Site icon Vistara News

IPL 2023 : ಎಸ್​ಆರ್​ಎಚ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಏಳು ರನ್​ ಜಯ

#image_title

ಹೈದರಾಬಾದ್​​: ಐಪಿಎಲ್ 16ನೇ ಆವೃತ್ತಿಯ 34ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಎರಡನೇ ಜಯ ಲಭಿಸಿದೆ. ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ 7 ರನ್​ನಿಂದ ಗೆದ್ದ ಡೇವಿಡ್​ ವಾರ್ನರ್​ ಪಡೆ ಸಂಭ್ರಮಿಸಿತು. ಇದೇ ವೇಳೆ ಸತತ ಮೂರನೇ ಸೋಲಿಗೆ ಒಳಗಾಯಿತು. ಅಕ್ಷರ್​ ಪಟೇಲ್​ (34) ಹಾಗೂ ಮನೀಶ್ ಪಾಂಡೆ (34) ಡೆಲ್ಲಿ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು. ಡೆಲ್ಲಿ ಬೌಲರ್​ಗಳು ಸಣ್ಣ ಮೊತ್ತವನ್ನು ಕಾಪಾಡಿಕೊಳ್ಳುವುದಕ್ಕೆ ಯಶಸ್ವಿಯಾದರು.

ಇಲ್ಲಿನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟ ಮಾಡಿಕೊಂಡು 144 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಹೈದರಾಬಾದ್​ ತಂಡ ತನ್ನ ಪಾಲಿನ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಸಾಧರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡದ ಬ್ಯಾಟಿಂಗ್ ಕೂಡ ಉತ್ತಮವಾಗಿರಲಿಲ್ಲ. ಹ್ಯಾರಿ ಬ್ರೂಕ್​ 7 ರನ್​ಗಳಿಗೆ ಔಟಾದರೆ, ರಾಹುಲ್ ತ್ರಿಪಾಠಿ 15 ರನ್​ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದು ಬದಿಯಲ್ಲಿ ಮಯಾಂಕ್ ಅಗರ್ವಾಲ್​ ರನ್​ ಬಾರಿಸುತ್ತಾ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ, 49 ರನ್​ಗೆ ಔಟಾದ ಅವರು 1 ರನ್​ನಿಂದ ಅರ್ಧ ಶತಕದಿಂದ ವಂಚಿತರಾದರು. ನಾಯಕ ಏಡೆನ್ ಮಾರ್ಕ್ರಮ್​ 3 ರನ್​ಗೆ ವಿಕೆಟ್​ ಒಪ್ಪಿಸಿದರು. 85 ರನ್​ಗೆ ಐದು ವಿಕೆಟ್​ ಕಳೆದುಕೊಂಡ ಹೈದರಾಬಾದ್ ತಂಡಕ್ಕೆ ಕೊನೇ ಹಂತದಲ್ಲಿ ಹೆನ್ರಿಚ್​ ಕ್ಲಾಸೆನ್​ (31 ರನ್​) ಭರವಸೆ ಮೂಡಿಸಿದರು. 19 ಎಸೆತದಲ್ಲಿ 3 ಫೋರ್​ ಹಾಗೂ 1 ಸಿಕ್ಸರ್​ ಅವರು ಬಾರಿಸಿದರು. ಬೌಲಿಂಗ್​ನಲ್ಲಿ ಮೂರು ವಿಕೆಟ್​ ಪಡೆದು ಮಿಂಚಿದ್ದ ವಾಷಿಂಗ್ಟನ್​ ಸುಂದರ್​ 24 ರನ್​ ಬಾರಿಸಿ ಕೊನೇ ತನಕ ಕ್ರೀಸ್​ ಕಾಯ್ದುಕೊಂಡರೂ ಗೆಲುವು ತಂದುಕೊಡಲು ಅವರಿಗೆ ಸಾಧ್ಯವಾಗಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್​ಗಳಾದ ಆ್ಯನ್ರಿಚ್ ನೋರ್ಜೆ (33 ರನ್​ಗಳಿಗೆ 2 ವಿಕೆಟ್​), ಅಕ್ಷರ್​ ಪಟೇಲ್​ (21 ರನ್​ಗಳಿಗೆ 2 ವಿಕೆಟ್​) ಗೆಲುವಿಗೆ ತಮ್ಮ ಕೊಡುಗೆಗಳನ್ನು ಕೊಟ್ಟರು

ಡೆಲ್ಲಿಯ ಬ್ಯಾಟಿಂಗ್​ ವೈಫಲ್ಯ

ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ಪೃಥ್ವಿ ಶಾ ಬದಲಿಗೆ ಇನಿಂಗ್ಸ್​ ಆರಂಭಿಸಲು ಮುಂದಾದ ಫಿಲ್​ ಸಾಲ್ಟ್​ ಶೂನ್ಯಕ್ಕೆ ಔಟಾಗುವ ಮೂಲಕ ತಂಡದ ಹಿನ್ನಡೆಗೆ ಕಾರಣಾದರು. ಡೇವಿಡ್​ ವಾರ್ನರ್​ ಸ್ಫೋಟಿಸುವ ಲಕ್ಷಣ ತೋರಿದರೂ 21 ರನ್​ಗೆ ವಿಕೆಟ್​ ಒಪ್ಪಿಸಿದರು. ಮಿಚೆಲ್​ ಮಾರ್ಷ್​ 15 ಎಸೆತದಲ್ಲಿ 25 ರನ್ ಬಾರಿಸಿ ವಿಶ್ವಾಸ ಮೂಡಿಸಿದರೂ ನಟರಾಜನ್ ಎಸೆತಕ್ಕೆ ಎಲ್​ಬಿಡಬ್ಲ್ಯು ಔಟಾದರು. ಸರ್ಫರಾಜ್​ ಖಾನ್​ 10 ರನ್​ಗೆ ಔಟಾದರು. ಅಮನ್ ಹಕಿಮ್​ 4 ರನ್​ಗೆ ವಿಕೆಟ್​ ಒಪ್ಪಿಸಿದರು.

62 ರನ್​ಗಳಿಗೆ 5 ವಿಕೆಟ್​ ನಷ್ಟಮಾಡಿಕೊಂಡ ಡೆಲ್ಲಿ ತಂಡಕ್ಕೆ ಮನೀಶ್​ ಹಾಗೂ ಅಕ್ಷರ್​ ಪಟೇಲ್​ ಸ್ವಲ್ಪ ಮಟ್ಟಿಗೆ ಆಧಾರವಾದರು. 6ನೇ ವಿಕೆಟ್​ಗೆ ಈ ಜೋಡಿ 71 ರನ್​ ಬಾರಿಸಿ ಮರ್ಯಾದೆ ಕಾಪಾಡಿತು. ಅಕ್ಷರ್ 34 ಎಸೆತಗಳಲ್ಲಿ 34 ರನ್​ ಬಾರಿಸಿ ಔಟಾದರೆ ಮನೀಶ್​ 27 ಎಸೆತಗಳಲ್ಲಿ 34 ರನ್​ ಬಾರಿಸಿದರು. ಮನೀಶ್​ ಅನಗತ್ಯ ರನ್​ಔಟ್​ಗೆ ಬಲಿಯಾದ ಬಳಿಕ ತಂಡ ಮತ್ತೆ ಸಂಪೂರ್ಣವಾಗಿ ಪತನಗೊಂಡಿತು.

Exit mobile version