‌ಗಿಂತಲೂ ಮೊದಲೇ ಶುರುವಾಗಿತ್ತು DAY and NIGHT ಕಂಬಳ!

Kambala in Flood light

ಬೆಂಗಳೂರು: ಇವತ್ತು ಹಗಲು-ರಾತ್ರಿ ಪಂದ್ಯ, Day and Night match ಎಂದ ಕೂಡಲೇ ಮೊದಲು ನೆನಪಾಗುವುದು ಕ್ರಿಕೆಟ್‌ ಪಂದ್ಯಾಟ. ಆದರೆ, ಕ್ರಿಕೆಟ್‌ನಲ್ಲಿ ಹೊನಲು ಬೆಳಕಿನ ಪಂದ್ಯ (Floodlit Match) ಆರಂಭವಾಗುವ ಎಷ್ಟೋ ವರ್ಷಗಳ ಮೊದಲೇ ಕಂಬಳದಲ್ಲಿ ಹಗಲು-ರಾತ್ರಿ ಕೂಟ ಆರಂಭಗೊಂಡಿತ್ತು. ಕ್ರಿಕೆಟ್‌ನ ಹೊನಲು ಬೆಳಕಿನ ಪಂದ್ಯಾಟಗಳನ್ನು ಆಯೋಜಿಸಲು ಜಗತ್ತಿನ ದೊಡ್ಡ ರಾಷ್ಟ್ರಗಳೇ ನೂರು ಬಾರಿ ಯೋಚಿಸುತ್ತಿದ್ದ ಹೊತ್ತಿನಲ್ಲಿ ಕರಾವಳಿಯ ಸಾಮಾನ್ಯ ಹಳ್ಳಿಗಳಲ್ಲಿ ಹೊನಲು ಬೆಳಕಿನ ಕೂಟ ಶುರುವಾಗಿತ್ತು. ಅಂದರೆ, ಕ್ರಿಕೆಟ್‌ ಜಗತ್ತಿನ ಮೊದಲ ಮೊದಲ ಡೇ ಎಂಡ್‌ ನೈಟ್‌ ಮ್ಯಾಚ್‌ (Day and Night Cricket Match) ನಡೆದಿದ್ದು 1979ರಲ್ಲಿ. ಆದರೆ, ಕಂಬಳದಲ್ಲಿ ಇದು 1971ರಲ್ಲೇ ಜಾರಿಗೆ ಬಂದು ಬಳಿಕ ನಿರಂತರವಾಗಿ ನಡೆಯುತ್ತಿದೆ. ನವೆಂಬರ್‌ 25 ಮತ್ತು 26ರಂದು ನಡೆಯುವ ಬೆಂಗಳೂರು ಕಂಬಳ (Bangalore Kambala)ವೂ ಹೊನಲುಬೆಳಕಿನಲ್ಲೇ ನಡೆಯುತ್ತದೆ.

ಕರಾವಳಿಯ ಕಂಬಳಕ್ಕೆ ಅದೆಷ್ಟೋ ಶತಮಾನಗಳ ಇತಿಹಾಸವಿದೆ. ಕೃಷಿ ಬದುಕಿನೊಂದಿಗೆ ಬೆಸೆದುಕೊಂಡ ಧಾರ್ಮಿಕ ಆಚರಣೆಯಾಗಿರುವುದರಿಂದ ಕೃಷಿಯಷ್ಟೇ ಇತಿಹಾಸವನ್ನು ಇದಕ್ಕೂ ಅನ್ವಯಿಸಬಹುದು. ಆದರೆ, ಜಾನಪದ ಸಂಪ್ರದಾಯಕ್ಕೆ ಕ್ರೀಡಾ ರೂಪ ಸಿಕ್ಕಿ ಅದು ಈಗ ಜಗತ್ತನ್ನು ಸೆಳೆಯಲು ಕಾರಣವಾದ ಆಧುನಿಕ ಕಂಬಳದ ಸ್ವರೂಪ ಪಡೆದದ್ದು 1969ರಲ್ಲಿ. ಅಂದರೆ, ಮೊದಲ ಆಧುನಿಕ ಕಂಬಳ ಆರಂಭವಾಗಿದ್ದು 1969ರಲ್ಲಿ. ಕರಾವಳಿಯಲ್ಲಿ ಗದ್ದೆಗಳಲ್ಲಿ ಕೋಣ ಓಡಿಸುವ ನೂರಾರು ಕಂಬಳಗಳು ನಡೆಯುತ್ತವೆ. ಆದರೆ, ಕಂಬಳಕ್ಕಾಗಿಯೇ ಕರೆ ಮತ್ತು ಸ್ಟೇಡಿಯಂಗಳನ್ನು ನಿರ್ಮಿಸಿ ನಡೆಯುತ್ತಿರುವ ಕಂಬಳಗಳ ಸಂಖ್ಯೆ ಸುಮಾರು 28. ಇವುಗಳನ್ನು ಆಧುನಿಕ ಕಂಬಳಗಳು ಅನ್ನುತ್ತಾರೆ. ಇಲ್ಲಿ ತಂತ್ರಜ್ಞಾನ, ಕ್ರೀಡೆಯ ಎಲ್ಲ ನಿಯಮಗಳ ಬಳಕೆ, ಸೆಕೆಂಡಿನಷ್ಟು ನೂರನೇ ಒಂದು ಭಾಗದಷ್ಟು ಕರಾರುವಕ್ಕಾದ ಫಲಿತಾಂಶ ವಿಶ್ಲೇಷಣೆ, ಥರ್ಡ್‌ ಅಂಪಾಯರ್‌ ಸೇರಿದಂತೆ ಎಲ್ಲ ವ್ಯವಸ್ಥೆಗಳು ಇರುತ್ತವೆ.

