ಚೆನ್ನೈ: ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 12 ರನ್ ವಿಜಯ ಸಾಧಿಸಿದೆ. ಇದರೊಂದಿಗೆ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಗೆಲುವು ಕಂಡಿತು. ಅಹಮದಾಬಾದ್ನಲ್ಲಿ ನಡೆದ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ತಂಡ ಗುಜರಾತ್ ಟೈಟನ್ಸ್ ತಂಡದ ವಿರುದ್ದ ಸೋಲು ಕಂಡಿತ್ತು. ಇದೇ ವೇಳೆ ಮೊದಲ ಪಂದ್ಯದಲ್ಲಿ ಡೆಲ್ಲಿಯನ್ನು ಬಗ್ಗು ಬಡಿದ ಖುಷಿಯಲ್ಲಿದ್ದ ಲಕ್ನೊ ತಂಡಕ್ಕೆ ನಿರಾಸೆ ಎದುರಾಯಿತು.
ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 217 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಲಕ್ನೊ ಸೂಪರ್ ಜಯಂಟ್ಸ್ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 207 ರನ್ ಬಾರಿಸಲು ಮಾತ್ರ ಶಕ್ತಗೊಂಡಿತು.
ದೊಡ್ಡ ಗುರಿ ಬೆನ್ನಟ್ಟಲು ಹೊರಟ ಲಕ್ನೊ ಸೂಪರ್ ಜಯಂಟ್ಸ್ ತಂಡ ಕೈಲ್ ಮೇಯರ್ಸ್ ಅವರ ಸ್ಫೋಟಕ ಅರ್ಧ ಶತಕ (53 ರನ್, 22 ಎಸೆತ, 8 ಪೋರ್, 2 ಸಿಕ್ಸರ್) ನೆರವಿನಿಂದ ಉತ್ತಮ ಆರಂಭ ಪಡೆಯಿತು. ಆದರೆ, ಆರಂಭಿಕ ಬ್ಯಾಟರ್ ಹಾಗೂ ನಾಯಕ ಕೆ. ಎಲ್ ರಾಹುಲ್ ದೊಡ್ಡ ಗುರಿಯನ್ನು ಬೆನ್ನಟ್ಟುವ ರೀತಿಯಲ್ಲಿ ಆಡಲಿಲ್ಲ. 18 ಎಸೆತಗಳಲ್ಲಿ 20 ರನ್ ಬಾರಿಸಿ ಔಟಾದರು. ಬಳಿಕ ಬಂದ ದೀಪಕ್ ಹೂಡಾ 2 ರನ್ಗೆ ವಿಕೆಟ್ ಒಪ್ಪಿಸಿದರೆ ಕೃಣಾಲ್ ಪಾಂಡ್ಯ 9 ರನ್ ಬಾರಿಸಿ ಪೆವಿಲಿಯನ್ಗೆ ಮರಳಿದರು. ಮಧ್ಯಮ ಕ್ರಮಾಂಕದಲ್ಲಿ ಮಾರ್ಕ್ ಸ್ಪೊಯ್ನಿಸ್ (21 ರನ್) ಬಾರಿಸಿದರೆ ವಿಕೆಟ್ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ 18 ಎಸೆತಗಳಿಗೆ 32 ರನ್ ಬಾರಿಸಿ ಗೆಲುವು ತಂದುಕೊಡುವ ಸೂಚನೆ ಕೊಟ್ಟರು. ಆದರಎ ಸಿಕ್ಸರ್ ಬಾರಿಸಲು ಹೋಗಿ ಅವರು ಔಟಾದರು.
ಕೊನೆಯಲ್ಲಿ ಆಯುಷ್ ಬದೋನಿ (23 ರನ್) ಹಾಗೂ ಕೃಷ್ಣಪ್ಪ ಗೌತಮ್ (17 ರನ್) ಗೆಲುವಿಗೆ ಪ್ರಯತ್ನಿಸಿದರೂ ಜಯ ತಂದುಕೊಡಲು ಅವರಿಗೆ ಸಾಧ್ಯವಾಗಲಿಲ್ಲ.
