ಲಖನೌ : ಐಪಿಎಲ್ 16ನೇ ಆವೃತ್ತಿಯ (IPL 2023) ಶನಿವಾರದ ಡಬಲ್ ಹೆಡರ್ನ ಎರಡನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಟೂರ್ನಿಯ ಮೂರನೇ ಪಂದ್ಯವಾಗಿದೆ. ಹಣಾಹಣಿಯು ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿದೆ.
ಲಖನೌ ಸೂಪರ್ ಜಯಂಟ್ಸ್ ಫ್ರಾಂಚೈಸಿ ಕಳೆದ ಆವೃತ್ತಿಯಲ್ಲಿ ಐಪಿಎಲ್ಗೆ ಸೇರ್ಪಡೆಗೊಂಡಿದ್ದರೂ ಇದೇ ಮೊದಲ ಬಾರಿ ತವರಿನ ಮೈದಾನದಲ್ಲಿ ಆಡುತ್ತಿದೆ. ಕಳೆದ ವರ್ಷ ಎಲ್ಲ ಪಂದ್ಯಗಳೂ ಮುಂಬಯಿನಲ್ಲಿ ನಡೆದಿದ್ದ ಕಾರಣ ಸ್ಥಳೀಯ ಪ್ರೇಕ್ಷಕರಿಗೆ ಆಟ ನೋಡುವ ಅವಕಾಶ ಲಭಿಸಿರಲಿಲ್ಲ.
ರನ್ ಚೇಸ್ ಮಾಡುವುದು ಸುಲಭ ಎಂಬ ಕಾರಣಕ್ಕೆ ಮೊದಲು ಬೌಲಿಂಗ್ ಮಾಡುತ್ತಿದ್ದೇವೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮ ಸ್ವಲ್ಪ ಗೊಂದಲಕಾರಿಯಾಗಿದೆ. ರಿಷಭ್ ಪಂತ್ಗಾಗಿ ಕಾಯುತ್ತಿದ್ದೇವೆ. ಅವರಿಗೆ ಶುಭಾಶಯ ಎಂದು ಟಾಸ್ ಗೆದ್ದ ಡೇವಿಡ್ ವಾರ್ನರ್ ಹೇಳಿದ್ದಾರೆ.
ನಮ್ಮ ತವರಿನ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದ್ದೇವೆ. ಇಲ್ಲಿ ಇದುವರೆಗೆ ಆಡಿಲ್ಲ. ಹೀಗಾಗಿ ವಿಶೇಷವಾದ ಯಾವುದೇ ನಿರೀಕ್ಷೆಗಳು ನಮಗಿಲ್ಲ. ಇದೊಂದು ಉತ್ತಮ ಬ್ಯಾಟಿಂಗ್ ಪಿಚ್ ಎಂಬುದು ನಮ್ಮ ಅನಿಸಿಕೆ. ಅಂತೆಯೇ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಳಕೆಯೂ ಖುಷಿ ತರಲಿದೆ ಎಂದು ಲಕ್ನೊ ತಂಡದ ನಾಯಕ ಕೆ. ಎಲ್ ರಾಹುಲ್ ಹೇಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಪ್ಲೇ ಹಂತಕ್ಕೆ ಏರಿತ್ತು. ನಾಯಕ ಕೆ. ಎಲ್ ರಾಹುಲ್ ಅವರನ್ನು ಮತ್ತೆ ಮುಂದುವರಿಸಲಾಗಿದ್ದು ಮತ್ತೆ ಉತ್ತಮ ಪ್ರದರ್ಶನ ನೀಡುವ ಎಲ್ಲ ಸೂಚನೆಗಳನ್ನು ಅವರು ಕೊಟ್ಟಿದ್ದಾರೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೂತನ ನಾಯಕ ಡೇವಿಡ್ ವಾರ್ನರ್ ಅವರ ನೇತೃತ್ವದಲ್ಲಿ ಆಡಲಿದ್ದಾರೆ. ಕಳೆದ ಬಾರಿ ರಿಷಭ್ ಪಂತ್ ಡಿಸಿ ನಾಯಕರಾಗಿದ್ದರು. ಈ ಬಾರಿ ಅವರು ಕಾರು ಅಪಘಾತದದಲ್ಲಿ ಗಾಯಗೊಂಡ ಕಾರಣ ಆಡಿರಲಿಲ್ಲ.
ಎರಡೂ ತಂಡಗಳು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರರ ಆಗಮನಕ್ಕಾಗಿ ಕಾಯುತ್ತಿವೆ. ಲಖನೌ ತಂಡ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಬರುವಿಕೆಯ ನಿರೀಕ್ಷೆಯಲ್ಲಿ. ಅವರು ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ 43 ಎಸೆತಗಳಲ್ಲಿ ಟಿ20 ಶತಕ ಬಾರಿಸಿದ್ದರು. ಅಂತೆಯೇ ಮಿಚೆ್ಲ್ ಮಾರ್ಷ್, ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಅವರಂಥ ಅನುಭವಿ ಆಟಗಾರರನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಬಳಗ ವೇಗದ ಬೌಲರ್ಗಳಾದ ಆ್ಯನ್ರಿಚ್ ನೋರ್ಜೆ ಹಾಗೂ ಲುಂಗಿ ಎನ್ಗಿಡಿ ಅವರಿಗೆ ಕಾಯುತ್ತಿದೆ.
ತಂಡಗಳು ಇಂತಿವೆ
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೀ ರೊಸೌ, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್..
ಲಕ್ನೊ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್(ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ನಿಕೋಲಸ್ ಪೂರನ್(ವಿಕೆಟ್ ಕೀಪರ್), ಆಯುಷ್ ಬದೋನಿ, ಮಾರ್ಕ್ ವುಡ್, ಜಯದೇವ್ ಉನದ್ಕತ್, ರವಿ ಬಿಷ್ಣೋಯ್, ಅವೇಶ್ ಖಾನ್.