ಗ್ರಾಸ್ ಐಲೆಟ್ (ಸೇಂಟ್ ಲೂಸಿಯ): ಸೋಮವಾರ ರಾತ್ರಿ ನಡೆದ ಹಾಲಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8(IND vs AUS Super 8) ಪಂದ್ಯದಲ್ಲಿ ರೋಹಿತ್ ಶರ್ಮ(Rohit Sharma) ಸಾರಥ್ಯದ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು(IND vs AUS) 24 ರನ್ಗಳಿಂದ ಬಗ್ಗುಬಡಿದು ಸೆಮಿಫೈನಲ್ ಪ್ರವೇಶಿಸಿತ್ತು. ಭಾರತ ತಂಡದ ಗೆಲುವಿನ ಬಳಿಕ ದೆಹಲಿ ಪೊಲೀಸರು ಮಾಡಿರುವ ಟ್ವೀಟ್ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(viral news) ಆಗಿದೆ.
ಡ್ಯಾರೆನ್ ಶಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರ ಸಿಡಿಲಬ್ಬರದ ಬ್ಯಾಟಿಂಗ್ ಸಾಹಸದ ನೆರವಿನಿಂದ 5 ವಿಕೆಟಿಗೆ 205 ರನ್ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಆಸೀಸ್ ಟ್ರಾವಿಸ್ ಹೆಡ್(76) ಅರ್ಧಶತಕದ ಹೊರತಾಗಿಯೂ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ಸೋಲು ಕಂಡಿತು. ಕಳೆದ ವರ್ಷ ನೆಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನು ಭಾರತ ಇಲ್ಲಿ ತೀರಿಸಿಕೊಂಡಿತು.
ಭಾರತ ತಂಡ ಗೆದ್ದ ಬಳಿಕ ದೆಹಲಿ ಪೊಲೀಸರು ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ‘ದಿಸ್ ಜಸ್ಟ್ ಇನ್: ಕೆರಿಬಿಯನ್‌ನಲ್ಲಿ ನಡೆದ ‘ಹಿಟ್-ಅಂಡ್-ರನ್’ ಘಟನೆಯಲ್ಲಿ, ಟೀಮ್ ಇಂಡಿಯಾದ 11 ಆಟಗಾರರು ಒಂದು ಶತಕೋಟಿ ಹೃದಯಗಳನ್ನು ‘ಕಳ್ಳತನ’ ಮಾಡಿದ್ದಾರೆ. ಆರಂಭಿಕ ತನಿಖೆಯು 19/11ರ ಪ್ರತೀಕಾರದ ಉದ್ದೇಶವನ್ನು ತೋರಿಸುತ್ತದೆ’ ಎಂದು ಹಾಸ್ಯಸ್ಪದವಾಗಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
ರೋಹಿತ್ 41 ಎಸೆತಗಳಲ್ಲಿ 92 ರನ್ ಬಾರಿಸಿ ಟಿ20 ವಿಶ್ವಕಪ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅದರಲ್ಲೂ ಸ್ಟಾರ್ಕ್ ಅವರ 3ನೇ ಓವರ್‌ನಲ್ಲಿ ಬರೋಬ್ಬರಿ 29 ರನ್ ಚಚ್ಚಿದರು. ರೋಹಿತ್ ತಮ್ಮ 92 ರನ್ನುಗಳ ಸೊಗಸಾದ ಬ್ಯಾಟಿಂಗ್ ವೇಳೆ 8 ಸಿಕ್ಸರ್ ಮತ್ತು 7 ಬೌಂಡರಿ ಹೊಡೆದರು.
ಇದನ್ನೂ ಓದಿ AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್ ಆಟಗಾರರಿಗೆ ಸಲಹೆ ನೀಡಿದ ಕೋಚ್; ವಿಡಿಯೊ ವೈರಲ್
ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯ ಗೆದ್ದ ನಾಯಕ ಎಂಬ ಹಿರಿಮೆಗೆ ರೋಹಿತ್ ಪಾತ್ರರಾಗಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ 60 ಪಂದ್ಯಗಳನ್ನು ಆಡಿ 48 ಪಂದ್ಯಗಳನ್ನು ಗೆದ್ದಿದೆ. ಬಾಬರ್ ಅಜಂ ಕೂಡ ನಾಯಕನಾಗಿ 48 ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ, 85 ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಜೂನ್ 27 ರಂದು ಗಯಾನಾದಲ್ಲಿ ನಡೆಯುವ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಮೊದಲ ಸೆಮಿಫೈನಲ್ ನಾಳೆ(ಬುಧವಾರ) ನಡೆಯಲಿದ್ದು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ಮುಖಾಮುಖಿಯಾಗಲಿವೆ.