ಮುಂಬಯಿ: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿ ಮೆರೆಯುತ್ತಿದ್ದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ಗೆ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೋಲಿನ ರುಚಿ ತೋರಿಸಿದೆ. 27 ರನ್ ಅಂತರದಿಂದ ಗೆದ್ದ ರೋಹಿತ್ ಪಡೆ 14 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರಿದೆ.
ಮುಂಬಯಿಯ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್, ಸೂರ್ಯಕುಮಾರ್ ಯಾದವ್(103*) ಅವರ ಸೊಗಸಾದ ಶತಕ ಮತ್ತು ವಿಷ್ಣು ವಿನೋದ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಜವಾಬಿತ್ತ ಗುಜರಾತ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿ ಸಣ್ಣ ಅಂತರದ ಸೋಲು ಕಂಡಿತು. ಮುಂಬೈ ಗೆಲುವಿನಿಂದ ಆರ್ಸಿಬಿಯ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣಗೊಂಡಿದೆ.
ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಗುಜರಾತ್ ಆರಂಭದಿಂದಲೇ ವಿಕೆಟ್ ಕೈಚೆಲ್ಲಿತು. ಕಳೆದ ಪಂದ್ಯದ ಹೀರೋಗಳೆಲ್ಲ ಈ ಪಂದ್ಯದಲ್ಲಿ ಪೆವಿಲಿಯನ್ ಪರೇಡ್ ನಡೆಸಿದರು. ವೃದ್ಧಿಮಾನ್ ಸಾಹಾ(2), ಶುಭಮನ್ ಗಿಲ್(6), ನಾಯಕ ಹಾರ್ದಿಕ್ ಪಾಂಡ್ಯ (4) ಹೀಗೆ ಸಿಂಗಲ್ ಡಿಜಿಟ್ಗೆ ಸೀಮಿತರಾದರು. ಡೇವಿಡ್ ಮಿಲ್ಲರ್ ಮತ್ತು ವಿಜಯ್ ಶಂಕರ್ ಅವರು ಕೆಳ ಕ್ರಮಾಂಕದಲ್ಲಿ ಸಣ್ಣ ಮಟ್ಟದ ಹೋರಾಟ ನಡೆಸಿದರೂ ಅವರಿಂದ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ಸಾಧ್ಯವಾಗಲಿಲ್ಲ. ಮಿಲ್ಲರ್ 41 ಮತ್ತು ವಿಜಯ್ ಶಂಕರ್ 29 ರನ್ ಬಾರಿಸಿದರು. ಮುಂಬೈ ಪರ ಆಕಾಶ್ ಮಧ್ವಲ್ ಘಾತಕ ಬೌಲಿಂಗ್ ದಾಳಿ ನಡೆಸಿ ಗುಜರಾತ್ ಬ್ಯಾಟರ್ಗಳ ಹುಟ್ಟಡಗಿಸಿದರು. ನಾಲ್ಕು ಓವರ್ ಎಸೆದು ಮೂರು ವಿಕೆಟ್ ಪಡೆದರು.
ಅರ್ಧಶತಕ ಬಾರಿಸಿದ ರಶೀದ್ ಖಾನ್
ಅಂತಿಮ ಹಂತದಲ್ಲಿ ರಶೀದ್ ಖಾನ್ ಅವರು ಬಿರುಸಿನ ಬ್ಯಾಟಿಂಗ್ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಅಗ್ರ ಕ್ರಮಾಂಕದ ಬ್ಯಾಟರ್ಗಳು ಅನುಭವಿಸಿದ ಘೋರ ಬ್ಯಾಟಿಂಗ್ ವೈಫಲ್ಯ. 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಶೀದ್ ಖಾನ್ ಅಂತಿಮವಾಗಿ 32 ಎಸೆತಗಳಿಂದ ಅಜೇಯ 79 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ ಬರೋಬ್ಬರಿ 10 ಸಿಕ್ಸರ್ ಸಿಡಿಯಿತು. ಬೌಲಿಂಗ್ನಲ್ಲಿಯೂ ಮಿಂಚಿದ ರಶೀದ್ ಖಾನ್ ನಾಲ್ಕು ವಿಕೆಟ್ ಪಡೆದರು. ಒಟ್ಟಾರೆ ಅವರದ್ದು ಈ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನವಾಗಿತ್ತು. ಅವರ ಈ ಬ್ಯಾಟಿಂಗ್ ಸಾಹಸದಿಂದ ಗುಜರಾತ್ ತಂಡ ದೊಡ್ಡ ಅಂತರದಿಂದ ಸೋಲುವ ಅವಮಾನದಿಂದ ಪಾರಾಯಿತು.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ಚೊಚ್ಚಲ ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್
ಮುಂಬೈ ಉತ್ತಮ ಆರಂಭ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಸೇರಿಕೊಂಡು ಓವರ್ಗೆ 10 ಸರಾಸರಿಯಲ್ಲಿ ಬ್ಯಾಟ್ ಬೀಸಿದರು. ಉಭಯ ಆಟಗಾರರ ಬ್ಯಾಟಿಂಗ್ ಆರ್ಭಟದ ಮುಂದೆ ಗುಜರಾತ್ ವೇಗಿಗಳು ಹಿಡಿತ ತಪ್ಪಿದರು. ಹಲವು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದ ರೋಹಿತ್ ಶರ್ಮ ಅವರು ಈ ಪಂದ್ಯದಲ್ಲಿ 29 ರನ್ ರನ್ ಬಾರಿಸಿ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಮತ್ತು ಇಶಾನ್ ಮೊದಲ ವಿಕೆಟ್ಗೆ 61 ರನ್ ಒಟ್ಟುಗೂಡಿಸಿದರು.
