ಅಹಮದಾಬಾದ್ : ಶುಭ್ಮನ್ ಗಿಲ್ ಬಾರಿಸಿದ ಅಮೋಘ ಶತಕದ ನೆರವಿನಿಂದ ಮಿಂಚಿದ ಗುಜರಾತ್ ಜೈಂಟ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 62ನೇ ಪಂದ್ಯದಲ್ಲಿ 188 ರನ್ ಪೇರಿಸಿದೆ. ಇದು ಐಪಿಎಲ್ನಲ್ಲಿ ಶುಭ್ಮನ್ ಗಿಲ್ ಬಾರಿಸಿದ ಮೊದಲ ಶತಕ. ಈ ಮೂಲಕ ಪ್ರವಾಸಿ ಸನ್ರೈಸರ್ಸ್ ತಂಡದ ಗೆಲುವಿಗೆ 189 ರನ್ಗಳ ಸ್ಪರ್ಧಾತ್ಮಕ ಮೊತ್ತ ಎದುರಾಗಿದೆ.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಗುಜರಾತ್ ಬಳಗ 20 ಓವರ್ಗಳಲ್ಲಿ 9 ವಿಕೆಟ್ ನಷ್ಟ ಮಾಡಿಕೊಂಡು 188 ರನ್ ಬಾರಿಸಿತು.
ಬ್ಯಾಟ್ ಮಾಡಲು ಆರಂಭಿಸಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಾಹ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಉಂಟಾಯಿತು. ಭುವನೇಶ್ವರ್ ಕುಮಾರ್ ಮೂರನೇ ಎಸೆತದಲ್ಲಿಯೇ ಅವರನ್ನು ವಾಪಸ್ ಪೆವಿಲಿಯನ್ಗೆ ಕಳುಹಿಸಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಸಾಯಿ ಸುದರ್ಶನ್ ಉತ್ತಮವಾಗಿ ಆಡಿದರು. ಈ ಜೋಡಿ 145 ರನ್ಗಳ ಜತೆಯಾಟ ನೀಡಿದರು. ಈ ಜೋಡಿ 14. 1 ಓವರ್ಗಳಲ್ಲಿ ತಂಡದ ಮೊತ್ತವನ್ನು 147ಕ್ಕೆ ಏರಿಸಿದರು.
ಸಾಯಿ ಸುದರ್ಶನ್ ಔಟಾದ ಬಳಿಕ ಗುಜರಾತ್ ತಂಡದ ವಿಕೆಟ್ಗಳು ಸತತವಾಗಿ ಪತನಗೊಂಡವು. ಹಾರ್ದಿಕ್ ಪಾಂಡ್ಯ 8 ರನ್ಗೆ ಔಟಾದರೆ, ಡೇವಿಡ್ ಮಿಲ್ಲರ್ 7 ರನ್ಗೆ ಸೀಮಿತಗೊಂಡರು. ರಾಹುಲ್ ತೆವಾಟಿಯಾ 3 ರನ್ ಬಾರಿಸಿ ಕ್ಯಾಚಿತ್ತು ನಿರ್ಗಮಿಸಿದರು. ಹೀಗಾಗಿ ಕೊನೇ ಹಂತದಲ್ಲಿ ಗುಜರಾತ್ ತಂಡದ ಬ್ಯಾಟರ್ಗಳಿಂದ ಉತ್ತಮ ಮೊತ್ತ ಕೂಡಿಕೆಯಾಗಲಿಲ್ಲ. ಹೈದರಾಬಾದ್ ಬೌಲರ್ಗಳು ಮೆರೆದಾಡಿದರು.
ಕೊನೇ ಓವರ್ನಲ್ಲಿ ನಾಲ್ಕು ವಿಕೆಟ್ ಪತನ
19ನೇ ಓವರ್ನ ಅಂತ್ಯಕ್ಕೆ ಗುಜರಾತ್ ತಂಡ 186 ರನ್ ಬಾರಿಸಿತ್ತು. ಹೀಗಾಗಿ ರನ್ 200 ರನ್ಗಳ ಸನಿಹ ಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬೌಲರ್ ಭುವನೇಶ್ವರ್ ಕುಮಾರ್ ಗುಜರಾತ್ ಯೋಜನೆಗಳನ್ನು ಉಲ್ಟಾ ಮಾಡಿದರು. ಅವರು ಈ ಓವರ್ನಲ್ಲಿ ಒಂದು ರನ್ಔಟ್ ಸೇರಿದಂತೆ ನಾಲ್ಕು ವಿಕೆಟ್ ಉರುಳುವಂತೆ ನೋಡಿಕೊಂಡರು. ಅವರ ಬೌಲಿಂಗ್ ಅಬ್ಬರಕ್ಕೆ ಗುಜರಾತ್ ತಂಡದ ಬೌಲರ್ಗಳು ತಲೆಬಾಗಿದರು. ಹೀಗಾಗಿ ಕೇವಲ 2 ರನ್ ಮಾತ್ರ ಸೇರಿಸಲು ಸಾಧ್ಯವಾಯಿತು.