ಬಜಗೋಳಿ ಕಂಬಳ ಇತಿಹಾಸದ ಮೊದಲ ಆಧುನಿಕ ಕಂಬಳ

ಕೇವಲ ಗದ್ದೆಗಳಿಗೆ ಸೀಮಿತವಾಗಿದ್ದ ಜಾನಪದ ಕ್ರೀಡೆಯನ್ನು ಮೊದಲ ಬಾರಿ ಅದಕ್ಕೆಂದೇ ನಿರ್ಮಿಸಿದ ಅವಳಿ ಕರೆಗಳಲ್ಲಿ ನಡೆಸಿದ ಕೀರ್ತಿ ಸಲ್ಲುವುದು 1969ರಲ್ಲಿ ಆರಂಭಗೊಂಡ ಬಜಗೋಳಿಯ ಲವ-ಕುಶ ಕಂಬಳಕ್ಕೆ. ಅದನ್ನು ಆರಂಭಿಸಿದ ಗುಣಪಾಲ ಜೈನ್‌ ಅವರು ಆಧುನಿಕ ಕಂಬಳದ ಪಿತಾಮಹ ಎಂಬ ಕೀರ್ತಿ ಹೊಂದಿದ್ದಾರೆ. ಮುಂದೆ ದಕ್ಷಿಣೋತ್ತರ ಕನ್ನಡದಲ್ಲಿ ಹಲವಾರು ಕರೆ ಕಂಬಳಗಳು ಹುಟ್ಟಿಕೊಂಡವು. ಕೆಲವು ಕಾಲಾಂತರದಲ್ಲಿ ಸ್ಥಗಿತಗೊಂಡವು. ಕೆಲವು ಮತ್ತೆ ಪುನರುಜ್ಜೀವನಗೊಂಡಿವೆ, ಕೆಲವು ಹೊಸದಾಗಿ ಆರಂಭಗೊಂಡಿವೆ. ಈಗ ಕಂಬಳ ಸಮಿತಿ ಆಶ್ರಯದಲ್ಲಿ ಸುಮಾರು 28 ಕಂಬಳಗಳು ನಡೆಯುತ್ತಿವೆ.