ಚೆನ್ನೈ ಬ್ಯಾಟಿಂಗ್ ಅಬ್ಬರ
ಅದಕ್ಕಿಂದ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಆರಂಭಿಕ ಬ್ಯಾಟರ್ಗಳಾದ ಋತುರಾಜ್ ಗಾಯಕ್ವಾಡ್ (57 ರನ್, 31 ಎಸೆತ, 3 ಫೋರ್, 4 ಸಿಕ್ಸರ್) ಅವರ ಅರ್ಧ ಶತಕ ಹಾಗೂ ಡೇವೋನ್ ಕಾನ್ವೆ (47 ರನ್, 29 ಎಸೆತ, 5 ಫೋರ್, 2 ಸಿಕ್ಸರ್) ಅವರ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಭರ್ಜರಿ ಮೊತ್ತ ಪೇರಿಸಿತು.
ಆರಂಭಿಕರಾಗಿ ಬ್ಯಾಟ್ ಮಾಡಲು ಬಂದ ಋತುರಾಜ್ ಹಾಗೂ ಕಾನ್ವೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಪವರ್ಪ್ಲೇ ಅವಧಿಯ ಮೊದಲ ಆರು ಓವರ್ಗಳಲ್ಲಿ 79 ರನ್ ಬಾರಿಸಿದರೆ 8.1 ಓವರ್ಗಳಲ್ಲಿ 100 ರನ್ ಕಲೆ ಹಾಕಿದರು. ಏತನ್ಮಧ್ಯೆ, ಋತುರಾಜ್ ಗಾಯಕ್ವಾಡ್ 28 ಎಸೆತಗಳಲ್ಲಿ 50 ಬಾರಿಸಿ ಹಾಲಿ ಆವೃತ್ತಿಯ ಐಪಿಎಲ್ನ ಎರಡನೇ ಅರ್ಧ ಶತಕ ಬಾರಿಸಿದರು. ಈ ವೇಳೆ ದಾಳಿಗೆ ಇಳಿದ ಸ್ಪಿನ್ನರ್ ರವಿ ಬಿಷ್ಣೋಯಿ ಗಾಯಕ್ವಾಡ್ ವಿಕೆಟ್ ಕಬಳಿಸಿದರು. ಆದಾಗ್ಯೂ ಈ ಜೋಡಿ ಮೊದಲ ವಿಕೆಟ್ಗೆ 110 ರನ್ಗಳನ್ನು ಬಾರಿಸಿ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿತು. ಇದಾದ ಬಳಿಕ ಡೆವೋನ್ ಕಾನ್ವೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ : IPL 2023 : ಭರ್ಜರಿ ಗೆಲುವಿನ ನಡುವೆಯೇ ಆರ್ಸಿಬಿಗೆ ಗಾಯದ ಆಘಾತ, ಪ್ರಮುಖ ಬೌಲರ್ ಔಟ್?
ಬಳಿಕ ಆಡಲು ಬಂದ ಶಿವಂ ದುಬೆ 27 ರನ್ಗಳನ್ನು ಬಾರಿಸಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ವಿಕೆಟ್ ಕೂಡ ಬಿಷ್ಣೋಯಿ ಪಾಲಾಯಿತು. ಆಲ್ರೌಂಡರ್ ಬೆನ್ ಸ್ಟೋಕ್ಸ್ 8 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಆದರೆ, ಮತ್ತೊಂದು ಬದಿಯಲ್ಲಿ ಅಂಬಾಟಿ ರಾಯುಡು ರನ್ ಗಳಿಕೆಗೆ ಇಂಬು ಕೊಟ್ಟು 27 ರನ್ ಬಾರಿಸಿ ಕೊನೇ ತನಕ ಔಟಾಗದೇ ಉಳಿದರು. ಆಲ್ರೌಂಡರ್ ರವೀಂದ್ರ ಜಡೇಜಾ 3 ರನ್ಗೆ ಔಟಾದರೆ, ನಾಯಕ ಮಹೇಂದ್ರ ಸಿಂಗ್ ಧೋನಿ 3 ಎಸೆತಗಳಲ್ಲಿ 12 ರನ್ ಬಾರಿಸಿದರು. ಕ್ರೀಸ್ಗೆ ಬಂದ ಅವರು ಮೊದಲ ಎರಡು ಎಸೆತಗಳಲ್ಲಿ ಭರ್ಜರಿ ಎರಡು ಸಿಕ್ಸರ್ ಬಾರಿಸಿದರು.