ರೋಹಿತ್ ವಿಕೆಟ್ ಪತನದ ಬಳಿಕ 5 ರನ್ ಅಂತರದಲ್ಲಿ ಇಶಾನ್ ಕಿಶನ್ ವಿಕೆಟ್ ಕೂಡ ಬಿತ್ತು. ಈ ವಿಕೆಟ್ ಕೂಡ ರಶೀದ್ ಪಾಲಾಯಿತು. ಆದರೆ ರಶೀದ್ ಅವರ ವಿಕೆಟ್ ದಾಹ ಇಲ್ಲಿಗೆ ನಿಲ್ಲಲಿಲ್ಲ. ಮುಂದಿನ ಓವರ್ನಲ್ಲಿ ನೆಹಾಲ್ ವಧೇರಾ ಅವರ ವಿಕೆಟ್ ಕೂಡ ಉಡಾಯಿಸಿದರು. ಇಶಾನ್ 31 ರನ್ ಗಳಿಸಿದರೆ, ವಧೇರಾ 15 ರನ್ ಬಾರಿಸಿದರು.
ಸಿಡಿದ ಸೂರ್ಯ-ವಿನೋದ್
ಟಿ20 ಕ್ರಿಕೆಟ್ನ ನಂ.1 ಖ್ಯಾತಿಯ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಈ ಪಂದ್ಯದಲ್ಲಿಯೂ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ನೆರೆದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಕೇರಳ ಮೂಲಕ ವಿಷ್ಣು ವಿನೋದ್ ಕೂಡ ಉತ್ತಮ ಸಾಥ್ ನೀಡಿದರು. ಅವರ ಬ್ಯಾಟಿಂಗ್ ಕೂಡ ಬಿರುಸಿನಿಂದಲೇ ಕೂಡಿತ್ತು. ಉಭಯ ಆಟಗಾರರ ಬ್ಯಾಟಿಂಗ್ ವೇಗದಿಂದ ಮುಂಬೈ ಮತ್ತೆ ಬ್ಯಾಟಿಂಗ್ ಚೇತರಿಕೆ ಕಂಡಿತು.
ಇದನ್ನೂ ಓದಿ IPL 2023: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್
ನಟರಾಜ ಭಂಗಿಯ ಶೈಲಿಯಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿ ಬಾರಿಸಿ 31 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ವಿಷ್ಣು ವಿನೋದ್ ಅವರು 19 ಎಸೆಗಳಿಂದ 30 ರನ್ ಬಾರಿಸಿದರು. ಈ ಸ್ಫೋಟಕ ಇನಿಂಗ್ಸ್ ವೇಳೆ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಿಡಿಯಿತು. ಅಂತಿಮ ಹಂತದ ವರೆಗೂ ಬ್ಯಾಟಿಂಗ್ ಕಾಯ್ದುಕೊಂಡ ಸೂರ್ಯಕುಮಾರ್ ಗುಜರಾತ್ ಬೌಲರ್ಗಳನ್ನು ಚೆಂಡಾಡಿ ಚೊಚ್ಚಲ ಐಪಿಎಲ್ ಶತಕ ಬಾರಿಸಿ ಮಿಂಚಿದರು. 49 ಎಸೆತ ಎದುರಿಸಿದ ಅವರು ಬರೋಬ್ಬರಿ 11 ಬೌಂಡರಿ ಮತ್ತು 6 ಸಿಕ್ಸರ್ ನರೆವಿನಿಂದ ಅಜೇಯ 103 ರನ್ ಗಳಿಸಿದರು.