ಹೈದರಾಬಾದ್: ಮಯಾಂಕ್ ಮಾರ್ಕಾಂಡೆ (15 ರನ್ಗೆ 4 ವಿಕೆಟ್ ) ಹಾಗೂ ಮಾರ್ಕೊ ಜೆನ್ಸನ್ (16 ರನ್ಗೆ 2 ವಿಕೆಟ್) ಮಾರಕ ದಾಳಿಗೆ ಕುಸಿತ ಕಂಡ ಹೊರತಾಗಿಯೂ ನಾಯಕ ಶಿಖರ್ ಧವನ್ ( 66 ಎಸೆತಗಳಲ್ಲಿ ಅಜೇಯ 99 ರನ್ ) ಅವರ ವಿಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಪಂಜಾಬ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ ಭಾನುವಾರದ ಡಬಲ್ ಹೆಡರ್ನ ಎರಡನೇ ಪಂದ್ಯದಲ್ಲಿ 143 ರನ್ ಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ ತಂಡದ ಎಲ್ಲ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದರು. ಆದರೆ, ಅರಂಭದಿಂದ ಕೊನೇ ತನಕ ಬ್ಯಾಟ್ ಬೀಸಿದ ಧವನ್ ತಂಡಕ್ಕೆ ಗೌರವಯುತ ಮೊತ್ತ ಪೇರಿಸಲು ನೆರವಾದರು.
ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಏಡೆನ್ ಮಾರ್ಕ್ರಮ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಪ್ರಭ್ಸಿಮ್ರಾನ್ ಸಿಂಗ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆಗೆ ಕಾರಣರಾದರು. ಬಳಿಕ ಬಂದ ಮ್ಯಾಥ್ಯೂ ಶಾರ್ಟ್ಸ್ ಕೂಡ 1 ರನ್ಗೆ ಸೀಮಿತಗೊಂಡರು. ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ ನಾಲ್ಕು ರನ್ಗೆ ಔಟಾದರು.
ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಆಲ್ರೌಂಡರ್ ಸ್ಯಾಮ್ ಕರ್ರನ್ 22 ರನ್ ಬಾರಿಸಿ ಸ್ವಲ್ಪ ಹೊತ್ತು ಕ್ರಿಸ್ ಕಾಯ್ದುಕೊಂಡರು. ಆದರೆ, ಅವರ ಮಾರ್ಕಾಂಡೆ ಎಸೆತಕ್ಕೆ ಔಟಾದರು. ಅಲ್ಲಿಂದ ಬಳಿಕ ಪಂಜಾಬ್ ತಂಡದ ಪತನ ಶುರುವಾಯಿತು. ಸಿಕಂದರ್ ರಾಜಾ (5 ರನ್), ಶಾರುಖ್ ಖಾನ್ (4 ರನ್), ಹರ್ಪ್ರಿತ್ ಬ್ರಾರ್ (1 ರನ್), ರಾಹುಲ್ ಚಾಹರ್ (0 ), ನಥಾನ್ ಎಲ್ಲೀಸ್ (0) ಔಟಾದರು.
ಹೈದರಾಬಾದ್ ತಂಡದ ಪರ ಉಮ್ರಾನ್ ಮಲಿಕ್ (32 ರನ್ ನೀಡಿ 2 ವಿಕೆಟ್) ಭುವನೇಶ್ವರ್ ಕುಮಾರ್ (33 ರನ್ಗಳಿಗೆ 1 ವಿಕೆಟ್ ಕೂಡ ಉತ್ತಮ ಬೌಲಿಂಗ್ ದಾಳಿ ನಡೆಸಿದರು.
ಧವನ್ ಅಬ್ಬರ
ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ಕೊನೇ ವಿಕೆಟ್ ಉಳಿದಿರುವ ಹೊತ್ತಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 42 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು ಮುಂದಿನ 24 ಎಸೆಗಳಲ್ಲಿ 49 ರನ್ ಬಾರಿಸಿದರು. 15ನೇ ಓವರ್ನಲ್ಲಿ ಪಂಜಾಬ್ನ 9ನೇ ವಿಕೆಟ್ ಉರುಳಿತ್ತು. ಆದರೆ ಧವನ್ ಆಲ್ಔಟ್ ಆಗಲು ಅವಕಾಶ ನೀಡಲಿಲ್ಲ.
ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದ ಏಡೆನ್
ಟಾಸ್ ಗೆದ್ದಿರುವ ಹೈದರಾಬಾದ್ ತಂಡದ ನಾಯಕ ಏಡೆನ್ ಮಾರ್ಕ್ರಮ್ ಅವರು ಚೇಸ್ ಮಾಡಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಪಿಚ್ ಬೌಲಿಂಗ್ಗೆ ಹೆಚ್ಚು ನೆರವು ನೀಡುವ ಸಾಧ್ಯತೆಗಳಿವೆ ಎಂದು ನಂಬಿದ್ದೇನೆ. ಚೇಸ್ ಮಾಡಿಕೊಂಡು ಗೆಲ್ಲುವುದು ಸುಲಭ ಎಂಬುದು ನನ್ನ ನಂಬಿಕೆ. ಪರಿಸ್ಥಿತಿಯ ಲಾಭವನ್ನು ಹೆಚ್ಚು ಪಡೆಯಲು ಸಾಧ್ಯವಾಗದು ಹಾಗೂ ನಿರೀಕ್ಷೆ ಮಾಡಲಾಗದು. ಇಂದು ನಾವು ಮೊದಲ ವಿಜಯ ದಾಖಲಿಸಲಿದ್ದೇವೆ ಎಂದು ಅವರು ಹೇಳಿದರು.
ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮಾತನಾಡಿ, ನಾವು ಮೊದಲು ಬ್ಯಾಟ್ ಮಾಡುವ ನಿರೀಕ್ಷೆಯಲ್ಲಿ ಇದ್ದೆವು. ತಕ್ಕದಾಗಿ ಮೊದಲು ಬ್ಯಾಟಿಂಗ್ ಸಿಕ್ಕಿತು. ಚೇಸ್ ಮಾಡುವ ವೇಳೆ ಎರಡು ಪಂದ್ಯಗಳಲ್ಲಿ ಹೈದರಾಬಾದ್ ತಂಡ ಸೋಲು ಕಂಡಿದೆ. ಹೀಗಾಗಿ ಅವರ ಮೇಲೆ ಒತ್ತಡ ಹೇರುಲಿದ್ದೇವೆ. ನಮ್ಮಲ್ಲಿ ಅನುಭವಿ ಬೌಲರ್ಗಳಿದ್ದಾರೆ. ಅವರು ಹೈದರಾಬಾದ್ ತಂಡವನ್ನು ಕಟ್ಟಿ ಹಾಕಲಿದ್ದಾರೆ ಎಂದು ಹೇಳಿದರು.