Site icon Vistara News

Chess Prodigy | ಎದುರಾಳಿಯೇ ಇಲ್ಲ ಎಂದು ಎದೆ ತಟ್ಟಿಕೊಂಡವನ ಹಣೆಯ ಮೇಲೆ ಸೋಲಿನ ಷರಾ ಬರೆದ ಬಾಲಕ!

praggnanandhaa

ಬಾಲಕೃಷ್ಣ ಎಂ ನಾಯ್ಕ, ಚಿಕ್ಕೊಳ್ಳಿ

2013ರಿಂದ ವಿಶ್ವ ಚೆಸ್ ಚಾಂಪಿಯನ್ ಆಗಿ ಮೆರೆಯುತ್ತಿರುವ ನಾರ್ವೆ ದೇಶದ ಮಗ್ನಸ್ ಕಾರ್ಲ್‌ಸನ್ ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಇಯಾನ್ ನೇಪೊಮ್ನಸಿ ವಿರುದ್ಧ ಅನಾಯಾಸವಾಗಿ ಗೆದ್ದು “I don’t have a lot to gain, I don’t perticularly like it, and although I am sure a match would be interesting for historical reasons I don’t have any inclination to play, I will simply not play the match ಎಂದು ಬಿಟ್ಟ. ಇವನ ಮಾತು ಕೇಳಿ ಒಂದು ಕ್ಷಣ ಚೆಸ್ ಜಗತ್ತು ದಂಗಾಗಿತ್ತು. 2013ರಿಂದ ವಿಶ್ವ ಚಾಂಪಿಯನ್ ಆಗಿ ಮೆರೆದವನ ಬಾಯಿಯಿಂದ ಬಂದ ಈ ಮಾತನ್ನು ಹಲವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಸತತ ಗೆಲುವು ಅವನನ್ನು ಹೀಗೆ ಮಾತಾಡಿಸಿತ್ತೇನೊ. ತಾನು ವಿಶ್ವ ಚಾಂಪಿಯನ್, ನನ್ನನ್ನು ಸೋಲಿಸುವವರು ಯಾರೂ ಇಲ್ಲ ಎಂಬ ಅಹಂ ಅವನ ತಲೆಗೇರಿದಂತಿತ್ತು.

ಆದರೆ ನಂತರ ನಡೆದದ್ದೆ ಬೇರೆ. ನಮ್ಮ ದೇಶದ 17 ವರ್ಷದ ಚೆನ್ನೈನ ಪುಟ್ಟ ಪೋರ ರಮೇಶ ಬಾಬು ಪ್ರಜ್ಞಾನಂದ ಕಳೆದ 6 ತಿಂಗಳಲ್ಲಿ ಸತತ ಮೂರು ಬಾರಿ ಸೋಲಿನ ರುಚಿ ತೋರಿಸಿ ಸತತ ಗೆಲುವಿನ ಮತ್ತಿನಲ್ಲಿರುವ ಕಾರ್ಲ್‌ಸನ್‌ಗೆ ಮದ್ದರೆದಿದ್ದಾನೆ. ನನಗೆ ಸರಿಯಾದ, ಪ್ರಬಲ ಎದುರಾಳಿಯಿಲ್ಲ, ಇಲ್ಲಿ ಮತ್ತೆ ಸಾಧಿಸುವುದೇನೂ ಉಳಿದಿಲ್ಲ. ಆಡಲು ಹುಮ್ಮಸ್ಸು ಕೂಡಾ ಬರುತ್ತಿಲ್ಲ. ಮತ್ತೆ ಪಂದ್ಯ ಆಡಲಾರೆ ಎಂದವನ ವಿಶ್ವ ಚಾಂಪಿಯನ್ ಪಟ್ಟಕ್ಕೆ ಈಗ ಈ ಬಾಲಕ ಸಂಚಕಾರ ತಂದಿದ್ದಾನೆ.

