Site icon Vistara News

IPL 2023 : ಮಿಂಚಿದ ರಿಂಕು ಸಿಂಗ್​; ಚಾಂಪಿಯನ್​ ಗುಜರಾತ್ ವಿರುದ್ಧ ಕೆಕೆಆರ್​ ಬಳಗಕ್ಕೆ ರೋಚಕ ಗೆಲುವು

brilliant-rinku-singh-exciting-win-for-kkr-team-against-champions-gujarat

#image_title

ಅಹಮದಾಬಾದ್: ಚಾಂಪಿಯನ್​ ಗುಜರಾತ್​ ತಂಡದ ವಿರುದ್ಧದ ಗೆಲುವಿಗೆ ಕೊನೇ ಓವರ್​ನಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡಕ್ಕೆ 29 ರನ್​ ಬೇಕಾಗಿತ್ತು. ಕೆಕೆಆರ್​ ಬ್ಯಾಟರ್​ ರಿಂಕು ಸಿಂಗ್​ (ಅಜೇಯ 48 ರನ್​, 21 ಎಸೆತ, 6 ಸಿಕ್ಸರ್, 1 ಫೋರ್​) ಕೊನೇ ಐದು ಎಸೆತಗಳಲ್ಲಿ ಸಿಕ್ಸರ್​ ಸಿಡಿಸುವ ಮೂಲಕ 30 ರನ್​ ತಂದುಕೊಟ್ಟರು. ಅಲ್ಲದೆ, ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಒಟ್ಟು 31 ರನ್​ ಬಾರಿಸಿದ ಕೆಕೆಆರ್​ ತಂಡ ಮೂರು ವಿಕೆಟ್​ ರೋಚಕ ವಿಜಯ ದಾಖಲಿಸಿತು. ಇದು ಐಪಿಎಲ್​ ಇತಿಹಾಸದಲ್ಲಿಯೇ ಕೊನೇ ಓವರ್​ನಲ್ಲಿ ಚೇಸ್ ಮಾಡಿದ ಗರಿಷ್ಠ ಮೊತ್ತ. ಈ ಮೂಲಕ ಕೆಕೆಆರ್​ ತಂಡ ಸತತ ಎರಡನೇ ಗೆಲುವು ದಾಖಲಿಸಿತು. ಮಧ್ಯಮ ಕ್ರಮಾಂಕದಲ್ಲಿ ವೆಂಕಟೇಶ್​ ಅಯ್ಯರ್​ 83 ರನ್​ ಬಾರಿಸಿ ಗೆಲುವಿಗೆ ತಮ್ಮ ದೊಡ್ಡ ಕೊಡುಗೆಯನ್ನು ಕೊಟ್ಟರು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಭಾನುವಾರದ ಡಬಲ್ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್​ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 204 ಬಾರಿಸಿತು. ಗುರಿ ಬೆನ್ನಟ್ಟಿದ ಕೆಕೆಆರ್​ ಬಳಗ ಕೊನೇ ಎಸೆತದಲ್ಲಿ ಸಿಕ್ಸರ್​ ಬಾರಿಸುವುದರೊಂದಿಗೆ 7 ವಿಕೆಟ್​ ನಷ್ಟಕ್ಕೆ 207 ರನ್ ಬಾರಿಸಿ ಜಯಶಾಲಿಯಾಯಿತು. ಈ ಮೂಲಕ ಗುಜರಾತ್​ ತಂಡದ ವಿಜಯ್​ ಶಂಕರ್ 24 ಎಸೆತಗಳಲ್ಲಿ ಬಾರಿಸಿದ್ದ ಅಜೇಯ 63 ರನ್​ಗಳ ಸಾಧನೆ ಹಾಗೂ ರಶೀದ್ ಖಾನ್ ಅವರ ಹ್ಯಾಟ್ರಿಕ್​ ಸಾಧನೆ ಮಂಕಾಯಿತು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಉತ್ತಮ ಆರಂಭ ಪಡೆಯಲಿಲ್ಲ. ರಹ್ಮನುಲ್ಲಾ ಗುರ್ಬಜ್​ (15 ರನ್​), ಎನ್​ ಜಗದೀಶನ್​ (7 ರನ್​) ಬೇಗ ವಿಕೆಟ್​ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ರೂಪದಲ್ಲಿ ಆಡಲು ಅವಕಾಶ ಪಡೆದ ವೆಂಕಟೇಶ್​ ಅಯ್ಯರ್​ 40 ಎಸೆತಗಳಲ್ಲಿ 5 ಸಿಕ್ಸರ್​ ಹಾಗೂ 8 ಫೋರ್​ಗಳ ಸಮೇತ 83 ರನ್ ಬಾರಿಸಿದರು. ಜತೆಯಾದ ನಾಯಕ ನಿತೀಶ್​ ರಾಣಾ 29 ಎಸೆತಗಳಲ್ಲಿ 45 ರನ್​ ಬಾರಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ 100 ರನ್ ಬಾರಿಸಿ ಗೆಲುವಿನ ವಿಶ್ವಾಸ ಮೂಡಿಸಿತು. ಈ ಇಬ್ಬರ ವಿಕೆಟ್​ಗಳನ್ನು ವೇಗದ ಬೌಲರ್​ ಅಲ್ಜಾರಿ ಜೋಸೆಫ್​ ಕಿತ್ತರು. ಇದಾದ ಬಳಿಕ ಕೈ ಚಳಕ ತೋರಿದ ಹಂಗಾಮಿ ನಾಯಕ ರಶೀದ್ ಖಾನ್​ ಆ್ಯಂಡ್ರೆ ರಸೆಲ್​ (1), ಸುನೀಲ್​ ನರೈನ್​ (0) ಹಾಗೂ ಹಿಂದಿನ ಪಂದ್ಯದ ಹೀರೋ ಶಾರ್ದೂಲ್​ ಠಾಕೂರ್​ (0) ವಿಕೆಟ್​ ಕಿತ್ತು ಹ್ಯಾಟ್ರಿಕ್​ ಸಾಧನೆ ಮಾಡುವ ಜತೆಗೆ ಕೆಕೆಆರ್​ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಿದರು.

