Site icon Vistara News

Sara Tendulkar: ತಮ್ಮ ಹೆಸರಿನ ಪರೋಡಿ ಖಾತೆ ಮುಚ್ಚಲು ಎಕ್ಸ್‌ಗೆ ಸಾರಾ ತೆಂಡುಲ್ಕರ್ ಆಗ್ರಹ!

sara tendulkar

ಬೆಂಗಳೂರು: ತನ್ನ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಅಣಕು (Parody) ಖಾತೆಯನ್ನು ಕ್ಲೋಸ್‌ ಮಾಡುವಂತೆ ಸೋಶಿಯಲ್‌ ಮೀಡಿಯಾ ಎಕ್ಸ್‌ಗೆ ಸಾರಾ ತೆಂಡುಲ್ಕರ್‌ (Sara Tendulkar) ಮನವಿ ಮಾಡಿದ್ದಾರೆ. ಹಾಗೇ ಡೀಪ್‌ಫೇಕ್‌ (Deepfake) ಫೋಟೋಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸಾರಾ ತೆಂಡುಲ್ಕರ್‌ ಅವರ ಹೆಸರು ಕ್ರಿಕೆಟರ್‌ ಶುಭಮನ್‌ ಗಿಲ್‌ (Shubhman Gill) ಜತೆಯಲ್ಲಿ ಮತ್ತೆ ಮತ್ತೆ ಕೇಳಿಬಂದಿತ್ತು. ಅವರು ಗಿಲ್‌ ಜೊತೆಗಿರುವಂತೆ ತಿರುಚಲಾದ ಫೋಟೋ ಕೂಡ ವೈರಲ್‌ ಆಗಿತ್ತು. ಸ್ವತಃ ಸಾರಾ ಅವರು ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದು, ಅಲ್ಲಿ ತಮ್ಮ ಲೇಟೆಸ್ಟ್‌ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಆದರೆ ಗಿಲ್‌ ಜತೆಗೆ ತಮ್ಮ ಲಿಂಕ್‌ ಹೊಂದಿರುವ ಯಾವುದೇ ಫೋಟೋ ಅಥವಾ ಪೋಸ್ಟ್‌ ಅಪ್‌ಲೋಡ್‌ ಮಾಡಿಲ್ಲ.

sara tendulkar2

ತಮ್ಮ ಹೆಸರಿನ ಅಣಕು ಎಕ್ಸ್‌ ಖಾತೆಯ ಬಗ್ಗೆ ಅಸಮಾಧಾನಗೊಂಡಿರುವ ಸಾರಾ, ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಬರೆದುಕೊಂಡಿರುವುದು ಹೀಗೆ:

ʼʼಸೋಶಿಯಲ್‌ ಮೀಡಿಯಾ ನಮಗೆಲ್ಲರಿಗೂ ನಮ್ಮ ಸಂತಸ, ದುಃಖ ಹಾಗೂ ದಿನಚರಿಯನ್ನು ಹಂಚಿಕೊಳ್ಳಲು ಅದ್ಭುತ ಜಾಗ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ, ತಂತ್ರಜ್ಞಾನದ ದುರ್ಬಳಕೆಯು ವಿಷಾದಗೊಳಿಸುವಂಥದು. ಯಾಕೆಂದರೆ ಇದು ಇಂಟರ್‌ನೆಟ್‌ನ ವಿಶ್ವಾಸಾರ್ಹತೆ ಹಾಗು ಅಧಿಕೃತತೆಯನ್ನು ಕಿತ್ತುಕೊಳ್ಳುತ್ತದೆ.ʼʼ

ʼʼನನ್ನ ಕೆಲವು ಡೀಪ್‌ಫೇಕ್‌ ಫೋಟೋಗಳು ಕಂಡುಬಂದಿವೆ. ಅವೆಲ್ಲವೂ ಸತ್ಯಕ್ಕೆ ದೂರವಾದುದು. @SaraTendulkar_ ಎಂಬ Xನ (ಮೊದಲಿನ ಟ್ವಿಟರ್‌) ಖಾತೆಯು ಪರೋಡಿ ಖಾತೆ, ಹಾಗೆಂದು ಅದು ಹೇಳಿಕೊಂಡಿದ್ದರೂ ನನ್ನ ಸೋಗಿನಲ್ಲಿ ಜನತೆಯನ್ನು ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿದೆ. ಎಕ್ಸ್‌ನಲ್ಲಿ ನನ್ನ ಖಾತೆಯಿಲ್ಲ. ಎಕ್ಸ್‌ ಕೂಡ ಇಂಥ ಅಕೌಂಟ್‌ಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ವಜಾ ಮಾಡಬೇಕು.ʼʼ

ʼʼಮನರಂಜನೆ ಎಂಬುದು ಸತ್ಯವನ್ನು ಬಲಿಗೊಟ್ಟು ಬರಬಾರದು. ಸತ್ಯ ಮತ್ತು ವಾಸ್ತವದ ನೆಲೆಯಲ್ಲಿ ನಿಂತಿರುವ ಸಂವಹನವನ್ನು ಬೆಳೆಸೋಣ.ʼʼ ಎಂದು ಸಾರಾ ಬರೆದುಕೊಂಡಿದ್ದಾರೆ.

ಸಾರಾ ಅವರ ಒರಿಜಿನಲ್‌ ಹಾಗೂ ಪರೋಡಿ ಖಾತೆಗಳು ಇಲ್ಲಿವೆ. ‌‌

ಇನ್‌ಸ್ಟಗ್ರಾಮ್‌ನಲ್ಲಿರುವ ಸಾರಾ ತೆಂಡುಲ್ಕರ್‌ ಒರಿಜಿನಲ್‌ ಅಕೌಂಟ್.

ಎಕ್ಸ್‌ನಲ್ಲಿರುವ ಸಾರಾ ತೆಂಡುಲ್ಕರ್‌ ಪರೋಡಿ ಅಕೌಂಟ್.

ಇತ್ತೀಚೆಗೆ ಸಾರಾ ತೆಂಡೂಲ್ಕರ್ ಅವರ ಡೀಪ್‌ಫೇಕ್‌ ರಚಿತ ಫೋಟೋ ಕೂಡ ವೈರಲ್‌ ಆಗಿತ್ತು. ಅದರಲ್ಲಿ ಸಾರಾ, ಅವರ ಪ್ರಿಯಕರ ಎಂದು ಹೇಳಲಾದ ಶುಭ್‌ಮನ್ ಗಿಲ್ ಅವರನ್ನು ತಬ್ಬಿಕೊಳ್ಳುತ್ತಿರುವಂತೆ ಕಾಣಿಸಲಾಗಿತ್ತು. ಸಾರಾ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಅವರೊಂದಿಗೆ ಕಾಣಿಸಿಕೊಂಡಿದ್ದ ಮೂಲ ಫೊಟೋ ಅದಾಗಿದ್ದು, ಎಐ ಮೂಲಕ ತಿರುಚಲಾಗಿತ್ತು. ರಶ್ಮಿಕಾ ಮಂದಣ್ಣ, ಕಾಜೋಲ್‌ ಅವರ ಬಳಿಕ ಸಾರಾ ತೆಂಡುಲ್ಕರ್‌ ಕೂಡ ಡೀಪ್‌ಫೇಕ್‌ ಸಂತ್ರಸ್ತೆಯಾಗಿದ್ದಾರೆ.

Exit mobile version