Site icon Vistara News

ಮ್ಯಾಚ್‌ ಫಿಕ್ಸಿಂಗ್‌ ಕಳಂಕಿತ ಅಂಪೈರ್‌ ಅಸದ್‌ ರೌಫ್‌ ಇನ್ನಿಲ್ಲ

Asad Rauf

ಇಸ್ಲಾಮಾಬಾದ್‌: ಮ್ಯಾಚ್‌ ಫಿಕ್ಸಿಂಗ್‌ ಹಗರಣದಲ್ಲಿ ಆರೋಪಿಯಾಗಿದ್ದ ಪಾಕಿಸ್ತಾನದ ವಿವಾದಾತ್ಮಕ ಕ್ರಿಕೆಟ್‌ ಅಂಪೈರ್‌ ಅಸದ್‌ ರೌಫ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ರೌಫ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಲಾಹೋರ್‌ನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಐಸಿಸಿಯ ಪಾಕಿಸ್ತಾನದ ಎಲೈಟ್ ಪ್ಯಾನೆಲ್‌ನ ಅಂಪೈರ್ ಆಗಿದ್ದ ಅವರು 64 ಟೆಸ್ಟ್‌, 139 ODIಗಳು ಮತ್ತು 28 T20 ಆಟಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ.

ರೌಫ್ 2000ನೇ ದಶಕದ ಮಧ್ಯಭಾಗದಲ್ಲಿ ಪಾಕಿಸ್ತಾನದ ಪ್ರಮುಖ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದರು. 2006ರಲ್ಲಿ ICCಯ ಎಲೈಟ್ ಪ್ಯಾನೆಲ್‌ಗೆ ನೇಮಕಗೊಂಡರು. ತಟಸ್ಥ ಅಂಪೈರ್‌ಗಳ ಯುಗ ಆರಂಭವಾಗುವ ಮುನ್ನ ಪಾಕಿಸ್ತಾನಿ ಅಂಪೈರಿಂಗ್‌ ಸುಧಾರಿಸುವ ಪ್ರಯತ್ನವನ್ನು ಮತ್ತೊಬ್ಬ ಅಂಪೈರ್‌ ಅಲೀಮ್ ದಾರ್ ಜೊತೆಗೆ ಮಾಡಿದರು. ರೌಫ್ ಅವರು ಅಂಪೈರಿಂಗ್ ಮಾಡುವ ಮೊದಲು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿದ್ದರು. 71 ಪ್ರಥಮ ದರ್ಜೆ ಪಂದ್ಯಗಳಿಂದ ಸರಾಸರಿ 28.76 ರನ್‌ರೇಟ್‌ ಹೊಂದಿದ್ದಾರೆ.‌

ಇದನ್ನೂ ಓದಿ | Sachin Tendulkar | ಗ್ರಿಪ್‌ಗಾಗಿ ಸಚಿನ್‌ ಕ್ರಿಕೆಟ್ ಬ್ಯಾಟ್‌ ಕ್ಲೀನ್‌ ಮಾಡಿದ್ದು ಟ್ರೋಲ್‌ ಆಗಿದ್ದೇಕೆ?

2013ರಲ್ಲಿ ರೌಫ್ ಅಂಪೈರ್‌ ಆಗಿದ್ದ ಐಪಿಎಲ್ ಪಂದ್ಯಾವಳಿಗಳಲ್ಲಿ ಮ್ಯಾಚ್‌ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಾಗ, ಮುಂಬಯಿ ಪೊಲೀಸರು ಅವರನ್ನು “ವಾಂಟೆಡ್ ಆರೋಪಿ” ಎಂದು ಹೆಸರಿಸಿದರು. ಇದರ ಪರಿಣಾಮ ಅವರ ವೃತ್ತಿಜೀವನ ಹಠಾತ್ತನೆ ಸ್ಥಗಿತಗೊಂಡಿತು. ಆ ಐಪಿಎಲ್ ಸೀಸನ್‌ ಅಂತ್ಯವಾಗುವ ಮೊದಲು ರೌಫ್‌ ಭಾರತವನ್ನು ತೊರೆದರು. ನಂತರದ ಚಾಂಪಿಯನ್ಸ್ ಟ್ರೋಫಿಯಿಂದಲೂ ಐಸಿಸಿ ಅವರನ್ನು ತೆಗೆದುಹಾಕಿತು. ಅವರನ್ನು ಐಸಿಸಿಯ ಎಲೈಟ್ ಪ್ಯಾನೆಲ್‌ನಿಂದಲೂ ಕೈಬಿಡಲಾಯಿತು.

ತಾನು ಅಪರಾಧಿಯಲ್ಲ ಎಂದು ರೌಫ್ ವಾದಿಸುತ್ತಲೇ ಇದ್ದರು. ಮರಳಿ ಅಂಪೈರಿಂಗ್‌ಗೆ ಬರಲು ಪ್ರಯತ್ನಿಸಿದ್ದರು. ಆದರೆ 2016ರಲ್ಲಿ ಭ್ರಷ್ಟಾಚಾರ ಮತ್ತು ದುರ್ನಡತೆಯ ನಾಲ್ಕು ಪ್ರಕರಣಗಳಲ್ಲಿ ರೌಫ್ ಅವರನ್ನು ಐದು ವರ್ಷಗಳ ಕಾಲ ನಿಷೇಧಿಸಿತು.

ಇದನ್ನೂ ಓದಿ | Robin Uthappa | ಎಲ್ಲ ಮಾದರಿಯ ಕ್ರಿಕೆಟ್‌ಗೆ ಕನ್ನಡಿಗ ರಾಬಿನ್‌ ಉತ್ತಪ್ಪ ನಿವೃತ್ತಿ

Exit mobile version