ಮುಂಬಯಿ: ಗ್ರೇಸ್ ಹ್ಯಾರಿಸ್ (59 ರನ್, 26 ಎಸೆತ, 7 ಫೋರ್, 3 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಯುಪಿ ವಾರಿಯರ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2023) ಭಾನುವಾರದ (ಮಾರ್ಚ್ 5) ಎರಡನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧ 3 ವಿಕೆಟ್ಗಳ ವೀರೋಚಿತ ವಿಜಯ ಸಾಧಿಸಿತು. ಕೊನೇ ಒಂದು ಎಸೆತ ಬಾಕಿ ಇರುವಾಗ ಯುಪಿ ತಂಡ ಸಿಕ್ಸರ್ನೊಂದಿಗೆ ಗೆಲುವು ಸಾಧಿಸಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಯುಪಿ ತಂಡದ ಗೆಲುವಿಗೆ ಕೊನೇ ಓವರ್ನಲ್ಲಿ 19 ರನ್ ಬೇಕಾಗಿತ್ತು. ಆದರೆ, ಐದು ಎಸೆತಗಳಲ್ಲಿ 24 ರನ್ ಬಾರಿಸಿ ಸಂಭ್ರಮಿಸಿತು. ಇದರೊಂದಿಗೆ ಗುಜರಾತ್ ತಂಡ ಸತತ ಎರಡು ಸೋಲಿಗೆ ಒಳಗಾಯಿತು. ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲಿಗೆ ಒಳಗಾಗಿತ್ತು.
ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 169 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಬಳಗ 19. 5 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಯುಪಿ ತಂಡ ಎಂಟನೇ ವಿಕೆಟ್ಗೆ 70 ರನ್ ಕಲೆ ಹಾಕಿ ಅಧಿಕಾರಯುತ ಗೆಲುವು ತನ್ನದಾಗಿಸಿಕೊಂಡಿತು. ಗ್ರೇಸ್ ಹ್ಯಾರಿಸ್ಗೆ ಸೋಫಿ ಎಕ್ಲೆಸ್ಟೋನ್ ಉತ್ತಮ ಸಾಥ್ ಕೊಟ್ಟರು. ಅವರು 12 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸರ್ ನೆರವಿನಿಂದ 22 ರನ್ ಬಾರಿಸಿದರು. ಅದಕ್ಕಿಂತ ಮೊದಲು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಕಿರಣ್ ನವ್ಗಿರೆ (53) ಅರ್ಧ ಶತಕ ಬಾರಿಸಿ ಗೆಲುವಿನಲ್ಲಿ ಪಾತ್ರ ವಹಿಸಿದರು.
ಹ್ಯಾರಿಸ್ ಅಬ್ಬರ
15, 4 ಓವರ್ಗಳಲ್ಲಿ 105 ಗಳಿಸಿ ಏಳು ವಿಕೆಟ್ ಕಳೆದುಕೊಂಡಿದ್ದ ಯುಪಿ ತಂಡದ ಸೋಲು ನಿಶ್ಚಯ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಗ್ರೇಸ್ ಹಾಗೂ ಪರಿಸ್ಥಿತಿ ಬದಲಾಯಿಸಿದರು. ಈ ಜೋಡಿ 25 ಎಸೆತಗಳಲ್ಲಿ 70 ರನ್ ಬಾರಿಸಿದರೂ. ಅದರಲ್ಲೂ ಗ್ರೇಸ್ ಹ್ಯಾರಿಸ್ 25 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದರು.
ಅದಕ್ಕಿಂತ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಗುಜರಾತ್ ತಂಡ ಉತ್ತಮ ಮೊತ್ತ ಪೇರಿಸಿತು. ಸರಾಗವಾಗಿ ರನ್ ಕಲೆ ಹಾಕುತ್ತಾ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ಆರಂಭಿಕರಾಗಿ ಆಡಲು ಇಳಿದ ಸಬ್ಬಿನೇನಿ ಮೇಘನಾ (24) ಹಾಗೂ ಸೋಫಿ ಡಂಕ್ಲಿ (13) ಸ್ವಲ್ಪ ಹೊತ್ತು ಕ್ರೀಸ್ಗೆ ಅಂಟಿ ನಿಂತರು. ಈ ಜೋಡಿ ಮೊದಲ ವಿಕೆಟ್ಗೆ 34 ರನ್ ಗಳಿಸಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಹರ್ಲಿನ್ ಡಿಯೋಲ್ ಏಳು ಫೋರ್ಗಳ ಸಮೇತ 46 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಇದನ್ನೂ ಓದಿ : WPL 2023 : ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದಿಂದ ಬ್ಯಾಟಿಂಗ್ ಆಯ್ಕೆ
ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಅನ್ನಾಬೆಲ್ ಸದರ್ಲೆಂಡ್ (8) ಹಾಗೂ ಶುಷ್ಮಾ ವರ್ಮಾ (9) ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ, ಆ ಬಳಿಕ ಆಡಲು ಇಳಿದ ಆಶ್ಲೇ ಗಾರ್ಡ್ನರ್ (25) ಹಾಗೂ ಡಿ ಹೇಮಲತಾ (21) ಉತ್ತಮ ಸ್ಕೋರ್ ದಾಖಲಿಸಲು ನೆರವಾದರು.
ಯುಪಿ ವಾರಿಯರ್ಸ್ ತಂಡದ ಪರ ದೀಪ್ತಿ ಶರ್ಮಾ (27 ರನ್ಗಳಿಗೆ 2 ವಿಕೆಟ್) ಹಾಗೂ ಸೋಫಿ ಎಕ್ಲೆಸ್ಟೋನ್ (25 ರನ್ಗಳಿಗೆ 2 ವಿಕೆಟ್) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.