ಚೆನ್ನೈ: ರವೀಂದ್ರ ಜಡೇಜಾ (22 ರನ್ಗಳಿಗೆ 3 ವಿಕೆಟ್) ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ಗಳ ಪ್ರಭಾವಕ್ಕೆ ಕುಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 16ನೇ ಆವೃತ್ತಿಯ 29ನೇ ಪಂದ್ಯದಲ್ಲಿ 134 ರನ್ ಬಾರಿಸಿದೆ. ಇದರೊಂದಿಗೆ ಆತಿಥೇಯ ತಂಡದ ಗೆಲುವಿಗೆ 135 ರನ್ಗಳ ಸವಾಲು ಎದುರಾಗಿದೆ. ಹೈದರಾಬಾದ್ ತಂಡದ ಪರ ಅಭಿಷೇಕ್ ಶರ್ಮಾ (34) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದ ಘಟಾನುಘಟಿ ಬ್ಯಾಟರ್ಗಳು ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದರು.
ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಬಳಗ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್ ಬಾರಿಸಿತು.
ಸನ್ ರೈಸರ್ಸ್ ಹೈದರಾಬಾದ್ ತಂಡ ನಿಧಾನಗತಿಯ ಆರಂಭವನ್ನು ಪಡೆಯಿತು. 35 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 18 ರನ್ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿ ಅಭಿಷೇಕ್ ಶರ್ಮಾ 1 ಸಿಕ್ಸರ್ ಹಾಗೂ 3 ಫೋರ್ಗಳೊಂದಿಗೆ 34 ರನ್ ಬಾರಿಸಿದರು ಅವರೊಂದಿಗೆ ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ.
ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ರಾಹುಲ್ ತ್ರಿಪಾಠಿ 21 ರನ್ ಬಾರಿಸಿದರೂ, ನಾಯಕ ಏಡೆನ್ ಮಾರ್ಕ್ರಮ್ 12 ರನ್ಗಳಿಗೆ ಔಟಾದರು. ಹೆನ್ರಿಚ್ ಕ್ಲಾಸೆನ್ ಕೂಡ 17 ರನ್ಗಳಿಗೆ ಸೀಮಿತಗೊಂಡರು. ಏಳನೇ ಕ್ರಮಾಂಕದಲ್ಲಿ ಆಡಲು ಬಂದ ಮಯಾಂಕ್ ಅಗರ್ವಾಲ್ 4 ಎಸೆತಗಳನ್ನು ಬಳಸಿಕೊಂಡು 2 ರನ್ ಗಳಿಸಿದರು. ಕೊನೆಯಲ್ಲಿ ಮಾರ್ಕೊ ಜೆನ್ಸನ್ 17 ರನ್ ಬಾರಿಸಿದ ಕಾರಣ ತಂಡದ ಮೊತ್ತ 130ರ ಗಡಿ ದಾಟಿತು. ವಾಷಿಂಗ್ಟನ್ ಸುಂದರ್ 9 ರನ್ ಕೊಡುಗೆ ಕೊಟ್ಟರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಕಾಶ್ ಸಿಂಗ್, ಮಹೀಶ್ ತೀಕ್ಷಣ, ಹಾಗೂ ಮಹೀಶಾ ಪತಿರಾಣಾ ತಲಾ ಒಂದು ವಿಕೆಟ್ ಕಬಳಿಸಿದರು.