ಆಧುನಿಕ ಕಂಬಳದ ಪ್ರಯೋಗಶಾಲೆಗಳು

1969ರಲ್ಲಿ ಆರಂಭವಾದ ಬಜಗೋಳಿ ಕಂಬಳದ ಕಲ್ಪನೆಯನ್ನು ಇಟ್ಟುಕೊಂಡು 1976ರಲ್ಲಿ ಅಳದಂಗಡಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ವೀರೇಂದ್ರ-ಸುರೇಂದ್ರ ಜೋಡುಕರೆ ಕಂಬಳ ಆರಂಭವಾಯಿತು. 1976ರಲ್ಲಿ ಬೋಳಂತೂರು ಮತ್ತು 1970ರಲ್ಲಿ ಮಿಜಾರು ಗುತ್ತು ಆನಂದ ಆಳ್ವರ ನೇತೃತ್ವದಲ್ಲಿ ಮಿಜಾರು ಕಂಬಳ ಶುರುವಾದವು. ಇವು ನಾಲ್ಕು ಆಧುನಿಕ ಕಂಬಳ ಲೋಕದ ಆಧಾರ ಸ್ತಂಭಗಳು. ಹಲವು ಪ್ರಯೋಗಗಳ ಲ್ಯಾಬೊರೇಟರಿಗಳು.
ಕಂಬಳ ಕರೆ ನಿರ್ಮಾಣ, ಕರೆಗಳ ಉದ್ದದ ಸ್ಪಷ್ಟ ಲೆಕ್ಕಾಚಾರ, ಕೋಣಗಳ ಹಿರಿಯ-ಕಿರಿಯ ವಿಭಾಗೀಕರಣ, ಹಗ್ಗ, ನೇಗಿಲು, ಹಲಗೆ, ಕನೆಹಲಗೆ ಓಟಗಳ ವಿಭಜನೆ, ಆರೂವರೆ, ಏಳುವರೆ ಕೋಲು ನಿಶಾನೆಗೆ ನೀರು ಹಾಕುವ ಸಂಭ್ರಮಗಳೆಲ್ಲವೂ ಹೊಸ ದಿಕ್ಕು ಪಡೆದದ್ದು ಇಲ್ಲಿಂದಲೇ.

ಮೊದಲು ಕಂಬಳಕ್ಕೆ ಟಿಕೆಟ್‌ ಕೊಟ್ಟೇ ಹೋಗಬೇಕಾಗಿತ್ತು!

ನಿಜವೆಂದರೆ, ಆಧುನಿಕ ಕಂಬಳದ ಆರಂಭಿಕ ವರ್ಷಗಳಲ್ಲಿ ಕಂಬಳ ನೋಡಲು ಟಿಕೆಟ್‌ ಕೊಡಬೇಕಾಗಿತ್ತು. ಇಡೀ ಕಂಬಳದ ಗದ್ದೆಗೆ 360 ಡಿಗ್ರಿಯಲ್ಲೂ ಪರದೆಗಳಿಂದ ಮುಚ್ಚಿ ಆಗಮನ-ನಿರ್ಗಮನದ ಗೇಟುಗಳನ್ನು ಮಾತ್ರ ತೆರೆಯಲಾಗುತ್ತಿತ್ತು. ಕ್ರೀಡಾಂಗಣದ ಅಕ್ಕಪಕ್ಕದ ಮರಗಳಲ್ಲಿ ಕುಳಿತರೂ ಕಾಣದಂತೆ ಕಟ್ಟೆಚ್ಚರ ವಹಿಸಲಾಗುತ್ತಿತ್ತು.

ಕಂಬಗಳ ಕೋಣಗಳು ಓಟ ಆರಂಭಿಸಿ ಕೊನೆಯದಾಗಿ ಗುರಿ ಮುಟ್ಟುವ ಭಾಗದಲ್ಲಿರುವ ಮಂಜೊಟ್ಟಿ ಎನ್ನುವ ಎತ್ತರದ ವೇದಿಕೆಗೆ ಗರಿಷ್ಠ ದರ. ಕೋಣಗಳು ಓಡುವ ಅವಳಿ ಕರೆಗಳ ಉದ್ದಕ್ಕೂ ಮೂರ್ನಾಲ್ಕು ಹಂತಗಳಲ್ಲಿ ನಿರ್ಮಿಸಿರುವ ಗ್ಯಾಲರಿಗಳಲ್ಲಿ ಕುಳಿತುಕೊಳ್ಳಲು ಬೇರೆ ಟಿಕೆಟ್‌. ಎಲ್ಲೂ ಕುಳಿತುಕೊಳ್ಳದೆ ಓಡಾಡುತ್ತಲೇ ಕಂಬಳ ನೋಡಲು ಇನ್ನೊಂದು ಟಿಕೆಟ್‌. ಒಳಗೆ ನೂರಾರು ಹೋಟೆಲ್‌, ಅಂಗಡಿ, ಸ್ಟಾಲ್‌ಗಳು. ಸುಮಾರು 10-20 ವರ್ಷ ಈ ವ್ಯವಸ್ಥೆ ಇದ್ದದ್ದು ಬಳಿಕ ಬಯಲು ಕಂಬಳವಾಗಿ ಬದಲಾಯಿತು. ಈಗ ಕೆಲವೇ ಕಡೆಗಳಲ್ಲಿ ಮಾತ್ರ ಸ್ಟೇಡಿಯಂನ ವ್ಯವಸ್ಥೆ, ಗ್ಯಾಲರಿ ವ್ಯವಸ್ಥೆ ಇದೆ.