16.3 ಓವರ್​ಗಳಲ್ಲಿ 155 ರನ್​ ಬಾರಿಸಿ ಏಳು ವಿಕೆಟ್​ ಕಳೆದುಕೊಂಡು ಕೆಕೆಆರ್​ ತಂಡ ಸೋಲುವುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆ ಬಳಿಕ ನಡೆದ್ದು ಬ್ಯಾಟಿಂಗ್ ಅಬ್ಬರ. ಉಮೇಶ್​ ಯಾದವ್​ 6 ಎಸೆತಗಳಲ್ಲಿ 5 ರನ್​ ಗಳಿಸಿದರೆ ಅಲ್ಲಿಯವರೆಗೆ ನಿಧಾನಗತಿಯಲ್ಲಿ ಆಡುತ್ತಿದ್ದ ರಿಂಕು ಸಿಂಗ್ ಏಕಾಏಕಿ ಸ್ಫೋಟಿಸಿದರು. ಆರು ಸಿಕ್ಸರ್​ ಹಾಗೂ ಒಂದು ಫೋರ್​ ಸಮೇತ ಅಜೇಯ 48 ರನ್​ ಬಾರಿಸಿ ಜಯ ತಂದುಕೊಟ್ಟರು.

ವಿಜಯ್​ ಶಂಕರ್ ಸ್ಫೋಟಕ ಬ್ಯಾಟಿಂಗ್​

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಗುಜರಾತ್​ ತಂಡ ಸಾಯಿ ಸುದರ್ಶನ್(53) ಮತ್ತು ವಿಜಯ್​ ಶಂಕರ್ (​ಅಜೇಯ 63) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 204 ರನ್​ ಗಳಿಸಿತು. ಇನಿಂಗ್ಸ್​ ಆರಂಭಿಸಿದ ಗುಜರಾತ್​ ಪರ ಶುಭಮನ್​ ಗಿಲ್​​ ಮತ್ತು ವೃದ್ಧಿಮಾನ್​ ಸಾಹ ನಿಧಾನಗತಿಯ ಆಟವಾಡಿದರು. ಕಳೆದ ಪಂದ್ಯಗಳಲ್ಲಿ ತೋರಿದ ಬ್ಯಾಟಿಂಗ್​ ಅಬ್ಬರ ಈ ಪಂದ್ಯದಲ್ಲಿ ಕಂಡು ಬರಲಿಲ್ಲ. ಎಸೆತವೊಂದಕ್ಕೆ ರನ್​ ಗಳಿಸುತ್ತಾ ಸಾಗಿದರು. ಸಾಹ 17 ಎಸೆತಗಳಿಂದ 17 ರನ್​ ಗಳಿಸಿ ಸುನಿಲ್​ ನಾರಾಯಣ್​ಗೆ ವಿಕೆಟ್​ ಒಪ್ಪಿಸಿದರು. ಗಿಲ್​ 31 ಎಸೆತಗಳಿಂದ 5 ಬೌಂಡರಿ ಬಾರಿಸಿ 39 ರನ್​ಗೆ ಆಟ ಮುಗಿಸಿದರು. ಈ ವಿಕೆಟ್​ ಕೂಡ ನಾರಾಯಣ್ ಪಾಲಾಯಿತು. ಸಾಹಾ ಮತ್ತು ಗಿಲ್​ ಮೊದಲ ವಿಕೆಟ್​ಗೆ 33 ರನ್​ ಜತೆಯಾಟ ನಡೆಸಿತು.