ಮಗ್ನಸ್‌ ಕಾರ್ಲ್‌ಸನ್

ಕಳೆದ ಫೆಬ್ರವರಿಯಲ್ಲಿ ನಡೆದ Online Airthing Masters Rapid tournament ಮತ್ತು ಮೇ ತಿಂಗಳಲ್ಲಿ ನಡೆದ Chessable Masters Online Rapid tournamentನಲ್ಲಿ ಪ್ರಜ್ಞಾನಂದ ವಿರುದ್ಧ ಆತ ಸೋತಿದ್ದಾನೆ. ಪ್ರಗ್ ಎಂದೇ ಕರೆಯಲ್ಪಡುವ ಪುಟ್ಟ ಪೋರ ಕಾರ್ಲ್‌ಸನ್‌ಗೆ ಯಾವ ರೀತಿ ದಿಗಿಲು ಮೂಡಿಸಿದ್ದಾನೆ ಎಂದರೆ, ಎದುರಾಳಿ ಎದುರು ನಗುತ್ತಲೆ ಕಾಯಿ ಚಲಾಯಿಸುವವ, ಈ ಪೋರನೆದುರು ಆಡುವಾಗ ಸೋತು ಬಸವಳಿದು ಹೋಗಿದ್ದಾನೆ. ತಲೆಮೇಲೆ ಕೈ ಇಟ್ಟುಕೊಂಡು ಚಡಪಡಿಸುತಿದ್ದ. ಕೈ ಹಿಚುಕಿಕೊಳ್ಳುತ್ತಿದ್ದ. ತೀರಾ ಒತ್ತಡಕ್ಕೊಳಗಾಗುತ್ತಿದ್ದ. ಮೊನ್ನೆ FTX ಕ್ರಿಪ್ಟೋ ಕಪ್‌ನಲ್ಲಿ ಸೋತ ನಂತರ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ನಂತರ ಮಾತನಾಡುತ್ತಾ “I was feeling very terrible today, didn’t get enough sleep, it’s really kind of embarrassing to lose the last three games” ಎಂದು ಗದ್ಗದಿತನಾಗಿದ್ದ. ವಿಶ್ವ ಚಾಂಪಿಯನ್ ಆಗಿ ಮೆರೆದ 31 ವ‌ರ್ಷದ ಕಾರ್ಲ್‌ಸನ್ ಪುಟ್ಟ ಬಾಲಕನೆದುರು ತಲೆ ತಗ್ಗಿಸಿ ನಿಲ್ಲುವಂತಾಯ್ತು. ಕಾರ್ಲ್‌ಸನ್‌ರನ್ನು ಸೋಲಿಸಿದ ಪ್ರಗ್ ಮೂರನೇ ಭಾರತೀಯನಾಗಿದ್ದಾನೆ. (ಉಳಿದಿಬ್ಬರು ವಿಶ್ವನಾಥನ್ ಆನಂದ್‌ ಮತ್ತು ಪೆಂಟಾಲಾ ಹರಿಕೃಷ್ಣ). ಇದನ್ನು ಕಾರ್ಲ್‌ಸನ್ ಅಷ್ಟೇ ಅಲ್ಲ. ಯಾರಿಗೂ ಒಮ್ಮೆಲೆ ನಂಬಲು ಸಾಧ್ಯವಾಗಲಿಲ್ಲ. ಆದರೆ ನಂಬಲೇಬೇಕು. ಕಾರಣ ಪ್ರಜ್ಞಾನಂದ ಒಂದು ಅದ್ಭುತ ಪ್ರತಿಭೆ.

ಹಾಗಂತ ಕಾರ್ಲ್‌ಸನ್ ಕೂಡ ಅಂತಿಂಥ ಆಸಾಮಿಯಲ್ಲ. ಚೆಸ್ ಜಗತ್ತಿನಲ್ಲಿ ಆತನದ್ದು ದೊಡ್ಡ ಹೆಸರು. ವಿಶ್ವ ಚಾಂಪಿಯನ್ ಪಟ್ಟಕೇರಿದ್ದ ವಿಶ್ವನಾಥನ್ ಆನಂದ್‌ ಅವರನ್ನು 2013ರಲ್ಲಿ ಸೋಲಿಸಿ ಮೊದಲ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದ. ನಂತರ ಮತ್ತೊಮ್ಮೆ ವಿಶ್ವನಾಥನ್ ಆನಂದ್‌, ಸೆರಗೆ ಕರಿಯಾಕೊ, ಪಾಬಿಯಾನೋ ಕರಾನಾ, ಇತ್ತೀಚೆಗೆ ಇಯಾನ್ ನೇಪೊಮ್ನಸಿಯನ್ನು ಸೋಲಿಸಿ ಸತತ 5 ಬಾರಿ ವಿಶ್ವ ಚಾಂಪಿಯನ್ ಆಗಿ ದಶಕಗಳ ಕಾಲ ಚೆಸ್ ಜಗತ್ತಿನಲ್ಲಿ ಏಕಚಕ್ರಾಧಿಪತಿಯಾಗಿ ಮೆರೆದಿದ್ದ. ಮೂರು ಬಾರಿ ವರ್ಲ್ಡ್ ರ್ಯಾಪಿಡ್ ಚೆಸ್ ಚಾಪಿಯನ್‌ಶಿಪ್, 5 ಬಾರಿ ವರ್ಲ್ಡ್‌ ಬ್ಲಿಟ್ಜ್ ಚೆಸ್ ಚಾಂಪಿಯನ್ ಶಿಪ್ ಗೆದ್ದು ಬೀಗಿದ್ದ. ಆದರೆ ಈಗ ಪ್ರಗ್ ಇವನನ್ನು ಸರಣಿ ಸೋಲಿನ ಪ್ರಪಾತಕ್ಕೆ ತಳ್ಳಿದ್ದಾನೆ.

