ಚೆನ್ನೈ: 1983ರ ಏಕದಿನ(1983 World Cup) ವಿಶ್ವಕಪ್ ಟೂರ್ನಿಯಲ್ಲಿ ನಡೆದಿದ್ದ ರೀತಿಯಲ್ಲೇ ಕಾಕತಾಳಿಯ ಘಟನೆಯೊಂದು ಭಾನುವಾರದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿಯೂ ನಡೆದಿದೆ. ಅಂದು ಜಿಂಬಾಬ್ಬೆ ವಿರುದ್ಧದ ಲೀಗ್ ಪಂದ್ಯದಲ್ಲಿ ಭಾರತದ ವಿಕೆಟ್‌ಗಳು ತರಗೆಲೆಯಂತೆ ಉದುರುತ್ತಿದ್ದಾಗ ನಾಯಕ ಕಪಿಲ್‌ದೇವ್(Kapil Dev) ಸ್ನಾನ ಮಾಡುತ್ತಿದ್ದರು. ಇಂದು ಆಸೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರ ವಿಕೆಟ್ ಬೇಳುತ್ತಿದ್ದಾಗ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಕೂಡ ಸ್ನಾನ ಮಾಡುತ್ತಿದ್ದರು. ತರಾತುರಿಯಲ್ಲಿ ಕ್ರೀಸ್ಗೆ ಬಂದ ಉಭಯ ಆಟಗಾರರು ಕೂಡ ಪಂದ್ಯವನ್ನು ಗೆಲ್ಲಿಸಿದ್ದು ವಿಶ್ವಕಪ್ನ ಸ್ಮರಣೀಯ ಘಟನೆಯ ಪುಟ ಸೇರಿದೆ.
ಬಾತ್‌ರೂಮ್‌ಗೆ ತೆರಳಿದ್ದ ಕಪಿಲ್…
ಅದು ಜಿಂಬಾಬ್ವೆ ವಿರುದ್ಧದ ಲೀಗ್ ಪಂದ್ಯ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡೊಡನೆ ಕಪಿಲ್‌ದೇವ್ ಬಾತ್‌ರೂಮ್‌ಗೆ ತೆರಳಿದ್ದರು. ಫ್ರೆಶ್ ಆಗಿ ಬ್ಯಾಟಿಂಗಿಗೆ ಇಳಿಯುವುದು ಅವರ ಉದ್ದೇಶವಾಗಿತ್ತು. ಆದರೆ ಜಿಂಬಾಬ್ವೆ ಘಾತಕ ಬೌಲಿಂಗ್ ದಾಳಿ ನಡೆಸಿದ ಪರಿಣಾಮ ತಂಡದ ಮೊತ್ತ 9 ರನ್ ಆಗುವಷ್ಟರಲ್ಲಿ ಗಾವಸ್ಕರ್, ಶ್ರೀಕಾಂತ್, ಮೊಹಿಂದರ್ ಮತ್ತು ಸಂದೀಪ್ ಪಾಟೀಲ್ ವಿಕೆಟ್ ಉರುಳಿತ್ತು. ಇದೇನು ಗ್ರಹಚಾರವಪ್ಪ ಎಂದು ಒತ್ತಡಕ್ಕೊಳಗಾದ ಆಟಗಾರರೆಲ್ಲ ಸೀದಾ ಬಾತ್‌ರೂಮ್ ಕಡೆ ಹೆಜ್ಜೆ ಹಾಕಿದ್ದರು. ಹೊರಗಿನಿಂದಲೇ ಕಪಿಲ್‌ಗೆ ವಿಷಯ ತಿಳಿಸಿದ್ದರು. ಕಪಿಲ್ ಅರ್ಧಕ್ಕೆ ಸ್ನಾನ ಮುಗಿಸಿ ಪ್ಯಾಡ್ ಕಟ್ಟಿ ಅಂಗಳಕ್ಕಿಳಿದರು.
