ನ್ಯೂಯಾರ್ಕ್: ಟ್ವಿಟರ್ ಖರೀದಿಸುವುದಾಗಿ ಹೊರಟು ಬಳಿಕ ಪ್ರಸ್ತಾಪವನ್ನು ಕೈಬಿಟ್ಟಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಇದೀಗ (Elon Musk) ಇಂಗ್ಲೆಂಡ್‌ನ ವೃತ್ತಿಪರ ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಖರೀದಿಸುವುದಾಗಿ ಘೋಷಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
” ನಾನು ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಖರೀದಿಸುತ್ತಿದ್ದೇನೆ. ನಿಮಗೆ ಸ್ವಾಗತʼʼ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದು, ಕುತೂಹಲ ಮೂಡಿಸಿದೆ. ಆದರೆ ನಿಜಕ್ಕೂ ಮಸ್ಕ್ ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಖರೀದಿಸಲಿದ್ದಾರೆಯೇ ಎಂಬುದು ಗೊತ್ತಾಗಿಲ್ಲ.
ಅಮೆರಿಕ ಮೂಲದ ಗ್ಲೇಜರ್ ಫ್ಯಾಮಿಲಿ ಪ್ರಸ್ತುತ, ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಲಿಕತ್ವವನ್ನು ಹೊಂದಿದೆ. ೨೦೦೫ರಲ್ಲಿ ೯೫೫ ದಶಲಕ್ಷ ಡಾಲರ್ ಕೊಟ್ಟು (ಅಂದಾಜು ೭,೫೪೪ ಕೋಟಿ ರೂ.) ಗ್ಲೇಜರ್ ಫ್ಯಾಮಿಲಿಯು ಈ ಕ್ಲಬ್ ಅನ್ನು ಖರೀದಿಸಿತ್ತು. ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾರುಕಟ್ಟೆ ಮೌಲ್ಯ ೨.೦೮ ಶತಕೋಟಿ ಡಾಲರ್ (೧೬,೪೩೨ ಕೋಟಿ ರೂ.). ಈ ಕ್ಲಬ್ ೧೩ ಪ್ರೀಮಿಯರ್ ಲೀಗ್ ಟೈಟಲ್‌ಗಳನ್ನು ಗೆದ್ದುಕೊಂಡಿದೆ. ಆದರೆ ಇತ್ತೀಚೆಗೆ ಕಳಪೆ ಪ್ರದರ್ಶನಕ್ಕಾಗಿ ಸುದ್ದಿಯಲ್ಲಿತ್ತು. ಕಳಪೆ ಪ್ರದರ್ಶನಕ್ಕಾಗಿ ಅಭಿಮಾನಿಗಳ ಆಕ್ರೋಶ, ಪ್ರತಿಭಟನೆಯನ್ನೂ ತಂಡ ಎದುರಿಸಿದೆ.
ಜೋಕ್ ಎಂದು ಸ್ಪಷ್ಟಪಡಿಸಿದ ಮಸ್ಕ್: ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿ ಕುರಿತ ಟ್ವೀಟ್ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ ಎಲಾನ್ ಮಸ್ಕ್, ತಾವು ಯಾವುದೇ ಕ್ರೀಡಾ ತಂಡವನ್ನು ಖರೀದಿಸುತ್ತಿಲ್ಲ. ಜೋಕ್ ಮಾಡುವ ಸಲುವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತಿರುವುದಾಗಿ ಹೇಳಿದ್ದೇನೆ, ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆಯೂ ಮಸ್ಕ್ ತಮಾಷೆ, ಟ್ರೋಲ್ ಸಲುವಾಗಿಯೇ ಟ್ವಿಟರ್ ಅನ್ನು ಬಳಸಿಕೊಂಡ ನಿದರ್ಶನಗಳು ಇವೆ.
ಇದನ್ನೂ ಓದಿ:ಟ್ವಿಟರ್ ಖರೀದಿಸುವ 34 ಲಕ್ಷ ಕೋಟಿ ರೂ. ಡೀಲ್ ರದ್ದುಪಡಿಸಿದ ಎಲಾನ್ ಮಸ್ಕ್