ಸೋಲು ಎಂದರೆ ಆಗದ ಕಾರ್ಲ್‌ಸನ್‌ಗೆ ಇದರಿಂದ ಆಘಾತವಾಗಿದೆ. ಅದಕ್ಕಾಗಿಯೆ ಹೇಳುವುದು ಕ್ರೀಡೆ ಯಾವತ್ತೂ ನಿಂತ ನೀರಲ್ಲ, ಅದು ರೌದ್ರವಾಗಿ ಹರಿಯುವ ನದಿಯಿದ್ದಂತೆ. ಚಿಕ್ಕ ಹಳ್ಳ ತೊರೆಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುತ್ತ ರಭಸವಾಗಿ ಹರಿಯುತ್ತಲೇ ಹೋಗುತ್ತದೆ. ಆಗಾಗ ತನ್ನ ಪಾತ್ರವನ್ನು ಬದಲಿಸುತ್ತದೆ. ಹಾಗೆಯೇ ತನಗೆ ಬಲಿಷ್ಠ ಎದುರಾಳಿಯಿಲ್ಲ ಎಂದ ಕಾರ್ಲ್‌ಸನ್‌ಗೆ ಎದುರಾಳಿ ಸಿಕ್ಕಿದ್ದಾನೆ. ಆಟದಲ್ಲಿ ಹೊಸ ಹುಮ್ಮಸ್ಸು ತಂದಿದ್ದಾನೆ. ಚೆಸ್‌ನಲ್ಲಿ ಇನ್ನೂ ನಾನು ಸಾಧಿಸಬೇಕಾದದ್ದು ಏನೂ ಇಲ್ಲ ಎಂದವನು ಈಗ ತನ್ನ ಸತತ ಮೂರು ಸೋಲಿಗೆ ಪ್ರತ್ಯುತ್ತರ ನೀಡಬೇಕಾಗಿದೆ.

ಪ್ರಗ್ ನಮಗೆ ದೊರಕಿದ ಅನರ್ಘ್ಯ ರತ್ನ. ತನ್ನ ಹನ್ನೆರಡನೆ ವಯಸ್ಸಿಗೆ ಗ್ರ್ಯಾಂಡ್‌ ಮಾಸ್ಟರ್ ಆಗಿದ್ದಾನೆ. 10ನೇ ವಯಸ್ಸಿಗೆ ಇಂಟರ್‌ನ್ಯಾಷನಲ್ ಗ್ರ್ಯಾಂಡ್‌ ಮಾಸ್ಟರ್ ಆದ ಅತಿ ಕಿರಿಯನೆಂಬ ಹೆಗ್ಗಳಿಕೆ ಈತನದ್ದು. ಚೆನ್ನೈನ ಮಧ್ಯಮ ವರ್ಗದ ಕುಟುಂಬದಲ್ಲಿ 2005ರಲ್ಲಿ ಜನಿಸಿದ ಪ್ರಗ್‌ನ ತಂದೆ ರಮೇಶ್‌ ಬಾಬು ಬ್ಯಾಂಕ್ ನೌಕರ. ತಾಯಿ ನಾಗಲಕ್ಷ್ಮಿ ಗೃಹಿಣಿ. ಚಿಕ್ಕಂದಿನಿಂದಲೆ ಪೋಲಿಯೋ ವಕ್ಕರಿಸಿದ ಕಾರಣ ತಂದೆ ರಮೇಶ್‌ ಬಾಬುಗೆ ನಡೆಯುವುದು ಕಷ್ಟ. ಮಗನ ಯಾವುದೇ ಚೆಸ್ ಪಂದ್ಯಾವಳಿ ನೇರವಾಗಿ ವೀಕ್ಷಿಸಲು ಆಗದ ಕಾರಣ ಮಗನ ಆಟವನ್ನು ಟಿವಿಯಲ್ಲಿಯೆ ನೋಡಿ ಖುಷಿಪಡುತ್ತಾರಂತೆ. ಅಕ್ಕ ವೈಶಾಲಿ ಕೂಡ ಚೆಸ್ ಆಟಗಾರ್ತಿಯಾಗಿದ್ದು, ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಆಗಿದ್ದಾಳೆ.