ಇದು ಗದ್ದೆ ಕಂಬಳದ ನೋಟ

ಮೊದಲ ಹೊನಲು ಬೆಳಕಿನ ಕಂಬಳ ಹುಟ್ಟಿದ ಕಥೆಯೇ ರೋಚಕ

ಸಾಮಾನ್ಯವಾಗಿ ಆರಂಭಿಕ ವರ್ಷಗಳಲ್ಲಿ ಕಂಬಳ ಎಂದರೆ ಬೆಳಗ್ಗೆ ಆರಂಭವಾಗಿ ಸಂಜೆ ಕತ್ತಲಾಗುವುದರ ಒಳಗೆ ಮುಗಿಯುವ ಒಂದು ಪಂದ್ಯಾಟ. ಇದು ಹಗಲು-ರಾತ್ರಿಯ, ಹೊನಲು ಬೆಳಕಿನ ಕೂಟವಾಗಿ ಪರಿವರ್ತನೆಯಾಗಿದ್ದು 1971ರಲ್ಲಿ. ಈ ಸ್ಥಿತ್ಯಂತರದ ಹಿಂದೆಯೂ ಒಂದು ಕತೆ ಇದೆ.

1969ರಲ್ಲಿ ಮೊದಲ ಆಧುನಿಕ ಕಂಬಳ ಬಜಗೋಳಿಯಲ್ಲಿ ಆರಂಭವಾಗಿತ್ತು. ಸ್ಪರ್ಧೆಯ ತುರುಸು ಮೊದಲ ಬಾರಿ ಅಲ್ಲಿ ತೆರೆದುಕೊಂಡಿತ್ತು. ಮರು ವರ್ಷ ಕತ್ತಲಾಗುವುದರ ಒಳಗೆ ಓಟ ಮುಗಿಸುವ ಪ್ಲ್ಯಾನ್‌ ಸಕ್ಸಸ್‌ ಆಗಲಿಲ್ಲ. ನಿಗದಿಯಂತೆ ಫೈನಲ್‌ ಸಮಯದ ಒಳಗೆ ನಡೆದರೂ ಅಲ್ಲೊಂದು ಅಚ್ಚರಿ ನಡೆಯಿತು. ಫೈನಲ್‌ನಲ್ಲಿ ಕಂಕನಾಡಿ ಜೆ. ರಾಮಪ್ಪ ಮತ್ತು ಎಣ್ಮೂರು ಆದಪ್ಪ ಗೌಡರ ಕೋಣಗಳ ನಡುವಿನ ಓಟದಲ್ಲಿ ಸಮ-ಸಮ ಫಲಿತಾಂಶ ಬಂತು. ಮತ್ತೊಮ್ಮೆ ಓಡಿಸೋಣವೆಂದರೆ ಕತ್ತಲಾಗಿ ಹೋಗಿತ್ತು. ಬಹುಮಾನವನ್ನು ಇಬ್ಬರಿಗೂ ಹಂಚಲಾಯಿತು.

ಹಾಗಾಗಿ ಮುಂದಿನ ವರ್ಷದಿಂದಲೇ ಅಂದರೆ 1971ರಿಂದಲೇ ಹೊನಲು ಬೆಳಕಿನ ವ್ಯವಸ್ಥೆ ಬಂತು. ಸುಮಾರು 10ಕ್ಕೂ ಅಧಿಕ ಎಕರೆ ಪ್ರದೇಶಕ್ಕೆ ವಿದ್ಯುದ್ದೀಪದ ಅಳವಡಿಕೆ, ಕರೆಗಳಿಗೆ ಅನ್ವಯವಾಗುವಂತೆ ಪ್ರಖರ ಬೆಳಕಿನ ವ್ಯವಸ್ಥೆಯನ್ನು ಆ ಕಾಲದಲ್ಲೇ ಸುಸಜ್ಜಿತವಾಗಿ ನಡೆಸಲಾಗಿತ್ತು.

