Site icon Vistara News

Shikhar Dhawan: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ಶಿಖರ್‌ ಧವನ್‌

Shikhar Dhawan

ಮುಂಬೈ: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ಶಿಖರ್ ಧವನ್ (Shikhar Dhawan) ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, 13 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಆಟದಿಂದ ದೂರ ಸರಿಯುವ ನಿರ್ಧಾರವನ್ನು ಶಿಖರ್‌ ಧವನ್ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದು, ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ.

“ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯೊಂದಿಗೆ ನನ್ನ ಕ್ರಿಕೆಟ್ ಪ್ರಯಾಣದ ಈ ಅಧ್ಯಾಯವನ್ನು ಮುಗಿಸುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು! ಜೈ ಹಿಂದ್!” ಎಂದು ಧವನ್ ಬರೆದುಕೊಂಡು ವಿಡಿಯೊ ಮೂಲಕ ನಿವೃತ್ತಿಯನ್ನು ಘೋಷಿಸಿದ್ದಾರೆ.

ಧವನ್‌ ಹೇಳಿದ್ದೇನು?

“ಭಾರತಕ್ಕಾಗಿ ಆಡುವ ಕನಸಿತ್ತು. ನಾನು ಅದನ್ನು ಸಾಧಿಸಿದೆ. ನನ್ನ ಈ ಪ್ರಯಾಣದಲ್ಲಿ ಅನೇಕರು ಸ್ಮರಣೀಯ ಕೊಡುಗೆ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಮೊದಲನೆಯದಾಗಿ ನನ್ನ ಕುಟುಂಬ. ನನ್ನ ಬಾಲ್ಯದ ತರಬೇತುದಾರ ದಿವಂಗತ ತಾರಕ್ ಸಿನ್ಹಾ ಮತ್ತು ಮದನ್‌ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಆಟದ ಮೂಲಭೂತ ಅಂಶಗಳನ್ನು ಕಲಿತಿದ್ದೇನೆʼʼ ಎಂದು ಅವರು ಹೇಳಿದ್ದಾರೆ. ಮುಂದುವರಿದು, ”ನಾನು ಇಷ್ಟು ದೀರ್ಘ ಕಾಲ ಕ್ರಿಕೆಟ್ ಆಡಿದ ನನ್ನ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಕ್ರಿಕೆಟ್‌ ತಂಡದ ಮೂಲಕ ನನಗೆ ಮತ್ತೊಂದು ಕುಟುಂಬ ಸಿಕ್ಕಿತು. ಜತೆಗೆ ಹೆಸರು, ಖ್ಯಾತಿ ಮತ್ತು ಅಭಿಮಾನಿಗಳ ಪ್ರೀತಿಯೂ ಲಭಿಸಿತುʼʼ ಎಂದು ಭಾವುಕರಾಗಿ ಹೇಳಿದ್ದಾರೆ. ಅದಾಗ್ಯೂ 38 ವರ್ಷದ ಧವನ್‌ ಐಪಿಎಲ್‌ನಲ್ಲಿ ಆಡಲಿದ್ದಾರೆ.

13 ವರ್ಷಗಳ ಆಟಕ್ಕೆ ತೆರೆ

ಶಿಖರ್‌ ಧವನ್ ಅವರ ಈ ಘೋಷಣೆಯೊಂದಿಗೆ 13 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ. 2010ರ ಅಕ್ಟೋಬರ್ 20ರಂದು ವಿಶಾಖಪಟ್ಟಣಂನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಪಾದಾರ್ಪಣೆ ಮಾಡಿದ್ದರು. 2013ರಲ್ಲಿ ಅವರು ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.

1985ರ ಡಿಸೆಂಬರ್‌ 5ರಂದು ದಿಲ್ಲಿಯಲ್ಲಿ ಜನಿಸಿದ ಶಿಖರ್‌ ಧವನ್‌, 2010ರಲ್ಲಿ ಆಸ್ಟ್ರೇಲಿಯಾ ತಂಡದ ಮೂಲಕ ಒನ್‌ಡೇ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರೆ, ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯವನ್ನೂ ಆಸ್ಟ್ರೇಲಿಯಾ ವಿರುದ್ಧ ಆಡಿದ್ದು ವಿಶೇಷ. 2013ರಲ್ಲಿ ಟೆಸ್ಟ್‌ ಪಂದ್ಯಕ್ಕೆ ಕಾಲಿಟ್ಟಿದ್ದರು. ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ 2011ರಲ್ಲಿ ಟಿ-20 ಪಂದ್ಯಕ್ಕೆ ಅಡಿ ಇಟ್ಟರು. ಇನ್ನು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌, ಡೆಕ್ಕನ್‌ ಚಾರ್ಜರ್ಸ್‌, ಸನ್​ರೈಸರ್ಸ್​ ಹೈದರಾಬಾದ್​​, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ಪರ ಆಡಿದ್ದಾರೆ.

ಕೊನೆಯ ಪಂದ್ಯ

2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತಕ್ಕಾಗಿ ಆಡಿದ ಧವನ್, 269 ಪಂದ್ಯಗಳಿಂದ 24 ಶತಕಗಳು, 44 ಅರ್ಧಶತಕಗಳು ಸೇರಿದಂತೆ 10,867 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ: Harry Singh: ಇಂಗ್ಲೆಂಡ್​ ಟೆಸ್ಟ್​ ತಂಡದಲ್ಲಿ ಕಾಣಿಸಿಕೊಂಡ ಭಾರತದ ಮಾಜಿ ವೇಗಿ ಆರ್​.ಪಿ. ಸಿಂಗ್​ ಪುತ್ರ; ಇದು ಯಾವ ಆರ್​.ಪಿ. ಸಿಂಗ್​ ಎಂದ ನೆಟ್ಟಿಗರು!

Exit mobile version