ನವ ದೆಹಲಿ: ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಹಾಗೂ ಪ್ರೀಮಿಯರ್ ಲೀಗ್‌ನ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರು ದುಬಾರಿ ಕಾರುಗಳ ಪ್ರೇಮಿ. ಅವರ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಹಲವು ಕಾರುಗಳ ಸಂಗ್ರಹವಿದೆ. ಅವುಗಳ ಸಾಲಿನಲ್ಲಿ ೧5 ಕೋಟಿ ರೂಪಾಯಿಗೂ ಅಧಿಕ ಬೆಲೆಯ Bugatti Veyron ಕೂಡ ಒಂದು. ಇಷ್ಟೊಂದು ಬೆಲೆಯ ಕಾರನ್ನು ಅವರ ಚಾಲಕನೊಬ್ಬ ಮನೆಯಯೊಂದರ ಕಾಂಪೌಂಡ್‌ಗೆ ಗುದ್ದಿಸಿ ಪುಡಿ ಮಾಡಿದ ಘಟನೆ ವರದಿಯಾಗಿದೆ.
ಕ್ರಿಸ್ಟಿಯಾನೊ ಅವರು ಸದ್ಯ ಫುಟ್ಬಾಲ್‌ನಿಂದ ರಜೆ ಪಡೆದುಕೊಂಡು ಕುಟುಂಬದ ಜತೆ ಸ್ಪೇನ್‌ಗೆ ಪ್ರವಾಸ ತೆರಳಿದ್ದಾರೆ. ಈ ವೇಳೆ ದುಬಾರಿ ಬೆಲೆಯ Bugatti Veyron ಕಾರನ್ನು ಕೂಡ ಜತೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಕಾರು ಸ್ಪೇನ್‌ನ ಮೆಜೊರ್ಕಾದಿಂದ ಮೆಲ್ಲೊರ್ಕಾದ ಕಡೆಗೆ ಸಾಗುತ್ತಿದ್ದಾಗ ಮನೆಯೊಂದರ ಕಾಂಪೌಂಡ್‌ಗೆ ಗುದ್ದಿದೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಪೊಲೀಸರ ಪ್ರಕಾರ, ಕಾರು ಕಾಂಪೌಂಡ್‌ಗೆ ಗುದ್ದಿದ ವೇಳೆ ಅದರಲ್ಲಿ ಫುಟ್ಬಾಲ್ ಆಟಗಾರ ಇರಲಿಲ್ಲ. ಅವರ ಚಾಲಕ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂಬುದಾಗಿ ವರದಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಾರು ಅವಘಡಕ್ಕೆ ಒಳಗಾಗಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಆದರೆ, ವೇಗದಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕಾಂಪೌಂಡ್‌ಗೆ ಗುದ್ದಿದೆ ಎಂದು ಹೇಳಲಾಗುತ್ತಿದೆ.
ಕಾರು ಗುದ್ದಿದ ರಭಸಕ್ಕೆ ಅದರ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಅದರ ಫೋಟೋವನ್ನೂ ಪ್ರಕಟಿಸಿದೆ. ಅದರ ಪ್ರಕಾರ ಕಾರಿನ ದುರಸ್ತಿಗೆ ಕೋಟಿಗಟ್ಟಲೆ ಹಣ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ರೊನಾಲ್ಡೊ ಬಳಿ ಇರುವ ಕಾರುಗಳು ಇವುಗಳು
ಕ್ರಿಸ್ಟಿಯಾನೊ ರೊನಾಲ್ಡೊ ಬಳಿ ವಿಶ್ವದ ಅತ್ಯಂತ ದುಬಾರಿ ಕಾರುಗಳಿವೆ. ತಮ್ಮ ಗಳಿಕೆಯ ದೊಡ್ಡ ಮೊತ್ತವನ್ನು ಅವರು ಕಾರುಗಳ ಖರೀದಿಗೆ ಬಳಸುತ್ತಿದ್ದಾರೆ. ೨೦೨೦ರಲ್ಲಿ ಅವರು ಬುಗಾಟಿ ಕಂಪನಿಯ ಲಾ ವೈಟರ್ ನೊಯಿರ್ ಕಾರನ್ನೂ ತಮಗೆ ತಾವೇ ಉಡುಗೊರೆಯಾಗಿ ಕೊಟ್ಟುಕೊಂಡಿದ್ದರು. ಅದಕ್ಕೆ ಸುಮಾರು ೭೫ ಕೋಟಿ ರೂಪಾಯಿ. ಅಂತೆಯೇ ಫೆರಾರಿ ೫೯೯ ಜಿಟಿಒ, ಲ್ಯಾಂಬೊರ್ಗಿನಿ ಅವೆಂಟಡೋರ್, ಮೆಕ್‌ಲಾರೆನ್ ಎಮ್‌ಪಿ ೧೨ಸಿ ಕಾರನ್ನೂ ಹೊಂದಿದ್ದಾರೆ.
ತಮ್ಮಲ್ಲಿರುವ ದುಬಾರಿ ಕಾರುಗಳ ಜತೆ ಪೋಟೋ ತೆಗೆದು ಲಕ್ಷಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಕಾರು ಮಾತ್ರವಲ್ಲದೆ ಅವರ ಬಳಿ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಹಡಗು ಕೂಡ ಇದೆ. ೮೮ ಮೀಟರ್ ಉದ್ದದ ಆ ಹಡಗಿನಲ್ಲಿ ಐದು ವಿಭಿನ್ನ ಐಷಾರಾಮಿ ಕ್ಯಾಬಿನ್‌ಗಳು, ಹಾಗೂ ವಿಶೇಷವಾಗಿ ವಿನ್ಯಾಸ ಮಾಡಿರುವ ಬಾತ್‌ರೂಮ್‌ಗಳನ್ನು ಹೊಂದಿವೆ.
ಇದನ್ನೂ ಓದಿ| highest paid: ಲಿಯಾನಲ್ ಮೆಸ್ಸಿಗೆ ಒಂದು ವರ್ಷಕ್ಕೆ ₹1000 ಕೋಟಿ ಸಂಭಾವನೆ!