ಚೆನ್ನೈ: ಶಿವಂ ದುಬೆಯ (48) ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 61ನೇ ಪಂದ್ಯದಲ್ಲಿ 144 ರನ್ ಬಾರಿಸಿದೆ. ಈ ಮೂಲಕ ಎದುರಾಳಿ ಕೋಲ್ಕೊತಾ ನೈಟ್ ರೈಡರ್ಸ್ ತಂಡಕ್ಕೆ 145 ರನ್ಗಳ ಗೆಲುವಿನ ಸವಾಲು ಎದುರಾಗಿದೆ.
ಇಲ್ಲಿನ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 144 ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಋತುರಾಜ್ ಗಾಯಕ್ವಾಡ್ 18 ರನ್ಗಳಿಗೆ ಔಟಾದರು. ಮತ್ತೊಂದು ಬದಿಯಲ್ಲಿ ಉತ್ತಮವಾಗಿ ಆಡಿದ ಡೇವೋನ್ ಕಾನ್ವೆ 28 ಎಸೆತಗಳಿಗೆ 30 ರನ್ ಬಾರಿಸಿದರು. ನಂತರ ಆಡಲು ಬಂದ ಅಜಿಂಕ್ಯ ರಹಾನೆ 11 ಎಸೆತಗಳಿಗೆ 16 ರನ್ ಬಾರಿಸಿ ಔಟಾದರು. ಅಂಬಾಟಿ ರಾಯುಡು ಮತ್ತೆ ಬ್ಯಾಟಿಂಗ್ ವೈಫಲ್ಯ ಕಾಣುವ ಮೂಲಕ 4 ರನ್ಗಳಿಗೆ ಸೀಮಿತಗೊಂಡರು.
ಇದನ್ನೂ ಓದಿ : IPL 2023 : 49ಕ್ಕೆ ಶರಣಾದ 59; ಆರ್ಸಿಬಿ ವಿರುದ್ಧ ಕನಿಷ್ಠ ಮೊತ್ತಕ್ಕೆ ಆಲೌಔಟ್ ಆದ ಆರ್ಆರ್ ತಂಡ ಫುಲ್ ಟ್ರೋಲ್
ಮತ್ತೆ ಸ್ಫೋಟಿಸಿದ ಶಿವಂ ದುಬೆ
ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ ಮತ್ತೊಂದು ಬಾರಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅಂಬಾಟಿ ರಾಯುಡು ಔಟಾಗುತ್ತಿದ್ದಂತೆ ಕಣಕ್ಕೆ ಇಳಿದ ಅವರು ಮತ್ತೊಂದು ಬಾರಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 34 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಫೋರ್ಗಳ ಸಮೇತ 48 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೊನೇ ಓವರ್ನಲ್ಲಿ ಅವರಿಗೆ ಚೆಂಡು ಎದುರಿಸಲು ಅವಕಾಶ ಸಿಗಲಿಲ್ಲ. ಇಲ್ಲದಿದ್ದರೆ ಅವರಿಗೆ ಅರ್ಧ ಶತಕ ಬಾರಿಸುವ ಅವಕಾಶ ಸಿಗುತ್ತಿತ್ತು.
ಶಿವಂ ದುಬೆಗೆ ನೆರವು ನೀಡಿದ ಆಲ್ರೌಂಡರ್ ರವೀಂದ್ರ ಜಡೇಜಾ 24 ಎಸೆತಗಳಲ್ಲಿ 20 ಬಾರಿಸಿದರು. ಜಡೇಜಾ ಹಾಗೂ ದುಬೆ 6ನೇ ವಿಕೆಟ್ಗೆ 68 ರನ್ ಬಾರಿಸಿದರು. ಇವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಸಿಎಸ್ಕೆ ತಂಡಕ್ಕೆ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.