ಲಂಡನ್: 2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ಮೈದಾನದಲ್ಲಿ ನಡೆದಿದ್ದ ಟಿ-20 ವಿಶ್ವಕಪ್(t20 world cup 2022) ಪಂದ್ಯದ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್(Haris Rauf) ಬೌಲಿಂಗ್‌ಗೆ ವಿರಾಟ್ ಕೊಹ್ಲಿ(Virat Kohli) ಲೀಲಾಜಾಲವಾಗಿ ಸಿಕ್ಸರ್ ಬಾರಿಸಿದ್ದನ್ನು ಯಾವ ಭಾರತೀಯನೂ ಮರೆತಿರಲಿಕ್ಕಿಲ್ಲ. ಕೊಹ್ಲಿ ಈ ಓವರ್‌ನಲ್ಲಿ ಬಾರಿಸಿದ ಸಿಕ್ಸರ್ನಿಂದಾಗಿ ಅಂದು ಭಾರತ(t20 world cup 2022 ind vs pak) ಪಂದ್ಯವನ್ನು ಗೆದ್ದು ಬೀಗಿತ್ತು. ಇದೀಗ ದಿ ಹಂಟ್ರೆಡ್ ಕ್ರಿಕೆಟ್ ಟೂರ್ನಿಯನ್ನಾಡುತ್ತಿದ್ದ ರೌಫ್ ಅವರನ್ನು ಭಾರತೀಯ ಅಭಿಮಾನಿಯೊಬ್ಬ ಕೆಣಕ್ಕಿದ ವಿಡಿಯೊ ವೈರಲ್(viral video) ಆಗಿದೆ.
ಲಂಡನ್ ಸ್ಪಿರೀಟ್ ವಿರುದ್ಧದ ಪಂದ್ಯದಲ್ಲಿ ಹ್ಯಾರಿಸ್ ರೌಫ್ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಋು. ಈ ವೇಳೆ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಯೊಬ್ಬ ಹಿಂದಿಯಲ್ಲಿ ರೌಫ್ ಭಾಯ್…ರೌಫ್ ಭಾಯ್ ಎಂದು ಕರೆದು ನೆನೆಪಿದೆಯಾ ಅಂದು ಮೆಲ್ಬರ್ನ್ ಮೈದಾನದಲ್ಲಿ ನಿಮ್ಮ ಓವರ್‌ನಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸಿದ್ದು ಎಂದು ಹೇಳುವ ಮೂಲಕ ಕೀಚಾಯಿಸಿದ್ದಾರೆ. ಈ ವೇಳೆ ರೌಫ್ ತಲೆಯಾಡಿಸುತ್ತಾ ಹಾ ನೆನಪಿದೆ ಎನ್ನುವಂತೆ ಸನ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ರೌಫ್ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು. ಕೊಹ್ಲಿ ಈ 2 ಸಿಕ್ಸರ್ ಬಾರಿಸದೇ ಹೋಗಿದ್ದರೆ ಪಾಕಿಸ್ತಾನ ಪಂದ್ಯವನ್ನು ಗೆಲ್ಲುತ್ತಿತ್ತು. ರೌಫ್ ಈ ಓವರ್‌ನಲ್ಲಿ 15 ರನ್ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 82 ರನ್ ಬಾರಿಸಿ ಭಾರತದ ಗೆಲುವಿನ ಹೀರೊ ಎನಿಸಿಕೊಂಡಿದ್ದರು.
ಇದನ್ನೂ ಓದಿ ಮ್ಯಾಚ್ ಫಿಕ್ಸಿಂಗ್ ಕಳಂಕಿತ ಅಂಪೈರ್ ಅಸದ್ ರೌಫ್ ಇನ್ನಿಲ್ಲ
ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ರೌಫ್
ಈ ಬಾರಿಯ ಟ್ವಿ20 ವಿಶ್ವಕಪ್ ಟೂನಿಯ ವೇಳೆ ಹ್ಯಾರಿಸ್ ರೌಫ್ ಅಭಿಮಾನಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ ಭಾರೀ ಟೀಕೆಗೆ ಒಳಗಾಗಿದ್ದರು. ಫ್ಲೋರಿಡಾದಲ್ಲಿ ರೌಫ್ ಅವರು ಪತ್ನಿ ಜತೆ ತಾವು ತಂಗಿದ್ದ ಹೋಟೆಲ್ಗೆ ಹೋಗುತ್ತಿದ್ದಾಗ ವೇಳೆ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದ. ಈ ವೇಳೆ ರೌಫ್, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದರು. ಇದಕ್ಕೆ ಸಿಟ್ಟಿನಿಂದ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದು ರೌಫ್ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಏಕಾಏಕಿ ಓಡಿ ಬಂದು ಈತನ ಮೇಲೆ ರೌಫ್ ಹಲ್ಲೆಗೆ ಯತ್ನಿಸಿದ್ದರು. ಈ ವಿಡಿಯೊ ಭಾರೀ ವೈರಲ್ ಆಗಿತ್ತು.
ಪತ್ನಿ ರೌಫ್ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್ ಅವರ ಮ್ಯಾನೇಜರ್ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡಿಸಿದ್ದರು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು.