ಸಿಡ್ನಿ: ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟರ್ ದನುಷ್ಕಾ ಗುಣತಿಲಕ ಅವರನ್ನು ಆಸ್ಟ್ರೇಲಿಯ ಪೊಲೀಸರು ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.
ಪೂರ್ವ ಸಿಡ್ನಿಯ ರೋಸ್ ಬೇಯಲ್ಲಿರುವ ನಿವಾಸದಲ್ಲಿ 29 ವರ್ಷದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಲ್ಲಿ ಪೊಲೀಸರು ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಕ್ರಿಕೆಟ್ ತಂಡದ ಹೋಟೆಲ್‌ನಿಂದ ಭಾನುವಾರ ಮುಂಜಾನೆ ಗುಣತಿಲಕ ಅವರನ್ನು ಬಂಧಿಸಿದರು.
“ಈ ಮಹಿಳೆ ದನುಷ್ಕಾ ಜತೆಗೆ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಹಲವಾರು ದಿನಗಳಿಂದ ಸಂಪರ್ಕ ಇಟ್ಟುಕೊಂಡಿದ್ದರು. ನವೆಂಬರ್ 2ರ ಸಂಜೆ ಆಕೆಯ ನಿವಾಸಕ್ಕೆ ಭೇಟಿ ನೀಡಿದ ದನುಷ್ಕಾ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ” ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆ ತಿಳಿಸಿದೆ. ಯುವತಿಯ ನಿವಾಸದಲ್ಲಿ ಪೋಲೀಸರು ಮಹಜರು ನಡೆಸಿದ್ದಾರೆ.
ಇದನ್ನೂ ಓದಿ | Two Finger Test | ಅತ್ಯಾಚಾರ ಕೇಸ್‌ನಲ್ಲಿ ‘ಟು ಫಿಂಗರ್ ಟೆಸ್ಟ್’ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಹೆಚ್ಚಿನ ವಿಚಾರಣೆಗಾಗಿ ಭಾನುವಾರ ಮುಂಜಾನೆ ದನುಷ್ಕಾ ಅವರನ್ನು ಬಂಧಿಸಲಾಗಿದೆ. ಅವರನ್ನು ಸಿಡ್ನಿ ಸಿಟಿ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗ ನಡೆಸಿದ ಆರೋಪ ಹೊರಿಸಲಾಗಿದೆ. ಸಿಡ್ನಿಯ ನ್ಯಾಯಾಲಯ ದನುಷ್ಕಾಗೆ ಜಾಮೀನು ನಿರಾಕರಿಸಿದೆ.
ಗುಣತಿಲಕ ಮೊದಲ ಸುತ್ತಿನಲ್ಲಿ ಮಂಡಿರಜ್ಜು ಗಾಯದಿಂದ T20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಆಟವಾಡದಿದ್ದರೂ ಆಸ್ಟ್ರೇಲಿಯಾದಲ್ಲಿ ತಂಡದೊಂದಿಗೆ ಉಳಿದಿದ್ದರು. 2015ರಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ದನುಷ್ಕಾ, ನಂತರ ಶ್ರೀಲಂಕಾ ಪರ ಎಂಟು ಟೆಸ್ಟ್, 47 ODI ಮತ್ತು 46 T20Iಗಳನ್ನು ಆಡಿದ್ದಾರೆ.
ಇದನ್ನೂ ಓದಿ | T20 World Cup | ಟೀಮ್ ಇಂಡಿಯಾ ವಿರುದ್ಧ ದೂರು ನೀಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ಧಾರ?