ಬ್ರಾಸಿಲಿಯಾ: ಫುಟ್ಬಾಲ್ ದಂತಕತೆ, ಮೂರು ಬಾರಿ ವಿಶ್ವಕಪ್ ವಿಜೇತ ಬ್ರೆಜಿಲ್ ತಂಡದ ಸದಸ್ಯ ಪೀಲೆ (82) (Pele Passes Away) ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೀಲೆ ಅವರು ಸಾವೋ ಪೌಲೋದಲ್ಲಿರುವ ಆಲ್ಬರ್ಟ್ ಐನ್‌ಸ್ಟೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಫುಟ್ಬಾಲ್ ಮಾಂತ್ರಿಕ ನಿಧನರಾಗಿದ್ದಾರೆ. ಪೀಲೆ ನಿಧನಕ್ಕೆ ಜಗತ್ತಿನ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕರುಳಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಪೀಲೆ ಅವರು ನವೆಂಬರ್ 29ರಂದು ಸಾವೋ ಪೌಲೋ ಆಸ್ಪತ್ರೆಗೆ ದಾಖಲಾಗಿದ್ದರು. 2021ರ ಸೆಪ್ಟೆಂಬರ್‌ನಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ತೆಗೆಯಲಾಗಿತ್ತಾದರೂ ಅವರ ಆರೋಗ್ಯ ಸುಧಾರಣೆಯಾಗಿರಲಿಲ್ಲ. ಹಾಗಾಗಿ, ಪೀಲೆ ಅವರು ನಿರಂತರವಾಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದರು. ನವೆಂಬರ್‌ನಲ್ಲಿ ಆಸ್ಪತ್ರೆಗೆ ದಾಖಲಾದ ಅವರು ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಾದರೂ ದಿನ ಕಳೆದಂತೆ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಹಾಗಾಗಿ, ವೈದ್ಯರು ಅವರಿಗೆ ಕೀಮೊಥೆರಪಿಯನ್ನೂ ನಿಲ್ಲಿಸಿದ್ದರು. ಚಿಕಿತ್ಸೆಯ ಮಧ್ಯೆಯೇ, ಕೋಟ್ಯಂತರ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದ ಪೀಲೆ, “ನಾನು ಗೆದ್ದು ಬರುವೆ” ಎಂದಿದ್ದರು.
ಮೂರು ಬಾರಿ ವಿಶ್ವಕಪ್ ವಿಜೇತ ತಂಡದ ಸದಸ್ಯ
ಪೀಲೆ ಅವರು ಬ್ರೆಜಿಲ್ ಫುಟ್ಬಾಲ್ ತಂಡದ ಸಾರ್ವಕಾಲಿಕ ಶ್ರೇಷ್ಠ ಆಟಗಾರರೆನಿಸಿದ್ದು, ಮೂರು ಬಾರಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. 1958, 1962 ಹಾಗೂ 1970ರಲ್ಲಿ ಬ್ರೆಜಿಲ್ ಫುಟ್ಬಾಲ್ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪೀಲೆ ಪ್ರಮುಖ ಪಾತ್ರ ವಹಿಸಿದ್ದರು. 95 ಪಂದ್ಯಗಳಿಂದ 77 ಗೋಲು ಬಾರಿಸಿದ್ದ ಅವರ ಪೂರ್ಣ ಹೆಸರು ಎಡ್ಸನ್ ಅರಂಟೆಸ್ ಡೊ ನಾಸಿಮೆಂಟೋ (Edson Arantes do Nascimento) ಆಗಿದ್ದು, ಪೀಲೆ ಎಂದೇ ಜಗತ್ತಿನಾದ್ಯಂತ ಖ್ಯಾತಿಯಾಗಿದ್ದರು. ಇವರಿಗೆ ಏಳು ಮಕ್ಕಳಿದ್ದಾರೆ. ಫಿಫಾ ಇವರನ್ನು “ಸರ್ವಶ್ರೇಷ್ಠ” ಎಂದು ಕರೆದು ಗೌರವಿಸಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಲ್ಲಿ ಮೆಸ್ಸಿ ಮೆಸ್ಸಿ ಎಂಬ ಸಮುದ್ರ ಘೋಷ ಉಕ್ಕುತಿದ್ದರೆ ಅವನು ಮಾತ್ರ ತಣ್ಣಗೆ ಎಂಬಪೆಯ ಭುಜದ ಮೇಲೆ ಕೈಇಟ್ಟಿದ್ದ!