ಇದನ್ನೂ ಓದಿ IPL 2023: ನಾಳೆ ಲಕ್ನೋ ಸೂಪರ್​ಜೈಂಟ್ಸ್​ vs ಆರ್‌ಸಿಬಿ ಕ್ರಿಕೆಟ್‌ ಮ್ಯಾಚ್‌; ನಕಲಿ ಟಿಕೆಟ್‌ ದಂಧೆಕೋರರ ಮೇಲೆ ಖಾಕಿ ಅಲರ್ಟ್‌

ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಸಾಯಿ ಸುದರ್ಶನ್​ ಅವರು ಕೆಕೆಆರ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಆಸರೆಯಾದರು. ಇದೇ ವೇಳೆ ಅವರು ಅರ್ಧಶತಕವನ್ನೂ ಪೂರ್ತಿಗೊಳಿಸಿದರು. ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ಅವರು ಆ ಬಳಿಕ ಸಿಡಿಯಲಾರಂಭಿಸಿದರು. ಅಭಿನವ್​ ಮನೋಹರ್​ ಅವರು ಸತತ ಬೌಂಡರಿ ಬಾರಿಸಿ ಅಪಾಯಾಕಾರಿಯಾಗುವ ಸೂಚನೆ ನೀಡಿದರೂ ಅವರ ಓಟ ಮೂರೇ ಬೌಂಡರಿಗೆ ಕೊನೆಗೊಂಡಿತು. 8 ಎಸೆತದಲ್ಲಿ 12 ರನ್​ಗಳ ಕೊಡುಗೆ ನೀಡಿದರು. 38 ಎಸೆತ ಎದುರಿಸಿದ ಸಾಯಿ ಸುದರ್ಶನ್ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್​ ನೆರವಿನಿಂದ 53 ರನ್​ ಗಳಿಸಿದರು.

ಅಂತಿಮ ಹಂತದಲ್ಲಿ ವಿಜಯ್​ ಶಂಕರ್​ ಸಿಡಿದು ನಿಂತ ಪರಿಣಾಮ ತಂಡ ಬೃಹತ್​ ಮೊತ್ತ ದಾಖಲಿಸಿತು. ಶಾರ್ದೂಲ್​ ಠಾಕೂರ್ ಅವರ ಅಂತಿಮ ಓವರ್​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಬಾರಿಸಿ ಮಿಂಚಿದರು. ಕೊನೆಯ 14 ಎಸೆತದಲ್ಲಿ ಗುಜರಾತ್​ಗೆ 50 ರನ್ ಹರಿದು ಬಂತು. ಕೇವಲ 21 ಎಸೆತಗಳಲ್ಲಿ ವಿಜಯ್​ ಶಂಕರ್​ ಅರ್ಧಶತಕ ಬಾರಿಸಿದರು. ಒಟ್ಟು 24 ಎಸೆತ ಎದುರಿಸಿದ ಅವರು ಬರೋಬ್ಬರಿ 5 ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ಸಿಡಿಸಿ ಅಜೇಯ 63 ರನ್​ ಬಾರಿಸಿದರು.

2 ಸಾವಿರ್​ ರನ್​ ಪೂರೈಸಿದ ಶುಭಮನ್​ ಗಿಲ್​

ಈ ಪಂದ್ಯದಲ್ಲಿ ಶುಭಮನ್​ ಗಿಲ್​ ಅವರು 23ರನ್​ ಗಳಿಸಿದ ವೇಳೆ ಐಪಿಎಲ್​ನಲ್ಲಿ 2 ಸಾವಿರ ರನ್​ ಪೂರ್ತಿಗೊಳಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಟೀಮ್​ ಇಂಡಿಯಾದ ಎರಡನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಪಂತ್​ ಅವರು 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್​ ಅವರು 23 ವರ್ಷ 214 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ಅತಿ ಕಡಿಮೆ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ಏಳನೇ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಗಿಲ್ ಈ ಮೇಲುಗಲ್ಲು ತಲುಪಲು 74 ಇನಿಂಗ್ಸ್​ ತೆಗೆದುಕೊಂಡರು. ಕೆ.ಎಲ್​. ರಾಹುಲ್​​ ಅವರು 60 ಇನಿಂಗ್ಸ್​ನಲ್ಲಿ 2 ಸಾವಿರ ರನ್​ ಪೂರೈಸಿ ಅಗ್ರ ಸ್ಥಾನ ಪಡೆದಿದ್ದಾರೆ. ಸಚಿನ್​ ತೆಂಡೂಲ್ಕರ್​ 63 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2023: ಸೋಲಿಗೆ ಬ್ಯಾಟಿಂಗ್​ ವೈಫಲ್ಯವೇ ಕಾರಣ; ಮುಂಬೈ ಕೋಚ್​ ಹೇಳಿಕೆ

ಖಾಯಂ ನಾಯಕ ಹಾರ್ದಿಕ್​ ಪಾಂಡ್ಯ ಅವರು ಅನಾರೋಗ್ಯದಿಂದ ಬಳಲಿದ ಕಾರಣ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ರಶೀದ್​ ಖಾನ್​ ತಂಡದ ನಾಯಕತ್ವ ವಹಿಸಿಕೊಂಡರು. ಪಾಂಡ್ಯ ಬದಲು ವಿಜಯ್​ ಶಂಕರ್​ ಅವರು ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಪಡೆದರು.

Exit mobile version