ಹೈದರಾಬಾದ್ : ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನ ಅಂತ್ಯವಾಗಿದೆ ಎಂಬುದಾಗಿ ಮಲಿಕ್ ಆಪ್ತರೊಬ್ಬರು ಖಾತರಿಪಡಿಸಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಈ ಮೂಲಕ ಕ್ರೀಡಾ ಜಗತ್ತಿನ ಸ್ಟಾರ್ ದಂಪತಿಗಳು ಬೇರ್ಪಡುವುದು ಖಚಿತವಾಗಿದ್ದು, ಗಡಿಗಳನ್ನು ಮೀರಿದ ಸಂಬಂಧ ಮುರಿದು ಬಿದ್ದಿದೆ.
ಸಾನಿಯಾ ಮಿರ್ಜಾ ಅವರು ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದು ಮಾಡಿದ್ದರು. ಅದರಲ್ಲಿ ಅವರು ‘ಕಷ್ಟದ ದಿನಗಳಲ್ಲಿ ನನಗೆ ದೊರೆತ ಅಮೂಲ್ಯ ಕ್ಷಣಗಳು’ ಎಂಬುದಾಗಿ ನಿಗೂಢ ಬರಹ ದಾಖಲಿಸಿದ್ದರು. ಅಲ್ಲಿಗೆ ಸಾನಿಯಾ- ಮಲಿಕ್ ದಾಂಪತ್ಯದಲ್ಲಿ ಒಡಕಿದೆ ಎಂಬುದಾಗಿ ಸುದ್ದಿಗಳು ಹರಿದಾಡಿದ್ದವು. ಅದರೆ, ಸಾನಿಯಾ ಮಿರ್ಜಾ ಆಗಲಿ, ಶೋಯೆಬ್ ಮಲಿಕ್ ಆಗಲಿ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಇದೀಗ ಶೋಯೆಬ್ ಅವರ ತಂಡದ ಮ್ಯಾನೇಜರ್ ಹಾಗೂ ಅವರ ಆತ್ಮೀಯ ಗೆಳೆಯರೊಬ್ಬರು ಜೋಡಿ ಬೇರ್ಪಟ್ಟಿರುವ ವಿಷಯವನ್ನು ಖಚಿತಪಡಿಸಿದ್ದಾರೆ.
“ಹೌದು, ಸಾನಿಯಾ ಹಾಗೂ ಶೋಯೆಬ್ ಮಲಿಕ್ ಅವರು ಅಧಿಕೃತವಾಗಿ ವಿಚ್ಚೇಧನ ಪಡೆದುಕೊಂಡಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.
ಸಾನಿಯಾ ಮತ್ತು ಶೋಯೆಬ್ ಮಲಿಕ್ ೨೦೧೦ರಲ್ಲಿ ಹೈದಾರಾಬಾದ್‌ನಲ್ಲಿ ಮುಸ್ಲಿಮ್ ಸಂಪ್ರದಾಯದಂತೆ ಮದುವೆಯಾಗಿದ್ದರು. ೧೨ ವರ್ಷಗಳ ಅವರ ದಾಂಪತ್ಯದಲ್ಲಿ ಇಜ್‌ಹಾನ್ ಮಿರ್ಜಾ ಮಲಿಕ್ ಎಂಬ ಪುತ್ರ ಜನಿಸಿದ್ದಾನೆ. ಆದರೆ, ಶೋಯೆಬ್ ಅವರು ಇತ್ತೀಚಿನ ದಿನಗಳಲ್ಲಿ ಸಾನಿಯಾಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಟಿವಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಅವರು ನಟಿ ಹಾಗೂ ಮಾಡೆಲ್ ಆಯೇಷಾ ಒಮರ್ ಜತೆ ಸಂಬಂಧ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಅವರಿಬ್ಬರು ಈಜುಕೊಳದಲ್ಲಿ ತೆಗೆಸಿಕೊಂಡಿದ್ದ ರೊಮ್ಯಾಂಟಿಕ್ ಪೋಟೊ ವೈರಲ್ ಆಗಿತ್ತು.
ಇದನ್ನೂ ಓದಿ | ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು? – ಪತಿ ಶೋಯೆಬ್ರಿಂದ ದೂರವಾಗುವ ಮುನ್ಸೂಚನೆಯಾ ಈ ಇನ್ಸ್ಟಾ ಪೋಸ್ಟ್?