ಅಹಮದಾಬಾದ್: ಶುಭ್ಮನ್ ಗಿಲ್ (63 ರನ್) ಅರ್ಧ ಶತಕ ಹಾಗೂ ಬೌಲರ್ಗಳ ಸಂಘಟಿತ ಬೌಲಿಂಗ್ ದಾಳಿಯ ನೆರವು ಪಡೆದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2023ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ವಿಜಯ ಸಾಧಿಸಿತು. ಈ ಮೂಲಕ ಹಾಲಿ ಚಾಂಪಿಯನ್ ಗುಜರಾತ್ ಬಳಗ ಶುಭಾರಂಭ ಮಾಡಿದರೆ, ಧೋನಿ ನೇತೃತ್ವದ ಸಿಎಸ್ಕೆ ಆರಂಭಿಕ ಆಘಾತ ಎದುರಾಯಿತು. ಅದೇ ರೀತಿ ಸ್ಫೋಟಕ ಅರ್ಧ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್ (92 ರನ್, 50 ಎಸೆತ, 4 ಫೋರ್, 9 ಸಿಕ್ಸರ್) ಅವರ ಪರಿಶ್ರಮ ವ್ಯರ್ಥಗೊಂಡಿತು.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ ಜಯ ಸಾಧಿಸಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ಟೈಟನ್ಸ್ ತಂಡ 37 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಾಹ 25 ರನ್ ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸಾಯಿ ಸುದರ್ಶನ್ 22 ರನ್ ಬಾರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 8 ರನ್ಗೆ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆ ಉಂಟಾಯಿತು. ಆದರೆ, ಕೊನೇ ಹಂತದಲ್ಲಿ ವಿಜಯ್ ಶಂಕರ್ (27), ರಾಹುಲ್ ತೆವತಿಯಾ (15) ಹಾಗೂ ರಶೀದ್ ಖಾನ್ (10) ತಂಡವನ್ನು ಗೆಲ್ಲಿಸಿದರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಡೆವೋನ್ ಕಾನ್ವೆ 1 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಹಿನ್ನಡೆ ಉಂಟು ಮಾಡಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮೊಯೀನ್ ಅಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರೂ 23 ರನ್ಗಳಿಗೆ ಔಟಾದರು. ಹೀಗಾಗಿ ಸಿಎಸ್ಕೆ ತಂಡಕ್ಕೆ ಮತ್ತೆ ಹಿನ್ನಡೆ ಉಂಟಾಯಿತು.
ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಬೆನ್ಸ್ಟೋಕ್ಸ್ 7 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರಿಸಿದ ಗಾಯಕ್ವಾಡ್ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು ನಂತರವೂ ಬಿಡುಬೀಸಿನ ಬ್ಯಾಟಿಂಗ್ ನಡೆಸಿದರು. ಆದರೆ, ಅಲ್ಜಾರಿ ಜೋಸೆಫ್ ಎಸೆದ ಚಾಣಾಕ್ಷ ಬೌಲಿಂಗ್ಗೆ ಅವರು ಶುಭ್ಮನ್ ಗಿಲ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಗಾಯಕ್ವಾಡ್ ಹೊರತುಪಡಿಸಿ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಅಂಬಾಟಿ ರಾಯುಡು 12 ರನ್ಗೆ ಔಟಾದರೆ, ಶಿವಂ ದುಬೆ 19 ರನ್ ಕೊಡುಗೆ ಕೊಟ್ಟರು. ಮಹೇಂದ್ರ ಸಿಂಗ್ ಧೋನಿ 7 ಎಸೆತಗಳಿಗೆ 14 ರನ್ ಬಾರಿಸಿದರು.
ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ
ಕೋವಿಡ್ ನಂತರ ಮೊದಲ ಬಾರಿಗೆ ಅತ್ಯಂತ ವೈಭವದಿಂದ ನಡೆದ ಉದ್ಘಾಟನ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ(Tamannaah Bhatia) ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರೆ, ಅರಿಜಿತ್ ಸಿಂಗ್(arijit singh) ಅವರ ಅದ್ಭುತ ಕಂಠಕ್ಕೆ ದಾಖಲೆಯ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ತಲೆದೂಗಿದರು. ಇದೇ ವೇಳೆ ನಡೆಸಿದ ಲೇಸರ್ ಶೋ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿಸಿತು. ಆಸ್ಕರ್ ಪ್ರಶಸ್ತಿ ಗೆದ್ದ ಆರ್ಆರ್ಆರ್ ಸಿನೆಮಾದ ನಾಟು ನಾಟು ಹಾಡಿಗೆ ರಶ್ಮಿಕಾ ಕುಣಿದು ಕುಪ್ಪಳಿಸಿದರು.
ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟೀಮ್ ಇಂಡಿಯಾದ ಮಾಜಿ ಆಟಗಾರರಾದ ರವಿಶಾಸ್ತ್ರಿ, ಸುನೀಲ್ ಗವಾಸ್ಕರ್, ವಿದೇಶಿ ಮಾಜಿ ಆಟಗಾರರಾದ ಆರಾನ್ ಫಿಂಚ್, ಕೆವಿನ್ ಪೀಟರ್ಸನ್ ಸೇರಿ ಅನೇಕ ಕ್ರಿಕೆಟಿಗರು ಹಾಗೂ ಮತ್ತಿತರ ಬಿಸಿಸಿಐ ಅಧಿಕಾರಿಗಳು ಉಪಸ್ಥಿತರಿದ್ದರು.