ಬೆಂಗಳೂರು: ಇಲ್ಲಿ ನಡೆದ ಅಂಡರ್-14 (Under-14 years) ಏಕದಿನ ಕ್ರಿಕೆಟ್ನಲ್ಲಿ ಬೆಂಗಳೂರಿನ ಪೋರನೊಬ್ಬ ವಿಶೇಷ ದಾಖಲೆಯೊಂದನ್ನು ಬರೆದಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಡೆಸಿದ ಈ ಟೂರ್ನಿಯಲ್ಲಿ ಶ್ರೀ ರಾಮ್ ಗ್ಲೋಬಲ್ ಶಾಲೆಯ(Shri Ram Global School) ಪರ ಆಡಿದ ಶಹಾನ್ ಶಾದಾಬ್ (Shaahan Shadab) ಶತಕದ ಜತೆಗೆ 10 ವಿಕೆಟ್ ಕಿತ್ತ ಸಾಧನೆ ಮಾಡಿದ್ದರೆ.
ಬೆಂಗಳೂರಿನಲ್ಲಿ ನಡೆದ ಬಿಟಿಆರ್ ಶೀಲ್ಡ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀ ರಾಮ್ ಗ್ಲೋಬಲ್ ಶಾಲೆ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 399 ರನ್ ಬಾರಿಸಿತು. ಗುರಿ ಬೆನ್ನತ್ತಿದ ಫ್ರೀಡಂ ಇಂಟರ್‌ನ್ಯಾಶನಲ್ ಸ್ಕೂಲ್ 7 ಓವರ್‌ಗಳಲ್ಲಿ 14 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ 384 ರನ್ಗಳ ಹೀನಾಯ ಸೋಲು ಕಂಡಿತು.
ಇದನ್ನೂ ಓದಿ IND VS AUS: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ
ಈ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಶಹಾನ್ ಶಾದಾಬ್ 88 ಎಸೆತ ಎದುರಿಸಿ 23 ಬೌಂಡರಿ, 4 ಸಿಕ್ಸರ್ ನೆರವಿನಿಂದ 115 ರನ್ ಬಾರಿಸಿದರು. ಬ್ಯಾಟಿಂಗ್ ಬಳಿಕ ಬೌಲಿಂಗ್ನಲ್ಲಿಯೂ ಮಿಂಚಿದ ಶಾದಾಬ್ 10 ವಿಕೆಟ್ ಕಿತ್ತು ದಾಖಲೆ ಬರೆದರು. ಜತೆಗೆ ಒಂದೇ ಪಂದ್ಯದಲ್ಲಿ 2 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯೂ ಮಾಡಿದರು. ಇವರ ಸಾಧನೆ ಕಂಡ ಕೆಲ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವಂತಾಗಲಿ ಎಂದು ಟ್ವಿಟರ್ನಲ್ಲಿ ಹಾರೈಸಿದ್ದಾರೆ.