ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಗಾಯಗೊಂಡಿದ್ದಾರೆ. ಅವರು ಅಭ್ಯಾಸ ನಡೆಸುವ ವೇಳೆ ಮಾಂಸಖಂಡಗಳ ಒತ್ತಡ ಗಾಯಕ್ಕೆ ಒಳಗಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ವೈದ್ಯರು ಅವರಿಗೆ ವಿಶ್ರಾಂತಿ ಸೂಚಿಸಿರುವ ಕಾರಣ ಜೂನ್ 4ರಂದು ನೆದರ್ಲ್ಯಾಂಡ್ಸ್ನ ಹೆಂಜೆಲೊದಲ್ಲಿ ನಡೆಯಲಿರುವ ಫ್ಯಾನಿ ಬ್ಲಾಂಕರ್ಸ್-ಕೊಯೆನ್ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಗಾಯದ ಸಮಸ್ಯೆ ಕ್ರೀಡಾ ಕ್ಷೇತ್ರದ ಭಾಗವಾಗಿದೆ. ಅದರಿಂದ ಮುಕ್ತವಾಗಿರುವುದು ಸುಲಭವಲ್ಲ. ಅದೇ ರೀತಿ ಅದರಿಂದ ಹೊರಬರಲು ಪ್ರಯತ್ನಗಳನ್ನು ನಡೆಸಬೇಕಾಗಿದೆ ಎಂದು ನೀರಜ್ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
Will be back soon! 🙏 🇮🇳 pic.twitter.com/xJE86ULv5X
— Neeraj Chopra (@Neeraj_chopra1) May 29, 2023
ಇತ್ತೀಚೆಗೆ ನಾನು ತರಬೇತಿಯ ಸಮಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದೆ. ವೈದ್ಯಕೀಯ ಪರಿಶೀಲನೆ ನಂತರ, ನಾನು ಮತ್ತು ನನ್ನ ತಂಡವು ಗಾಯ ಉಲ್ಬಣಗೊಳ್ಳುವ ಅಪಾಯಗಳಿಂದ ತಪ್ಪಿಸಲು ನಿರ್ಧರಿಸಿದೆವು. ಅದಕ್ಕಾಗಿ ಹೆಂಜೆಲೊದಲ್ಲಿ ನಡೆಯಲಿರುವ ಎಫ್ಬಿಕೆ ಕ್ರೀಡಾಕೂಟದಿಂದ ಹಿಂದೆ ಸರಿಯಬೇಕಾಗಿದೆ. ಆಯೋಜಕರು ಮತ್ತು ಪಂದ್ಯಾವಳಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಇಂದೆ ನೀರಜ್ ಚೋಪ್ರಾ ಅವರು ಪುರುಷರ ಜಾವೆಲಿನ್ ಥ್ರೋನಲ್ಲಿ ವಿಶ್ವದ ನಂ.1 ಸ್ಥಾನಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. 25 ವರ್ಷದ ಚೋಪ್ರಾ ಮೇ 5ರಂದು ದೋಹಾದಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಸರಣಿಯ ಮೊದಲ ಚರಣದಲ್ಲೇ ಚಿನ್ನ ಪದಕಕ್ಕೆ ಪಾತ್ರರಾಗಿದ್ದರು. ಋತುವಿನ ಅವರ ಎಸೆತವೇ 88.67 ಮೀಟರ್ ಕ್ರಮಿಸಿತ್ತು. ಅಂತೆಯೇ 89.94 ಮೀಟರ್ ಎಸೆದು ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದ್ದರು.
ನೀರಜ್ ಚೋಪ್ರಾ ಜೂನ್ 13ರಂದು ಫಿಲ್ನೆಂಡ್ನ ತುರ್ಕುವಿನಲ್ಲಿ ನಡೆಯಲಿರುವ ಪಾವೊ ನೂರ್ಮಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾಗಿದೆ. ಅಷ್ಟರೊಳಗೆ ಅವರು ಗಾಯದ ಸಮಸ್ಯೆಯಿಂದ ಹೊರಬರುವರೇ ಎಂಬ ಮಾಹಿತಿ ಲಭ್ಯವಿಲ್ಲ .
ಇದನ್ನೂ ಓದಿ : Wrestlers Protest : ಕುಸ್ತಿಪಟುಗಳ ಬಂಧನದ ಬಗ್ಗೆ ಒಲಿಂಪಿಕ್ ಸ್ಟಾರ್ ನೀರಜ್ ಚೋಪ್ರಾ ಹೇಳಿದ್ದೇನು?
ಹಾಲಿ ಋತುವಿನಲ್ಲಿ ಹಲವಾರು ಸ್ಪರ್ಧೆಗಳು ಇದ್ದ ಕಾರಣ ನೀರಜ್ ಅವರಿಗೆ ಫಿನ್ಲೆಂಡ್ನ ಕುವಾರ್ಟೇನ್ ಒಲಿಂಪಿಕ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಲು ಉದ್ದೇಶಿಸಿದ್ದರು. ಅದಕ್ಕೆ ಕ್ರೀಡಾ ಸಚಿವಾಲಯ ಒಪ್ಪಿಗೆ ಕೊಟ್ಟಿತ್ತು. ವಿಮಾನ ಪ್ರಯಾಣದ ವೆಚ್ಚಗಳು, ತರಬೇತಿ ಶಿಬಿರದ ವೆಚ್ಚಗಳು, ಊಟ ಮತ್ತು ವಸತಿ ವೆಚ್ಚ, ವೈದ್ಯಕೀಯ ವಿಮೆ ಮತ್ತು ಪಾಕೆಟ್ ಹೊರಗಿನ ಭತ್ಯೆಗಾಗಿ ಅನುದಾನ ಬಿಡುಗಡೆ ಮಾಡಿತ್ತು.
ಋತುವಿನ ಆರಂಭಕ್ಕೆ ಮುಂಚಿತವಾಗಿ ಸಂವಾದವೊಂದರಲ್ಲಿ ಮಾತನಾಡಿದ್ದ ನೀರಜ್ ಚೋಪ್ರಾ, ತಮ್ಮ ಗಮನ 2024 ರ ಪ್ಯಾರಿಸ್ ಒಲಿಂಪಿಕ್ಸ್ನ ಚಿನ್ನದ ಪದಕ ಎಂದು ಹೇಳಿದ್ದರು.
ನಾನು ನನ್ನ ಸಾಧನೆಯನ್ನು ಉತ್ತಮಪಡಿಸಿಕೊಳ್ಳಬೇಕಾಗಿದೆ. ನನ್ನ ಮೊದಲ ಒಲಿಂಪಿಕ್ಸ್ ಸಾಧನೆ ಅದ್ಭುತವಾಗಿತ್ತು. ಗೆಲುವಿನ ಬಳಿಕ ನಾನು ಯಾವುದನ್ನೂ ಲಘುವಾಗಿ ತೆಗೆದುಕೊಂಡಿಲ್ಲ. ಪ್ಯಾರಿಸ್ 2024ರಲ್ಲಿ ಪ್ರಶಸ್ತಿ ಗೆಲ್ಲುವ ಗುರಿಯಿದೆ. ನನಗೆ ಸಾಧ್ಯವಾಗುವುದನ್ನು 100 ಪ್ರತಿಶತ ಮಾಡುತ್ತೇನೆ. ಅಂತೆಯೇ ಟೋಕಿಯೊ ಒಲಿಂಪಿಕ್ಸ್ಗೆ ಮಾಡಿದಕ್ಕಿಂತ ಕಠಿಣ ತರಬೇತಿ ಪಡೆಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.