ಅಹಮದಾಬಾದ್: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2023ನೇ ಆವೃತ್ತಿಯ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಇದು ಐದನೇ ಟ್ರೋಫಿ. ಅಂತೆಯೇ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡರು. ರೋಹಿತ್ ಶರ್ಮಾ ಐದು ಟ್ರೋಫಿಗಳನ್ನು ಗೆದ್ದುಕೊಟ್ಟರೆ, ಮಹೇಂದ್ರ ಸಿಂಗ್ ಧೋನಿ ಕೂಡ ಅಷ್ಟೇ ಟ್ರೋಫಿಯನ್ನು ಗೆದ್ದ ಸಾಧನೆ ಮಾಡಿದರು.
ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐದು ವಿಕೆಟ್ಗಳಿಂದ ಸೋಲಿಸಿದ ಸಿಎಸ್ಕೆ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು. ಏತನ್ಮಧ್ಯೆ, ಕಳೆದ ಆವೃತ್ತಿಯ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಕ್ಕೆ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಈ ಮೂಲಕ ಹಾರ್ದಿಕ್ ಪಾಂಡ್ಯ ಬಳಗ ನಿರಾಸೆ ಎದುರಾಸಿತು.
𝗗𝗢 𝗡𝗢𝗧 𝗠𝗜𝗦𝗦!
— IndianPremierLeague (@IPL) May 29, 2023
Two shots of excellence and composure!
Finishing in style, the Ravindra Jadeja way 🙌#TATAIPL | #Final | #CSKvGT pic.twitter.com/EbJPBGGGFu
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟ ಮಾಡಿಕೊಂಡು 214 ರನ್ ಬಾರಿಸಿತು. ಈ ವೇಳೆ ಮಳೆ ಸುರಿದ ಕಾರಣ ಮೂರು ಗಂಟೆಗಳ ಕಾಲ ಪಂದ್ಯ ಸ್ಥಗಿತಗೊಂಡಿತು. ಬಳಿಕ ಚೆನ್ನೈ ತಂಡಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್ಗಳಲ್ಲಿ 171 ರನ್ ಬಾರಿಸಿ ಗೆಲುವು ಸಾಧಿಸುವ ಗುರಿ ನೀಡಲಾಯಿತು. ಅಂತೆಯೇ ಸಿಎಸ್ಕೆ ತಂಡ ಕೊನೇ ಎಸೆತಕ್ಕೆ ಫೋರ್ ಬಾರಿಸುವ ಮೂಲಕ ಗೆಲುವು ಸಾಧಿಸಿತು. ಈ ಬಾರಿಯ ಐಪಿಎಲ್ನಲ್ಲಿ ಹಲವಾರು ಲಾಸ್ಟ್ ಬಾಲ್ ಥ್ರಿಲ್ ಪಂದ್ಯಗಳು ನಡೆದವು. ಅಂತೆಯೇ ಫೈನಲ್ ಪಂದ್ಯವೂ ಲಾಸ್ಟ್ ಬಾಲ್ ಥ್ರಿಲ್ನೊಂದಿಗೆ ಮುಕ್ತಾಯಗೊಂಡಿತು. ರವೀಂದ್ರ ಜಡೇಜಾ ಕೊನೇ ಎಸೆತದಲ್ಲಿ ಫೋರ್ ಬಾರಿಸುವ ಗೆಲುವು ತಂದುಕೊಟ್ಟರು.
90 ಎಸೆತಗಳಿಗೆ 171 ರನ್ ಬಾರಿಸುವ ಗುರಿ ಪಡೆದ ಚೆನ್ನೈ ತಂಡ ಉತ್ತಮವಾಗಿಯೇ ಆಡಿತು. ಮೊದಲ ವಿಕೆಟ್ಗೆ 74 ರನ್ ಬಾರಿಸಿ ಉತ್ತಮ ಆರಂಭ ಪಡೆಯಿತು. ಡೇವೋನ್ ಕಾನ್ವೆ (47) ಹಾಗೂ ಋತುರಾಜ್ ಗಾಯಕ್ವಾಡ್ (26) ಔಟಾಗುವ ಮೂಲಕ ಹಿನ್ನಡೆ ಅನುಭವಿಸಿತಾದರೂ ಬಳಿಕ ಶಿವಂ ದುಬೆ (ಅಜೇಯ 32), ಅಜಿಂಕ್ಯ ರಹಾನೆ (27) ಹಾಗೂ ಅಂಬಾಟಿ ರಾಯುಡು (19) ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಅಂತಿಮವಾಗಿ ಜಡೇಜಾ 6 ಎಸೆತಕ್ಕೆ 15 ರನ್ ಬಾರಿಸಿ ಗೆಲುವು ತಂದಕೊಟ್ಟರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಸಾಯಿ ಸುದರ್ಶನ್ (96 ರನ್, 47 ಎಸೆತ, 8 ಫೋರ್, 6 ಸಿಕ್ಸರ್) ಹಾಗೂ ವೃದ್ಧಿಮಾನ್ ಸಾಹ (54), ಬಾರಿಸಿದ ಅರ್ಧ ಶತಕಗಳ ನೆರವು ಪಡೆದು 214 ರನ್ ಗಳಿಸಿತು.
