ಬೆಂಗಳೂರು: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಜೂನ್ 1 ರಿಂದ ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2024) ಕರ್ನಾಟಕ ಹಾಲು ಮಹಾ ಮಂಡಳಿ (KMF) 2 ತಂಡಗಳ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ. ಆದರೆ, ಇದಕ್ಕೆ ಅಪಸ್ವರ ಕೇಳಿಬಂದಿದ್ದು, ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಉದ್ಯಮಿ ಮೋಹನ್‌ದಾಸ್ ಪೈ (Mohandas Pai) ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಎಂಎಫ್‌ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಎಂಎಫ್‌ನಿಂದ ವಿದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೊಜಕತ್ವ ಪಡೆದ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋಹನ್ ದಾಸ್ ಪೈ, ಕರ್ನಾಟಕದ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿ ವೇತನಗಳಿಗೆ ಏಕೆ ಕೆಎಂಎಫ್ ಪ್ರಾಯೋಜಕತ್ವವನ್ನು ನೀಡಬಾರದು? ಕೆಎಂಎಫ್ ಕನ್ನಡಿಗ ತೆರಿಗೆದಾರರ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಧನಸಹಾಯವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಹೊರಟಿದೆ” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಈ ಬಗ್ಗೆ ಟ್ಯಾಗ್ ಮಾಡಿದ್ದಾರೆ.
Why not sponsor the Karnataka Ranji team , Karnataka sports persons, Karnataka artists? Farmers children, scholarship for poor? Kmf is funded by Kannadiga tax papers money, subsidy and investments from budget but chooses to spend on foreign teams whom nobody knows! @siddaramaiah… https://t.co/i8DFYl3Pcl
— Mohandas Pai (@TVMohandasPai) April 21, 2024
ಟಿ20 ವಿಶ್ವಕಪ್ನಲ್ಲಿ 2 ತಂಡಗಳ ಪ್ರಾಯೋಜಕತ್ವ ಪಡೆದ ನಂದಿನಿ
ನಂದಿನಿ ಹೆಸರಿನಲ್ಲಿ ಡೈರಿ ಉತ್ಪನ್ನ ಮಾರಾಟ ಮಾಡುತ್ತಿರುವ ಕೆಎಂಎಫ್ ಟಿ20 ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ (Scotland) ಮತ್ತು ಐರ್ಲೆಂಡ್ (Ireland) ತಂಡಗಳ ಪ್ರಾಯೋಜಕತ್ವ ಪಡೆದಿದೆ. ಈ ಮೂಲಕ ಕೆಎಂಎಫ್ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟು ನಂದಿನಿ(nandini milk) ಲೋಗೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿದೆ. ಜತೆಗೆ ಅಮೂಲ್‌ಗೆ ತೀವ್ರ ಪೈಪೋಟಿ ನೀಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಒಪ್ಪಂದಕ್ಕೆ ಈಗಾಗಲೇ ಅಧಿಕೃತವಾಗಿ ಸಹಿ ಮಾಡಿದ್ದೇವೆ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ನಂದಿನಿ ಕಂಪೆನಿಯು ಪ್ರಾಯೋಜಕತ್ವ ಪಡೆದಿರುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.
MC Exclusive: Karnataka's Nandini to sponsor Scotland and Ireland cricket teams for T20 World Cup @kmfnandinimilk
— ChristinMathewPhilip (@ChristinMP_) April 20, 2024
Pc: @CricketScotland & @cricketireland https://t.co/Ct50rfnPca pic.twitter.com/PHaMmgC8Eh
ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ T20 World Cup: ಟಿ20 ವಿಶ್ವಕಪ್ನಲ್ಲಿ ಈ ಆಟಗಾರರಿಗೆ ಅವಕಾಶ ಸಿಗುವುದು ಡೌಟ್
ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಭಾರತ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ತಲಾ 2 ಅಭ್ಯಾಸ ಪಂದ್ಯ
ವಿಶ್ವಕಪ್ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್ ಮತ್ತು ಸೂಪರ್ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್ ಫೈನಲ್ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.