ಸಿನ್ಸಿನಾಟಿ: ಸಿನ್ಸಿನಾಟಿ ಓಪನ್ ಟೆನಿಸ್(ATP Cincinnati Open) ಪಂದ್ಯಾವಳಿಯ ಪುರುಷರ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ, ಇಟಲಿಯ ಜಾನಿಕ್ ಸಿನ್ನರ್(Jannik Sinner) ಅಮೆರಿಕದ ಫ್ರಾನ್ಸೆಸ್ ಥಿಯಾಫೊ(Frances Tiafoe) ವಿರುದ್ಧ 7-6 (7/4), 6-2ರ ನೇರ ಸೆಟ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಬಲ್ಗೇರಿಯಾದ ಅರಿನಾ ಸಬಲೆಂಕಾ(Aryna Sabalenka) ಅಮೆರಿಕದ ಜೆಸ್ಸಿಕಾ ಪೆಗುಲಾ(Jessica Pegula) ಅವರನ್ನು ಹಿಮ್ಮೆಟ್ಟಿಸಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಪುರುಷರ ಫೈನಲ್ನ ಮೊದಲ ಸೆಟ್ ಟ್ರೈ ಬ್ರೇಕರ್ ತನಕ ಸಾಗಿ ಫಲಿತಾಂಸ ಕಂಡಿತು. ದ್ವಿತೀಯ ಸೆಟ್ ಕೂಡ ಒಂದು ಹಂತದ ತನಕ ತೀವ್ರ ಪೈಪೋಟಿಯಿಂದ ಸಾಗಿದರೂ ಕೂಡ ಜಾನಿಕ್ ಸಿನ್ನರ್ ಅವರ ಬಲಿಷ್ಠ ಹೊಡೆತಗಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಅಮೆರಿಕದ 26 ವರ್ಷ ವಯಸ್ಸಿನ ಫ್ರಾನ್ಸೆಸ್ ಥಿಯಾಫೊ ಸೋಲು ಕಂಡರು. ಉಭಯ ಆಟಗಾರರಿಗೂ ಇದು ಟೂರ್ನಿಯ ಚೊಚ್ಚಲ ಫೈನಲ್ ಪಂದ್ಯವಾಗಿತ್ತು. ಸೆಮಿಫೈನಲ್‌ನಲ್ಲಿ ಜಾನಿಕ್ ಸಿನ್ನರ್ 7-6 (9), 5-7, 7-6 (4) ಅಂತರದಿಂದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಮಣಿಸಿದಾಗಲೇ ಈ ಬಾರಿ ಚಾಂಪಿಯನ್ ಆಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಂತೆ ಅವರು ಟ್ರೋಫಿಯನ್ನು ಗೆದ್ದಿದ್ದಾರೆ.
ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ
ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ 2008ರ ಬಳಿಕ ಸಿನ್ಸಿನಾಟಿ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೆ ಸಿನ್ನರ್ ಪಾತ್ರವಾದರು. 16 ವರ್ಷಗಳ ಹಿಂದೆ 21 ವರ್ಷ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಚಾಂಪಿಯನ್ ಆಗಿ ದಾಖಲೆ ಬರೆದಿದ್ದಾರೆ. ಸಿನ್ನರ್ ಪ್ರಸ್ತುತ ಟೆನಿಸ್ ಋತುವಿನಲ್ಲಿ ಗೆದ್ದ ಐದನೇ ಟ್ರೋಫಿ ಇದಾಗಿದೆ. ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಓಪನ್ ಕಿರೀಟದೊಂದಿಗೆ ಅವರು ತಮ್ಮ ಋತುವನ್ನು ಪ್ರಾರಂಭಿಸಿದ್ದರು. ಒಟ್ಟಾರೆಯಾಗಿ ಅವರ ಟೆನಿಸ್ ವೃತ್ತಿಜೀವನದಲ್ಲಿ ಗೆದ್ದ 15ನೇ ಪ್ರಶಸ್ತಿಯಾಗಿದೆ.
ಇದನ್ನೂ ಓದಿ Garbine Muguruza: ಟೆನಿಸ್ಗೆ ವಿದಾಯ ಹೇಳಿದ ಮಾಜಿ ವಿಶ್ವ ನಂ.1 ಆಟಗಾರ್ತಿ ಮುಗುರುಜಾ
ಚೊಚ್ಚಲ ಪ್ರಶಸ್ತಿ ಗೆದ್ದ ಸಬಲೆಂಕಾ
ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸಬಲೆಂಕಾ 6-3, 7-5 ನೇರ ಸೆಟ್ಗಳ ಅಂತರದಿಂದ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು ಹಿಮ್ಮೆಟ್ಟಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದರು. 26 ವರ್ಷದ ಸಬಲೆಂಕಾ ಸಿನ್ಸಿನಾಟಿ ಓಪನ್‌ನಲ್ಲಿ ಇದೇ ಮೊದಲ ಬಾರಿ ಫೈನಲ್ ತಲುಪಿದ್ದರು. ಈ ಹಿಂದೆ ಆಡಿದ್ದ ಮೂರು ಬಾರಿ ಸೆಮಿಫೈನಲ್ ಪ್ರವೇಶಿಸುವ ಹಾದಿಯಲ್ಲಿ ಸೋಲು ಕಂಡಿದ್ದರು. ಈ ಬಾರಿ ಟೂರ್ನಿಯಲ್ಲಿ ಒಂದೇ ಒಂದು ಸೆಟ್ ಕಳೆದುಕೊಳ್ಳದೆ ಪ್ರಶಸ್ತಿಯನ್ನು ಗೆದ್ದುಕೊಂಡ ಹಿರಿಮೆಗೆ ಪಾತ್ರರಾದರು.
ಸಬಲೆಂಕಾ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದ್ದರು. ಫೈನಲ್ನಲ್ಲಿಯೂ ಇದೇ ಜೋಶ್ನಲ್ಲಿ ಆಡಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭುಜದ ಗಾಯದ ಕಾರಣಕ್ಕಾಗಿ ಸಬಲೆಂಕಾ ವಿಂಬಲ್ಡನ್‌ನಿಂದ ಹೊರಗುಳಿದಿದ್ದರು. ಇದೀಗ ಸಿನ್ಸಿನಾಟಿ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಗ್ರೇಟ್ ಕಮ್ಬ್ಯಾಕ್ ಮಾಡಿದ್ದಾರೆ.