Site icon Vistara News

ICC World Cup 2023: ಸೆಮಿ ಪಂದ್ಯಗಳ ಅಂಪೈರ್​ ಪಟ್ಟಿ, ಮಳೆ ನಿಯಮ ಹೀಗಿದೆ

semifinals umpire

ಮುಂಬಯಿ: ವಿಶ್ವಕಪ್​ ಟೂರ್ನಿಯ(ICC World Cup 2023) ಸೆಮಿಫೈನಲ್​ ಪಂದ್ಯಗಳು ಬುಧವಾರದಿಂದ ಆರಂಭಗೊಳ್ಳಲಿದೆ. ನಾಳೆ ನಡೆಯುವ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ)​ ಮುಖಾಮುಖಿಯಾಗಲಿದೆ. ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(AUS vs SA) ಸೆಣಸಾಡಲಿವೆ. ಈ ಪಂದ್ಯಗಳ ಅಂಪೈರ್​ಗಳು(semi-finals umpires) ಮತ್ತು ಮಳೆ ನಿಯಮದ ಸಂಪೂರ್ಣ ಮಾಹಿತಿ ಇಂತಿದೆ.

ಸೆಮಿಫೈನಲ್‌ ಪಂದ್ಯಗಳ ಅಂಪೈರ್​ಗಳ ಪಟ್ಟಿ

ಭಾರತ- ನ್ಯೂಜಿಲ್ಯಾಂಡ್‌

ಫೀಲ್ಟ್​ ಅಂಪಾಯರ್: ರಿಚರ್ಡ್‌ ಇಲ್ಲಿಂಗ್‌ವರ್ತ್‌, ರಾಡ್‌ ಟ್ಯುಕರ್‌

ಥರ್ಡ್‌ ಅಂಪಾಯರ್‌: ಜೋಯೆಲ್‌ ವಿಲ್ಸನ್‌

ಫೋರ್ತ್‌ ಅಂಪಾಯರ್‌: ಅಡ್ರಿಯನ್‌ ಹೋಲ್ಡ್‌ಸ್ಟಾಕ್‌

ಮ್ಯಾಚ್‌ ರೆಫ್ರಿ: ಆ್ಯಂಡಿ ಪೈಕ್ರಾಫ್ಟ್

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ

ಫೀಲ್ಡ್​ ಅಂಪಾಯರ್: ರಿಚರ್ಡ್‌ ಕೆಟಲ್‌ಬರೋ, ನಿತಿನ್‌ ಮೆನನ್‌

ಥರ್ಡ್‌ ಅಂಪಾಯರ್‌ ;ಕ್ರಿಸ್‌ ಗಫಾನಿ

ಫೋರ್ತ್‌ ಅಂಪಾಯರ್‌: ಮೈಕಲ್‌ ಗಾಫ್

ಮ್ಯಾಚ್‌ ರೆಫ್ರಿ:ಜಾವಗಲ್‌ ಶ್ರೀನಾಥ್‌

ಮಳೆ ಬಂದರೆ ಏನು ಗತಿ?

ವಿಶ್ವಕಪ್​ ಲೀಗ್​ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಲೀಗ್ ಹಂತದ ಪಂದ್ಯಗಳು ಮಳೆಯಿಂದ ರದ್ದುಗೊಂಡರೆ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೆಲವು ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದ್ದರೂ, ಯಾವುದೇ ಪಂದ್ಯ ಕೂಡ ರದ್ದುಗೊಂಡಿರಲಿಲ್ಲ. ಇದೀಗ ಸೆಮಿಫೈನಲ್​ಗೆ ಮಳೆ ಬಂದು ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಏನು ಗತಿ, ಫಲಿತಾಂಶ ನಿರ್ಧಾರ ಹೇಗೆ ಹೀಗೆ ಹಲವು ಪಶ್ನೆಗಳು ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಆದರೆ ಚಿಂತಿಸುವ ಅಗತ್ಯವಿಲ್ಲ. ಐಸಿಸಿ ಮಂಗಳವಾರ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರುತ್ತದೆ ಎಂದಿದೆ.

ಇದನ್ನೂ ಓದಿ Ind vs Nz : ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಭಾರತ?

ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ?

ಒಂದೊಮ್ಮೆ ಸೆಮಿಫೈನಲ್ ಪಂದ್ಯಗಳು ಮಳೆಯಿಂದ ಅಡಚಣೆಯಾಗಿ ಮೀಸಲು ದಿನವೂ ನಡೆಯದಿದ್ದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪಶ್ನೆ ಎಲ್ಲ ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ಉತ್ತರ ಇಲ್ಲಿದೆ. ಮೀಸಲು ದಿನವೂ ಪಂದ್ಯ ಸಂಪೂರ್ಣವಾಗಿ ನಡೆಯದಿದ್ದರೆ ಆಗ ಲೀಗ್​ ಹಂತದಲ್ಲಿ ಹೆಚ್ಚು ಅಂಕ ಮತ್ತು ರನ್​ ರೇಟ್ ಹೊಂದಿರುವ ತಂಡ ಫೈನಲ್​ ಪ್ರವೇಶಿಸಲಿದೆ. ಉದಾಹರಣೆ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡದ ಸೆಮಿ ಫೈನಲ್​ ರದ್ದುಗೊಂಡರೆ ಇದರ ಲಾಭ ಭಾರತಕ್ಕೆ ಲಭಿಸಲಿದೆ. ಏಕೆಂದರೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ. ಹೀಗಾಗಿ ಭಾರತ ಫೈನಲ್​ ಪ್ರವೇಶ ಪಡೆಯುತ್ತದೆ.

ಇದನ್ನೂ ಓದಿ IND vs NZ: ಮುಂದಿದೆ ಟೇಬಲ್​ ಟಾಪ್​ ಕಂಟಕ; ಪಾರಾದೀತೇ ಭಾರತ?

ಸಮಾನ ಅಂಕ ಹೊಂದಿದ್ದರೆ?

ಒಂದೊಮ್ಮೆ ಸೆಮಿಫೈನಲ್​ ಮುಖಾಮುಖಿಯಾಗುವ ತಂಡದ ಅಂಕಗಳು ಸಮಾನವಾಗಿದ್ದರೆ, ಆಗ ರನ್​ರೇಟ್​ನಲ್ಲಿ ಮುಂದಿರುವ ತಂಡಕ್ಕೆ ಇದರ ಲಾಭ ಸಿಗಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ 14 ಅಂಕ ಹೊಂದಿದೆ. ಆದರೆ ರನ್​ ರೇಟ್​ನಲ್ಲಿ ದಕ್ಷಿಣ ಆಫ್ರಿಕಾ ಮುಂದಿದೆ. ಹೀಗಾಗಿ ಈ ಪಂದ್ಯ ಮಳೆಯಿಂದ ರದ್ದುಗೊಂಡರೆ ದಕ್ಷಿಣ ಆಫ್ರಿಕಾ ನೇರವಾಗಿ ಫೈನಲ್​ ಪ್ರವೇಸಿಸಲಿದೆ.

ಬೌಂಡರಿ ಕೌಂಟ್​ ಇಲ್ಲ

ಕಳೆದ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಸೂಪರ್​ ಓವರ್​ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಸೆಮಿ ಆಗಲಿ ಫೈನಲ್​ ಆಗಲಿ ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್​ ಓವರ್​ ಆಡಿಸಲಾಗುತ್ತದೆ.

Exit mobile version