ಹೈದರಾಬಾದ್: ಐಪಿಎಲ್ 16ನೇ ಅವೃತ್ತಿಯ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಳಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ 8 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಈ ಗೆಲುವಿಗೆ ಆರಂಭಿಕ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (100) ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ (71) ಅವರ ಅರ್ಧ ಶತಕಗಳೇ ಕಾರಣ. ಈ ಜೋಡಿ ಮೊದಲ ವಿಕೆಟ್ಗೆ 172 ರನ್ಗಳನ್ನು ಬಾರಿಸುವ ಮೂಲಕ ತಂಡದ ಜಯವನ್ನು ಸುಲಭವಾಗಿಸಿದರು. ಏತನ್ಮಧ್ಯೆ, ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಈ ಜತೆಯಾಟದ ಮೂಲಕ ಎರಡು ಹೊಸ ದಾಖಲೆಗಳನ್ನು ದಾಖಲಿಸಿದ್ದಾರೆ.
ವಿರಾಟ್ ಕೊಹ್ಲಿ_ ಫಾಪ್ ಡು ಪ್ಲೆಸಿಸ್ ಆರ್ಸಿಬಿ ಪರವಾಗಿ ನಾಲ್ಕನೇ ಬಾರಿ ಶತಕದ ಜತೆಯಾಟವನ್ನಾಡಿದ ದಾಖಲೆ ಮಾಡಿದರು. ಈ ಹಿಂದೆ ಅವರು ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರೊಂದಿಗೆ ನಾಲ್ಕು ಬಾರಿ ಶತಕದ ಜತೆಯಾಟ ನೀಡಿದ್ದರು. ಈ ಮೂಲಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ಪ್ಲೆಸಿಸ್ ಐಪಿಎಲ್ ತಂಡವೊಂದರ ಪರ ಆವೃತ್ತಿಯೊಂದರಲ್ಲಿ ಅತ್ಯಧಿಕ ಬಾರಿ ಆರಂಭಿಕರಾಗಿ ಅರ್ಧ ಶತಕದ ಜತೆಯಾಟವಾಡಿದ ದಾಖಲೆಯನ್ನೂ ಸೃಷ್ಟಿಸಿದರು. ವಿರಾಟ್ ಹಾಗೂ ಪ್ಲೆಸಿಸ್ ಅವರದ್ದು ಇದು ಆರನೇ ಅರ್ಧ ಶತಕದ ಜತೆಯಾಟವಾಗಿದೆ. ಈ ಹಿಂದೆ 2019ರಲ್ಲಿ ಎಸ್ಆರ್ಎಚ್ ತಂಡದ ಜಾನಿ ಬೇರ್ಸ್ಟೋವ್ ಹಾಗೂ ಡೇವಿಡ್ ವಾರ್ನರ್ ಏಳು ಬಾರಿ 50 + ರನ್ ಬಾರಿಸಿದ್ದರು. ಈ ಮೂಲಕ ಮತ್ತೊಂದು ದಾಖಲೆಯನ್ನು ಸರಿಗಟ್ಟಿದಂತಾಗಿದೆ.
ಆರನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ
ಆರ್ಸಿಬಿ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಬ್ಯಾಟಿಂಗ್ನಲ್ಲಿ ತಮ್ಮ ಅಬ್ಬರ ಪ್ರದರ್ಶಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 100 ರನ್ ಬಾರಿಸಿದ ಅವರು ಐಪಿಎಲ್ ಇತಿಹಾಸದಲ್ಲಿ ತಮ್ಮ ಆರನೇ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಗರಿಷ್ಠ ಶತಕಗಳನ್ನು ಬಾರಿಸಿದ ಆಟಗಾರ ಎಂಬ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಂಡೀಸ್ ದೈತ್ಯ ಆರು ಶತಕಗಳನ್ನು ಬಾರಿಸಿದ್ದರು. ಆರ್ಆರ್ ತಂಡ ಜೋಸ್ ಬಟ್ಲರ್ ಐದು ಶತಕಗಳನ್ನು ಬಾರಿಸಿ ಎರಡನೇ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಬ್ಯಾಟಿಂಗ್ನಲ್ಲಿ ಸೊರಗಿದ್ದ ವಿರಾಟ್ ಕೊಹ್ಲಿ ಹಾಲಿ ಆವೃತ್ತಿಯಲ್ಲಿ ಭರಪೂರ ರನ್ ಗಳಿಸಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ಇದು ನಾಲ್ಕು ವರ್ಷಗಳ ಬಳಿಕ ಬಾರಿಸಿದ ಐಪಿಎಲ್ ಶತಕವಾಗಿದೆ.
ಇದನ್ನೂ ಓದಿ : IPL 2023 : ಕ್ರಿಕೆಟ್ ಕಲಿಯಲು ಪ್ರಾರಂಭಿಸಿದಾಗಿನಿಂದ ವಿರಾಟ್ ಕೊಹ್ಲಿ ನನ್ನ ಆರಾಧ್ಯ ದೈವ: ಶುಭ್ಮನ್ ಗಿಲ್
2019ನೇ ಅವೃತ್ತಿಯಲ್ಲಿ ವಿರಾಟ್ ಕೊಹ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡ ವಿರುದ್ಧ ಶತಕ ಬಾರಿಸಿದ್ದರು. ಆ ಬಳಿಕದ ಮೂರು ಆವೃತ್ತಿಯಲ್ಲಿ ಅವರ ಬ್ಯಾಟಿಂಗ್ ವೈಖರಿ ಕಳೆಗುಂದಿತ್ತು. ಇದೀಗ ಎಸ್ಆರ್ಎಚ್ ವಿರುದ್ಧ ಮತ್ತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ.
ಹಾಲಿ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಆರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಒಟ್ಟಾರೆ ಆಡಿರುವ 13 ಪಂದ್ಯಗಳಲ್ಲಿ 538 ರನ್ ಬಾರಿಸಿದ್ದು ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಷ್ಟೊಂದು ಇನಿಂಗ್ಸ್ಗಳಲ್ಲಿ 52 ಫೊರ್ ಹಾಗೂ 15 ಸಿಕ್ಸರ್ಗಳನ್ನು ಬಾರಿಸಿದ್ದಾರೆ.