ಮುಂಬಯಿ: ಇತ್ತೀಚೆಗೆ ಕ್ರಿಕೆಟ್ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್(Dinesh Karthik) ಅವರು ಇದೀಗ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಕ್ರಿಡಾಕೂಟಕ್ಕೆ ಸಜ್ಜಾಗುತ್ತಿದ್ದಂತೆ ಕಂಡುಬಂದಿದೆ. ಟೋಕಿಯೊ ಒಲಿಂಪಿಕ್ಸ್ ಚಿನ್ನದ ವಿಜೇತ ನೀರಜ್ ಚೋಪ್ರಾ(Neeraj Chopra) ಜತೆ ಜಾವೆಲಿನ್ ಅಭ್ಯಾಸ ನಡೆಸುತ್ತಿರುವ ವಿಡಿಯೊವೊಂದು ವೈರಲ್(viral video) ಆಗಿದೆ.
ಪ್ಯಾರಿಸ್ ಒಲಿಂಪಿಕ್ಸ್ಗೆ ಸಿದ್ಧತೆಯಲ್ಲಿರುವ ನೀರಜ್ ಚೋಪ್ರಾ ಜತೆ ದಿನೇಶ್ ಕಾರ್ತಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಹು ದೂರ ಜಾವೆಲಿನ್ ಎಸೆದು ಗಮನಸೆಳೆದಿದ್ದಾರೆ. ಇದನ್ನು ಕಂಡ ನೆಟ್ಟಿಗರು ಡಿಕೆ ಅವರು ಈ ಬಾರಿ ಪ್ಯಾರಿಸ್ನಲ್ಲಿ ನೀರಜ್ ಚೋಪ್ರಾಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಅಸಲಿಗೆ ಉಭಯ ಕ್ರೀಡಾಪಟುಗಳು ಜಾಹಿರಾತಿನ ಭಾಗವಾಗಿ ಜತೆಯಾಗಿ ಕಾಣಸಿಕೊಂಡದ್ದು.
ಕಳೆವು ವಾರಗಳ ಹಿಂದೆ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕಿಳಿದ್ದ ನೀರಜ್ ಚೋಪ್ರಾ(82.27 ಮೀ.), ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಚಿನ್ನದ ಪದಕ ಗೆದ್ದಿದ್ದರು. ಈ ಟೂರ್ನಿ ಬಳಿಕ ನೀರಜ್ ಗಾಯಗೊಂಡಿದ್ದು ಸದ್ಯ ವಿಶ್ರಾಂತಿಯಲ್ಲಿದ್ದಾರೆ.
ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ನೀರಜ್ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ಎಸೆದಿದ್ದರು. ಅಭ್ಯಾಸದ ವೇಳೆ ಈಗಾಗಲೆ ನೀರಜ್ ಹಲವು ಬಾರಿ 90 ಮೀ. ಗಡಿ ದಾಟಿದ್ದಾರೆ. ಆದರೆ, ಸ್ಪರ್ಧೆಗಳಲ್ಲಿ ಇದು ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಪರ್ಧೆಯಲ್ಲಿಯೂ ಇದನ್ನು ಸಾಧಿಸಲಿದ್ದೇನೆ ಎಂದು ನೀರಜ್ ಹೇಳಿದ್ದಾರೆ.
ಇದನ್ನೂ ಓದಿ Viral Run Out Video: 11 ಆಟಗಾರರಿಂದ ರನೌಟ್ ಪ್ರಯತ್ನ; ಕೊನೆಗೂ ನಾಟೌಟ್ ಆದ ಬ್ಯಾಟರ್
ದಿನೇಶ್ ಕಾರ್ತಿಕ್ ಅವರಿಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯವೇ ವಿದಾಯ(dinesh karthik retirement) ಪಂದ್ಯ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಪಂದ್ಯ ಮುಕ್ತಾಯದ ಬಳಿಕ ಸಹ ಆಟಗಾರರು ಭಾವುಕರಾಗಿ ಕಾರ್ತಿಕ್ಗೆ ಮೈದಾನದಲ್ಲಿಯೇ ತಬ್ಬಿಕೊಂಡು ವಿದಾಯ ಹೇಳಿದಂತಿತ್ತು. ಅದರಲ್ಲೂ ವಿರಾಟ್ ಕೊಹ್ಲಿಯೊಂದಿಗೆ(virat kohli) ಭಾವುಕ ಆಲಿಂಗನವನ್ನು ಹಂಚಿಕೊಂಡಿದ್ದರು.
ಐಪಿಎಲ್ನಲ್ಲಿ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಆರ್ಸಿಬಿಗೆ ಟ್ರೋಫಿ ಗೆದ್ದು ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದ ಡಿಕೆ ಕನಸಿಗೆ ರಾಜಸ್ಥಾನ್ ರಾಯಲ್ಸ್ ಅಡ್ಡಗಾಲಿಕ್ಕಿತು. ದಿನೇಶ್ ಕಾರ್ತಿಕ್ 257 ಪಂದ್ಯಗಳಲ್ಲಿ 22 ಅರ್ಧಶತಕಗಳನ್ನು ಬಾರಿಸಿ 4,842 ರನ್ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 326 ರನ್ ಬಾರಿಸಿದ್ದಾರೆ.