ಭಾರತದ 5 ವಿಕೆಟ್ 17 ರನ್ನಿಗೆ ಬಿದ್ದಾಗ ಕಪಿಲ್ ಸುಂಟರಗಾಳಿಯಂಥ ಬ್ಯಾಟಿಂಗ್ ನಡೆಸ ಅಜೇಯ 175 ರನ್ ಬಾರಿಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಇದು ಭಾರತೀಯ ಏಕದಿನ ಚರಿತ್ರೆಯ ಮೊದಲ ಶತಕವಾದರೆ, ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು. ಇತ್ತೀಚೆಗೆ ತೆರೆಕಂಡ 83 ಎನ್ನುವ ಏಕದಿನ ವಿಶ್ವಕಪ್ ಜಯಭೇರಿಯನ್ನು ಆಧರಿಸಿದ ಹಿಂದಿ ಚಿತ್ರದಲ್ಲಿ ಈ ಘಟನೆಯನ್ನೂ ತೋರಿಸಲಾಗಿದೆ.
ಇದನ್ನೂ ಓದಿ ಬಾರಿಸಿದ್ದು ಬೌಂಡರಿಗೆ, ಚೆಂಡು ಜಿಗಿದದ್ದು ಸಿಕ್ಸರ್ಗೆ; ಬೇಸರದಲ್ಲಿ ಮೈದಾನದಲ್ಲೇ ಕುಳಿತ ರಾಹುಲ್
KL Rahul in 2023 🤝 Kapil Dev in 1983#INDvAUS pic.twitter.com/Ca51uOEaFc
— Utsav 💔 (@utsav__45) October 8, 2023
ಸ್ನಾನ ಮುಗಿಸಿ ಮೈದಾನಕ್ಕೆ ಓಡಿ ಬಂದ ರಾಹುಲ್
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೊದಲು ಬೌಲಿಂಗ್ ನಡೆಸಿದ ಭಾರತ ಘಾತಕ ಬೌಲಿಂಗ್ ನಡೆಸಿ ಕಮಿನ್ಸ್ ಪಡೆಯನ್ನು 199ಕ್ಕೆ ಕಟ್ಟಿ ಹಾಕಿತ್ತು. ಸಣ್ಣ ಮೊತ್ತವನ್ನು ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್ಗಳು ಬೆನ್ನಟ್ಟಬಹುದು ಎಂದು ಯೋಚಿಸಿ ರಾಹುಲ್ ಸ್ನಾನ ಮಾಡಿ ವಿಶ್ರಾಂತಿ ಪಡೆಯವ ಯೋಜನೆಯಲ್ಲಿದ್ದರಂತೆ. ಆದರೆ ಅವರು ಬಾತ್ ರೂಮ್ನಿಂದ ಹೊರ ಬರುತ್ತಿದ್ದಂತೆ 2 ರನ್ಗೆ ತಂಡದ ಮೂರು ವಿಕೆಟ್ ಉರುಳಿ ಹೋಗಿತ್ತು. ಸರಿಯಾಗಿ ದೇಹದ ಒದ್ದೆಯನ್ನು ಒರೆಸಿಕೊಳ್ಳದೆ ತರಾತುರಿಯಲ್ಲಿ ಪ್ಯಾಟ್ ಮತ್ತು ಗ್ಲೌಸ್ ಕಟ್ಟಿಕೊಂಡು ಮೈದಾನಕ್ಕೆ ಓಡಿ ಬಂದೆ ಎಂದು ರಾಹುಲ್ ಪಂದ್ಯದ ಮುಕ್ತಾಯಕ ಬಳಿಕ ಹೇಳಿದರು. ಇದೇ ರೀತಿಯ ಸಂಕಟ ಅಂದು ಕಪಿಲ್ ದೇವ್ಗೂ ಎದುರಾಗಿತ್ತು. ಕಪಿಲ್ ಅವರಂತೆ ರಾಹುಲ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ನಡಸಿ ಅಜೇಯ 97 ರನ್ಗಳ ಕೊಡುಗೆ ನೀಡಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟರು.