Site icon Vistara News

IND Vs ENG: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಗೆಲುವು; ಭಾರತಕ್ಕೆ ಸರಣಿ

cricket

cricket

ರಾಂಚಿ: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ (IND Vs ENG) ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ಬಳಗವು 5 ವಿಕೆಟ್‌ ಗೆಲುವು ಸಾಧಿಸಿದೆ. ರಾಂಚಿಯ ಜೆಎಸ್​ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಭಾರತ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಸಮರ್ಥ ಪ್ರದರ್ಶನ ತೋರಿದ ಭಾರತ ತಂಡವು ಒಂದು ದಿನ ಬಾಕಿ ಇರುವಂತೆಯೇ ಗೆಲುವನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ಮೂರನೇ ದಿನವಾದ ಭಾನುವಾರ ಆಂಗ್ಲರು ಕೇವಲ 145 ರನ್​ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾಕ್ಕೆ ಗೆಲ್ಲಲು 192 ರನ್​ಗಳ ಟಾರ್ಗೆಟ್ ನೀಡಿದ್ದರು. ಗುರಿ ಬೆನ್ನಟ್ಟಲು ಶುರು ಮಾಡಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು. 24 ರನ್‌ ಗಳಿಸಿದ್ದ ರೋಹಿತ್ ಶರ್ಮಾ ಹಾಗೂ 16 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಇಂದು (ನಾಲ್ಕನೇ ದಿನ) ಬ್ಯಾಟಿಂಗ್ ಆರಂಭಿಸಿದ್ದರು. 5 ವಿಕೆಟ್‌ ನಷ್ಟಕ್ಕೆ ಭಾರತ ಗೆಲುವಿನ ದಡ ಮುಟ್ಟಿತು.

ರೋಹಿತ್‌ ಶರ್ಮಾ ಭರ್ಜರಿ ಬ್ಯಾಟಿಂಗ್‌

ನಾಯಕನ ಆಟ ಪ್ರದರ್ಶಿಸಿದ ರೋಹಿತ್‌ ಶರ್ಮಾ 55 ರನ್‌ ಗಳಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ಗಳಿಸಿ ವಿಕೆಟ್‌ ಒಪ್ಪಿಸಿದ್ದ ಅವರು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಬ್ಯಾಟ್‌ ಬೀಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಮಧ್ಯೆ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದರು. ಹಿರಿಯ ಆರಂಭಿಕ ಆಟಗಾರ ದೀರ್ಘ ಸ್ವರೂಪದ ಕ್ರಿಕೆಟ್​ನಲ್ಲಿ 4,000 ರನ್ ಗಳಿಸಿದ್ದಾರೆ. ಈ ಮೂಲಕ ಅವರು ಈ ಸಾಧನೆ ಮಾಡಿದ ಇಂಡಿಯಾದ 17 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗೆಲುವಿನ ದಡ ಮುಟ್ಟಿಸಿದ ಯುವ ಆಟಗಾರರು

ಈ ಗೆಲುವಿಗೆ ಯುವ ಆಟಗಾರರರಾದ ವಿಕೆಟ್ ಕೀಪರ್ ಬ್ಯಾಟರ್​​ ಧ್ರುವ್ ಜುರೆಲ್ ಮತ್ತು ಶುಬ್ಮನ್ ಗಿಲ್ ಗಣನೀಯ ಕೊಡುಗೆ ನೀಡಿದರು. ಒಂದು ಕಡೆ ವಿಕೆಟ್‌ ಬೀಳುತ್ತಿದ್ದರೂ ಈ ಜೋಡಿ ಎಚ್ಚರಿಕೆಯಿಂದ ಆಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿತು. ಜುರೆಲ್ 39 ರನ್‌ ಗಳಿಸಿದರೆ ಗಿಲ್ ಕೊಡುಗೆ 52 ರನ್‌. ಇಂದು ರೋಹಿತ್‌ ಶರ್ಮಾ (55), ಯಶಸ್ವಿ ಜೈಸ್ವಾಲ್‌ (37) ಉತ್ತಮ ಕೊಡುಗೆ ನೀಡಿದ್ದರೂ ರಜತ್‌ ಪಾಟಿದಾರ್‌ (0), ರವೀಂದ್ರ ಜಡೇಜಾ (4) ಮತ್ತು ಸರ್ಫರಾಜ್‌ ಖಾನ್‌ (0) ಎಡವಿದ್ದರು. ಈ ಹಿನ್ನಲೆಯಲ್ಲಿ ಜವಾಬ್ದಾರಿಯನ್ನು ಹೊತ್ತುಕೊಂಡ ಜುರೆಲ್‌ ಮತ್ತು ಗಿಲ್‌ ಗೆಲುವಿನ ಜತೆಯಾಟ ನಿಭಾಯಿಸಿದರು.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌: 353 ರನ್‌
ಭಾರತ ಮೊದಲ ಇನ್ನಿಂಗ್ಸ್‌: 307 ರನ್‌
ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌: 145 ರನ್‌
ಭಾರತ ದ್ವಿತೀಯ ಇನ್ನಿಂಗ್ಸ್‌: 192 ರನ್‌

ಇದನ್ನೂ ಓದಿ: R Ashwin : ನಥಾನ್​ ಲಿಯಾನ್​ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

Exit mobile version