ತಂದೆಯಂತೆ ಹಣೆಯ ಮೇಲೆ ಎದ್ದು ಕಾಣುವಂತೆ ಬಿಳಿಯ ತಿಲಕವಿಟ್ಟುಕೊಳ್ಳುವ ಪ್ರಗ್ ವಯಸ್ಸಿನಲ್ಲಿ ಕಿರಿಯನಾದರೂ ತುಂಬಾ ಪ್ರಬುದ್ಧ ಸ್ಪೋಟ್ಸ್೯ಮನ್. ಬಹಳ ಸರಳವಾದ ಜೀವನ ಪದ್ಧತಿಯನ್ನು ಅಳವಡಿಸಿಕೊಂಡಿರುವ ಪ್ರಗ್ ದಿನಕ್ಕೆ ಕನಿಷ್ಠ ನಾಲ್ಕು ತಾಸು ಚೆಸ್‌ನಲ್ಲಿ ತೊಡಗಿರುತ್ತಾನಂತೆ. ಈತನಿಗೆ ಪಿಜಾ ಸೇರಲ್ಲ. ಅನ್ನ, ಸಾಂಬಾರ್‌ ಇದ್ದರೆ ಸಾಕು. ಸೋಷಿಯಲ್ ಮೀಡಿಯಾದಿಂದ ಬಲು ದೂರ. ತಾನು ಎರಡು ವಷ೯ದವನಿರುವಾಗಲೇ ಅಕ್ಕ ವೈಶಾಲಿ ಚೆಸ್ ಆಡುವುದನ್ನು ಕಣ್ಣರಳಿಸಿ ನೋಡುತ್ತಾ ಚದುರಂಗದ ಹುಚ್ಚಿಗೆ ಬಿದ್ದಿದ್ದ. ಜನಪ್ರಿಯ ಕೋಚ್ ಗ್ರ್ಯಾಂಡ್‌ ಮಾಸ್ಟರ್ ಆರ್ ಬಿ ರಮೇಶ್‌ ಗರಡಿಯಲ್ಲಿ ಪಳಗಿದವ.

ಈಗಾಗಲೆ ಮಗ್ನಸ್ ಕಾರ್ಲ್‌ಸನ್, 6ನೇ ಶ್ರೇಯಾಂಕದ ಲಿವೋನ್ ಅರೋನಿಯನ್, ದಿಗ್ಗಜ ಆಟಗಾರರಾದ ಅಲಿರೇಜಾ ಪೀರೋಜಜಾ, ಹನ್ಸ್ ನಿಮೋನ್, ಅನೀಸ್ ಗಿರಿ ಸೇರಿ ಹಲವರನ್ನು ಸೋಲಿಸಿದ ಪ್ರಗ್‌ಗೆ ಈಗಿನ್ನೂ 17 ವಷ೯ ಅಷ್ಟೇ. ಅಪಾರ ಪ್ರತಿಭೆ ಹೊಂದಿರುವ ಈತ ಚೆಸ್ ಜಗತ್ತಿನಲ್ಲಿ ವಿಜೃಂಭಿಸುವುದು ಇನ್ನೂ ಸಾಕಷ್ಟಿದೆ. ಈತನ ಈವರೆಗಿನ ಸಾಧನೆ ಜಸ್ಟ್ ಟ್ರೇಲರ್ ಅಷ್ಟೇ, ಪಿಕ್ಚರ್ ಅಭೀ ಬಾಕಿ ಹೈ! ಏನಂತೀರಿ?


ಪ್ರಿಯ ಓದುಗರೇ,
ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆ, ನಾಗರಿಕ ಸಮಸ್ಯೆ ಇತ್ಯಾದಿ ಸಂಗತಿಗಳನ್ನು ಹೇಳಿಕೊಳ್ಳಲು ‘ವಿಸ್ತಾರʼದಲ್ಲಿ ನಿಮಗೆ ಮುಕ್ತ ಅವಕಾಶ ಇದೆ. ಸಾಂದರ್ಭಿಕ ಲೇಖನಗಳನ್ನೂ ನೀವು ಬರೆದು ಕಳುಹಿಸಬಹುದು. ಬರಹದ ಜತೆ ನಿಮ್ಮದೊಂದು ಫೋಟೊ ಕೂಡ ಇರಲಿ.
ನಮ್ಮ ಇಮೇಲ್‌ ವಿಳಾಸ: janasamparka@vistaranews.com

Exit mobile version