ಈಗ ರಾತ್ರಿ ಕಂಬಳವೇ ಆಕರ್ಷಕ

ಹೊನಲು ಬೆಳಕಿನ ಕಂಬಳವಾಗಿ ನಡೆದ ಪರಿವರ್ತನೆ ಕಂಬಳಕ್ಕೆ ಹೊಸ ಆಕರ್ಷಣೆಯನ್ನು ಹುಟ್ಟಿಸಿತು. ದೀಪದ ಬೆಳಕಿನಲ್ಲಿ ಕೋಣಗಳ ಓಟ, ಕನಹಲಗೆ ಮೂಲಕ ನೀರು ಎತ್ತರಕ್ಕೆ ಚಿಮ್ಮುವುದನ್ನು ಬೆಳಕಿನಲ್ಲಿ ನೋಡಿದರೆ ಅದರ ಸೊಗಸೇ ಬೇರೆ. ಹೀಗಾಗಿ ಈಗ ನಡೆಯುತ್ತಿರುವ ಆಧುನಿಕ ಕಂಬಳಗಳಲ್ಲಿ ರಾತ್ರಿಯ ಆಕರ್ಷಣೆಯೇ ಹೆಚ್ಚು. ಈ ಹೊತ್ತಿನಲ್ಲಿ ಲಕ್ಷಾಂತರ ಕಂಬಳ ಅಭಿಮಾನಿಗಳು ಅಲ್ಲಿ ನೆರೆಯುತ್ತಾರೆ. ಮಧ್ಯರಾತ್ರಿ ಬಳಿಕದ ಯಾವುದೋ ಜಾವದಲ್ಲಿ ಕೇಳುವ ಅಲೆ ಬುಡಿಯೆರ್‌ ಎಂಬ ಸದ್ದೇ ರೋಮಾಂಚನ ಮೂಡಿಸುತ್ತದೆ.

ರಾತ್ರಿ ಕಂಬಳ ಹೇಗಿರುತ್ತದೆ? ಈ ವಿಡಿಯೊ ನೋಡಿ.. ಕೃಪೆ: ನಮ್ಮ ಕಂಬಳ

ಕ್ರಿಕೆಟ್‌ಗಿಂತಲೂ ಮೊದಲೇ ಡೇ ಎಂಡ್‌ ನೈಟ್ ಪ್ರಯೋಗ‌

ಈ ಡೇ ಎಂಡ್‌ ನೈಟ್‌ ಪ್ರಯೋಗ ಕ್ರಿಕೆಟ್‌ಗಿಂತಲೂ ಮೊದಲೇ ನಡೆದಿರುವುದು ಕರಾವಳಿ ಭಾಗದ ಜನರ ಆಧುನಿಕ ಚಿಂತನೆಯ ಸೂಚಕವೂ ಹೌದು.

ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಡೇ ಎಂಡ್‌ ನೈಟ್‌ ಮ್ಯಾಚ್‌ ನಡೆದಿದ್ದು 1979ರ ನವೆಂಬರ್‌ 27ರಂದು. ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಆಸ್ಟ್ರೇಲಿಯಾ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದೆ (ಇದರಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು). ಭಾರತದಲ್ಲಿ ಮೊದಲ ಹೊನಲು ಬೆಳಕಿನ ಕಂಬಳ ನಡೆದಿರುವುದು 1984ರಲ್ಲಿ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ದಿಲ್ಲಿಯ ಜವಾಹರಲಾಲ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು.

ಇದನ್ನೂ ಓದಿ: Bangalore kambala : ಪುನೀತ್‌ ನೆನಪಿನಲ್ಲಿ ಬೆಂಗಳೂರು ಕಂಬಳ, ಕರೆಗಳ ಹೆಸರೇನು?

ಏಕದಿನ ಕ್ರಿಕೆಟ್‌ನ ಬಳಿಕ ಟೆಸ್ಟ್‌ ಕ್ರಿಕೆಟ್‌ ಹೊನಲು ಬೆಳಕಿಗೆ ಹೊರಳಲು 36 ವರ್ಷಗಳೇ ಬೇಕಾದವು. ಈ ಬಾರಿಯೂ ಈ ರಿಸ್ಕ್‌ ತೆಗೆದುಕೊಂಡದ್ದು ಆಸ್ಟ್ರೇಲಿಯಾವೇ. 2015ರ (ಕೇವಲ ಎಂಟು ವರ್ಷದ ಹಿಂದೆ) ನವೆಂಬರ್‌ 27ರಂದು ಕ್ರಿಕೆಟ್‌ ಜಗತ್ತಿನ ಮೊದಲ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ ನಡೆಯಿತು (1979ರಲ್ಲೂ ನವೆಂಬರ್‌ 27ಕ್ಕೇ ಏಕದಿನ ಕ್ರಿಕೆಟ್‌ನ ಮೊದಲ ಹೊನಲು ಬೆಳಕಿನ ಪಂದ್ಯ ನಡೆದಿತ್ತು).

Exit mobile version