ಬೆಂಗಳೂರು: ಡೆವೋನ್ ಕಾನ್ವೆ (83) ಹಾಗೂ ಶಿವಂ ದುಬೆ (53) ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 227 ರನ್ಗಳ ಗೆಲುವಿನ ಗುರಿಯನ್ನು ಒಡ್ಡಿದೆ. ಆರಂಭದಿಂದಲೇ ಬಿರುಸಿನಿಂದ ಬ್ಯಾಟಿಂಗ್ ಮಾಡಿದ ಚೆನ್ನೈ ಬಳಗ ಬೃಹತ್ ಮೊತ್ತವನ್ನು ಪೇರಿಸಿತು. ಈ ಮೂಲಕ ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ನಿಲ್ಲಿಸುವ ಆರ್ಸಿಬಿ ಯೋಜನೆಯನ್ನು ಚೆನ್ನೈ ಬ್ಯಾಟರ್ಗಳು ಬುಡಮೇಲು ಮಾಡಿದರು.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ಧೋನಿ ಬಳಗ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಪೇರಿಸಿತು.
ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಋತುರಾಜ್ ಗಾಯಕ್ವಾಡ್ (3 ರನ್) ವಿಕೆಟ್ ಪತನಗೊಳ್ಳುವ ಮೂಲಕ ಆರಂಭಿಕ ಹಿನ್ನಡೆ ಅನುಭವಿಸಿತು. ಆದರೆ, ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಡೇವೋನ್ ಕಾನ್ವೆ ರನ್ ಗಳಿಕೆಗೆ ವೇಗ ಕೊಟ್ಟರು. ಅಜಿಂಕ್ಯ ರಹಾನೆಯೂ ಅವರಿಗೆ ಉತ್ತಮ ಸಾಥ್ ಕೊಟ್ಟರು. 20 ಎಸೆತಗಳಲ್ಲಿ 37 ರನ್ ಬಾರಿಸಿದ ರಹಾನೆ ವಾನಿಂದು ಹಸರಂಗಗೆ ವಿಕೆಟ್ ಒಪ್ಪಿಸಿದರು. ಬಳಿಕ ಆಡಲು ಬಂದ ಶಿವಂ ದುಬೆ ಬೌಂಡರಿ, ಸಿಕ್ಸರ್ಗಳ ಮೂಲಕ 25 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಅದಕ್ಕಿಂದ ಮೊದಲು ಡೇವೋನ್ ಕಾನ್ವೆ 32 ಎಸೆತಗಳಲ್ಲಿ 50 ರನ್ ಗಳಿಸಿದರು.
ಅಂತಿಮ ಹಂತದಲ್ಲಿ ಅಂಬಾಟಿ ರಾಯುಡು (14 ರನ್), ಮೊಯೀನ್ ಅಲಿ (19 ರನ್), ರವೀಂದ್ರ ಜಡೇಜಾ (10 ರನ್) ನೆರವಿನಿಂದ ಚೆನ್ನೈ ದೊಡ್ಡ ಮೊತ್ತ ಪೇರಿಸಿತು. ಆರ್ಸಿಬಿ ಪರ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ 30 ರನ್ ನೀಡಿ 1 ವಿಕೆಟ್ ಪಡೆದರೆ, ವೇಯ್ನ್ ಪಾರ್ನೆಲ್ , ವೈಶಾಖ್ ವಿಜಯ್ಕುಮಾರ್, ಗ್ಲೆನ್ ಮ್ಯಾಕ್ಸ್ವೆಲ್, ವಾನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು.