ನವದೆಹಲಿ: ವೆಸ್ಟ್ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ತಂಡವು ಭಾರತಕ್ಕೆ ಆಗಮಿಸುತ್ತಿದೆ. ಏರ್ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಭಾರತ ತಂಡದ (Team India) ಆಟಗಾರರು ದೆಹಲಿಗೆ ಆಗಮಿಸುತ್ತಿದ್ದು, ಈ ಫ್ಲೈಟ್‌ಅನ್ನು ಹೆಚ್ಚಿನ ಜನ ಟ್ರ್ಯಾಕ್ ಮಾಡುತ್ತಿರುವುದು ಕೂಡ ಒಂದು ದಾಖಲೆಯಾಗಿದೆ. ಸದ್ಯದ ಮಟ್ಟಿಗೆ ಅತಿ ಹೆಚ್ಚು ಜನ ಫ್ಲೈಟ್‌ರೆಡಾರ್24.ನಲ್ಲಿ (Flightradar24.) ಏರ್ ಇಂಡಿಯಾ ವಿಶೇಷ ವಿಮಾನವನ್ನೇ ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಟಿ-20 ವಿಶ್ವಕಪ್‌ನಲ್ಲಿ ಪರಾಕ್ರಮ ಮೆರೆದು, ಚಾಂಪಿಯನ್ ಎನಿಸಿರುವ ಭಾರತ ತಂಡದ ಆಟಗಾರರು ಗುರುವಾರ ಬೆಳಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಆನ್‌ಲೈನ್ ಮೂಲಕ ಈ ಫ್ಲೈಟ್‌ಅನ್ನು ಅಂದರೆ, ಫ್ಲೈಟ್‌ರೆಡಾರ್24. ಮೂಲಕ ಟ್ರ್ಯಾಕ್ ಮಾಡಲಾಗುತ್ತಿದೆ. ಫ್ಲೈಟ್‌ರೆಡಾರ್24. ವರದಿ ಪ್ರಕಾರ, ಸರಿ ಸುಮಾರು 5,252 ಜನರು ಫ್ಲೈಟ್‌ರೆಡಾರ್24.ನಲ್ಲಿ ಏರ್ ಇಂಡಿಯಾ ವಿಶೇಷ ವಿಮಾನವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಇದು ಅತಿ ಹೆಚ್ಚು ಜನ ಟ್ರ್ಯಾಕ್ ಮಾಡುತ್ತಿರುವ ಫ್ಲೈಟ್ ಆಗಿದೆ ಫ್ಲೈಟ್‌ರೆಡಾರ್24. ತಿಳಿಸಿದೆ.
ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಭಾರತಕ್ಕೆ ಮರಳುತ್ತಿದೆ. ದೆಹಲಿಗೆ ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಬರಲಿರುವ ಭಾರತ ತಂಡದ ಆಟಗಾರರು 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬೆಳಗ್ಗಿನ ತಿಂಡಿ ಸವಿಯಲಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿಯೇ ಭಾರತ ಕ್ರಿಕೆಟ್ ತಂಡದ ಆಟಗಾರರನ್ನು ಭೇಟಿಯಾಗಿ, ಅವರ ಜತೆ ತಿಂಡಿ ತಿನ್ನಲಿದ್ದಾರೆ. ಇದೇ ವೇಳೆ ಆಟಗಾರರಿಗೆ ಮೋದಿ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.
ವಿಜಯಯಾತ್ರೆಗೆ ಸಕಲ ಸಿದ್ಧತೆ
ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಿಗೆ ಮುಂಬೈನಲ್ಲಿ ಗುರುವಾರ ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಇದಕ್ಕೂ ಮೊದಲು ಅಂದರೆ, ಸಂಜೆ 4 ಗಂಟೆಗೆ ಮರೀನ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಬರಲಿದ್ದಾರೆ. ವಿಕ್ಟರಿ ಪರೇಡ್‌ನಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲರೂ ಬನ್ನಿ ಎಂಬುದಾಗಿ ರೋಹಿತ್ ಶರ್ಮಾ ಅವರು ಈಗಾಗಲೇ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ: Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್ ಶರ್ಮಾ