ಬ್ಯಾಟಿಂಗ್ ಆರಂಭಿಸಿದ ಗುಜರಾತ್ ತಂಡ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಆರಂಭಿಸಿತು. ಶುಭ್ಮನ್ ಗಿಲ್ (20 ಎಸೆತ 39 ರನ್) ಹಾಗೂ ವೃದ್ಧಿಮಾನ್ ಸಾಹ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಮೊದಲ ವಿಕೆಟ್ಗೆ 7 ಓವರ್ಗಳಿಗೆ 66 ರನ್ ಬಾರಿಸಿತು. ಏಳನೇ ಓವರ್ನ ಕೊನೇ ಎಸೆತಕ್ಕೆ ಧೋನಿ ಮಾಡಿದ ಕ್ಷಿಪ್ರ ಸ್ಟಂಪ್ ಮೂಲಕ ಗಿಲ್ ಔಟಾದರು. ಈ ಮೂಲಕ ಅವರ ಮತ್ತೊಂದು ಶತಕ ಬಾರಿಸುವ ನಿರೀಕ್ಷೆ ಸುಳ್ಳಾಯಿತು. ಹಾಲಿ ಆವೃತ್ತಿಯಲ್ಲಿ ಅವರ ಒಟ್ಟು ಸ್ಕೋರ್ 890 ರನ್ಗಳು. ಅಲ್ಲದೆ 2016ರಲ್ಲಿ ವಿರಾಟ್ ಕೊಹ್ಲಿ ಬಾರಿಸಿದ್ದ 973 ರನ್ಗಳ ದಾಖಲೆ ಹಾಗೆಯೇ ಉಳಿಯಿತು.
ಇದನ್ನೂ ಓದಿ : MS Dhoni : ಗಿಲ್ ಸ್ಟಂಪ್ ಮಾಡುವುದರೊಂದಿಗೆ ಹೊಸ ದಾಖಲೆ ಸೃಷ್ಟಿಸಿದ ಮಹೇಂದ್ರ ಸಿಂಗ್ ಧೋನಿ
ಗಿಲ್ ವಿಕೆಟ್ ಪತನಗೊಂಡ ಬಳಿಕ ಆಡಲು ಬಂದ ಸಾಯಿ ಸುದರ್ಶನ್ ತಮ್ಮ ಎಂದಿನ ಶೈಲಿಯಲ್ಲೇ ರನ್ ಗಳಿಸಿದರು. ಏತನ್ಮಧ್ಯೆ, ವೃದ್ಧಿಮಾನ್ ಸಾಹ 36 ಎಸೆತಕ್ಕೆ ಅರ್ಧ ಶತಕ ಪೂರೈಸಿದರು. ಆದರೆ, 14ನೇ ಓವರ್ನ ಕೊನೇ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಮುಂದಾದ ಸಾಹ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಸಾಹ ಔಟಾಗುತ್ತಿದ್ದಂತೆ ಸಾಯಿ ಸುದರ್ಶನ್ ರನ್ ಗಳಿಕೆ ವೇಗ ಹೆಚ್ಚಿಸಿದರು. ಅವರು ಸತತವಾಗಿ ಬೌಂಡರಿ ಸಿಕ್ಸರ್ಗಳ ಮೂಲಕ 34 ಎಸೆತದಲ್ಲಿ ತಮ್ಮ ಅರ್ಧ ಶತಕ ಪೂರೈಸಿದರು. ಆ ಬಳಿಕವೂ ಅವರು ಸತತವಾಗ ಬೌಂಡರಿ ಸಿಕ್ಸರ್ಗಳನ್ನು ಬಾರಿಸಿ ಚೆನ್ನೈ ಬೌಲರ್ಗಳನ್ನು ಬೆಂಡೆತ್ತಿದರು. ಆದರೆ, 19ನೇ ಓವರ್ ಮೂರನೇ ಎಸೆತಕ್ಕೆ ಎಲ್ಬಿಡಬ್ಲ್ಯು ಆಗುವ ಮೂಲಕ ಶತಕದಿಂದ ವಂಚಿತರಾದರು.
ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಕ್ಕೆ 21 ರನ್ ಬಾರಿಸಿದರು. ಚೆನ್ನೈ ಪರ ಬೌಲಿಂಗ್ನಲ್ಲಿ ಮಹೀಶ್ ಪತಿರಾಣಾ 44 ರನ್ ನೀಡಿ 2 ವಿಕೆಟ್ ಉರುಳಿಸಿದರು. ರವೀಂದ್ರ ಜಡೇಜಾ ಮತ್ತು ದೀಪಕ್ ಚಾಹರ್ ತಲಾ ಒಂದು ವಿಕೆಟ್ ಕಬಳಿಸಿದರು.