ಮುಂಬೈ: ಮುಂಬೈನ ಬ್ರಬೊರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಗೆಲುವು ಸಾಧಿಸಿದೆ. ಸಿಎಸ್ಕೆ ಆರಂಭಿಕ ಬ್ಯಾಟ್ಸ್ ಮನ್ ಋತುರಾಜ್ ಗಾಯಕ್ವಾಡ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ರಾಬಿನ್ ಉತ್ತಪ್ಪ 27ಬಾಲ್ಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು.
ರಾಬಿನ್ ಉತ್ತಪ್ಪಗೆ ಸಾಥ್ ನೀಡಿದ ಮೋಯಿನ್ ಅಲಿ 35 ರನ್ ಗಳಿಸಿ ಔಟಾದರು. ಶಿವಂ ದುಬೆ ರೋಚಕ 49 ರನ್ ಗಳಿಸುವ ಮೂಲಕ ಸಿಎಸ್ಕೆ ತಂಡಕ್ಕೆ ಆಸರೆಯಾದರು.
ಆರಂಭದಿಂದಲೇ ಮಿಂಚಿನ ಆಟವಾಡಿದ ಸಿಎಸ್ಕೆ ಬ್ಯಾಟ್ಸ್ಮನ್ಗಳು 20 ಓವರ್ಗಳಲ್ಲಿ 210 ರನ್ ಪೇರಿಸಿದರು. ಲಖನೌ ಬೌಲರ್ಗಳಾದ ಅವೇಶ್ ಖಾನ್, ಆಂಡ್ರ್ಯೂ ಟೈ ಹಾಗೂ ರವಿ ಬಿಶ್ನೋಯ್ ತಲಾ 2 ವಿಕೆಟ್ ಪಡೆದು ಮಿಂಚಿದರು.
211 ರನ್ಗಳ ಗುರಿ ಬೆನ್ನತ್ತಿದ ಲಖನೌ ಬ್ಯಾಟ್ಸ್ಮನ್ಗಳು ಆರಂಭದಿದಲೇ ಉತ್ತಮ ಬ್ಯಾಟಿಂಗ್ ಮಾಡಿದರು. ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡೆಕಾಕ್ 99 ರನ್ಗಳ ಸ್ಫೋಟಕ ಜೊತೆಯಾಟ ಆಡಿದರು. ಕೆ.ಎಲ್.ರಾಹುಲ್ 40 ರನ್ ಗಳಿಸಿದರೆ, ಕ್ವಿಂಟನ್ ಡೆ ಕಾಕ್ 61 ರನ್ ಗಳಿಸಿ ಔಟಾದರು. ನಂತರ ಬ್ಯಾಟಿಂಗ್ ಮಾಡಿದ ಎವಿನ್ ಲೆವಿಸ್ ಅಜೇಯ 55 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಆಯುಷ್ ಬದೋನಿ ತಮ್ಮ ಮಿಂಚಿನ ಬ್ಯಾಟಿಂಗ್ ಶೈಲಿಯಿಂದ ಎಲ್ಲರ ಗಮನ ಸೆಳೆದರು.
ಅತ್ಯುತ್ತಮ ಬ್ಯಾಂಟಿಗ್ ಪ್ರದರ್ಶಿಸಿ ಲಖನೌ ಸೂಪರ್ ಜೈಂಟ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ತನ್ನ ಮೊದಲನೇ ಗೆಲುವು ಸಾಧಿಸಿದೆ. 55 ರನ್ ಗಳಿಸಿದ ಎವಿನ್ ಲೆವಿಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.