Site icon Vistara News

ವಿಸ್ತಾರ ಸಂಪಾದಕೀಯ: ಫೈನಲ್‌ ರಂಜಿಸಲಿ, ಕ್ರಿಕೆಟ್‌ ವಿಶ್ವಕಪ್‌ ಭಾರತದ ಕೈಸೇರಲಿ

Indian Cricket Team

ICC World Cup 2023: Let's Pray For India's Win In FInal

ಇದೀಗ ಜಗತ್ತಿನ ಕ್ರಿಕೆಟ್‌ ಪ್ರೇಮಿಗಳ ಚಿತ್ತ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್‌ ಪಂದ್ಯದತ್ತ ನೆಟ್ಟಿದೆ. ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವರ್ಸಸ್‌ ಇಂಡಿಯಾ ವರ್ಲ್ಡ್‌ಕಪ್‌ ಫೈನಲ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ದೇಶದ ಜನರು ಕಾದು ಕುಳಿತಿದ್ದಾರೆ. ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಕಾಂಗರೂ ಪಡೆ ವಿರುದ್ಧ ಟೀಂ ಇಂಡಿಯಾ ರಣಕಲಿಗಳು ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಟೀಂ ಇಂಡಿಯಾ ಆಟಗಾರರು ಈ ಬಾರಿ ಕಪ್‌ ಗೆಲ್ಲಲಿ ಅಂತ ಕ್ರಿಕೆಟ್‌ ಪ್ರೇಮಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಅಕ್ಟೋಬರ್ 5ರಂದು ಟೂರ್ನಿಯ ಉದ್ಘಾಟನೆಯೂ ಇದೇ ಸ್ಟೇಡಿಯಮ್​ನಲ್ಲಿ ನಡೆದಿತ್ತು. ಇದೀಗ ಅದೇ ಸ್ಟೇಡಿಯಮ್​ನಲ್ಲಿ ವಿಶ್ವ ವಿಜೇತರು ಯಾರೆಂಬುದು ಪ್ರಕಟವಾಗಲಿದೆ.

ಐಸಿಸಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ 47 ಪಂದ್ಯಗಳು ಮುಕ್ತಾಯಗೊಂಡಿದ್ದು ಇದರಲ್ಲಿ ಸೆಮಿ ಫೈನಲ್ ಸೇರಿದಂತೆ 10ರಲ್ಲಿ 10 ಪಂದ್ಯಗಳನ್ನೂ ಭಾರತ ಗೆದ್ದಿದೆ. ಲೀಗ್‌ನ 10ರಲ್ಲಿ 8 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಕಂಡಿದೆ. ಎರಡೂ ತಂಡಗಳೂ ಬಲಿಷ್ಠವಾಗಿರುವುದರಿಂದ ಇದು ಟೂರ್ನಿಯ ಅತ್ಯಂತ ರೋಚಕ ಹಾಗೂ ನಿರ್ಣಾಯಕ ಪಂದ್ಯವಾಗಿದೆ. ಕೋಟ್ಯಂತರ ಭಾರತೀಯರು ಹಾಗೂ ಅಸಂಖ್ಯಾತ ಕ್ರಿಕೆಟ್​ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ವಿಶ್ವಕಪ್ ಫೈನಲ್​​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾಗಳ ಹೋರಾಟವನ್ನು ಕ್ರಿಕೆಟ್​ ಅಭಿಮಾನಿಗಳು ಈ ಹಿಂದೆ ನೋಡಿದ್ದಾರೆ. 2003ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನಿರಾಸೆ ಎದುರಿಸಿತ್ತು. ಬೃಹತ್ ಅಂತರದ ವಿಜಯದೊಂದಿಗೆ ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿದಿತ್ತು. ಆಸ್ಟ್ರೇಲಿಯಾ ಇಲ್ಲಿಯವರೆಗೆ ತಮ್ಮ ಏಳು ವಿಶ್ವಕಪ್ ಫೈನಲ್​​ಗಳಲ್ಲಿ ಐದನ್ನು ಗೆದ್ದಿದೆ. ಪ್ರಸ್ತುತ ಪಂದ್ಯಾವಳಿಯ ಕೊನೇ ಹಂತದಲ್ಲಿ ಆಸ್ಟ್ರೇಲಿಯಾ ಪ್ರದರ್ಶನದ ಉತ್ತುಂಗದಲ್ಲಿದೆ. ದಕ್ಷಿಣ ಆಫ್ರಿಕ ತಂಡವನ್ನು ಸೆಮಿಫೈನಲ್‌ನಲ್ಲಿ ಮಣಿಸಿದ ರೀತಿಯೇ ಇದಕ್ಕೆ ಸಾಕ್ಷಿ.

ಭಾರತದ ಗೆಲುವಿಗಾಗಿ ಪ್ರಾರ್ಥನೆ

ಆದರೆ ಈ ಸಲ ಭಾರತ ಹೆಚ್ಚು ಬಲಿಷ್ಠವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ವತಃ ಭಾರತ ಹಾಗೂ ಆಸ್ಟ್ರೇಲಿಯಾಗಳೇ ಹಾಲಿ ಆವೃತ್ತಿಯ ವಿಶ್ವಕಪ್​ನ ತಮ್ಮ ಮೊದಲ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ​ ಗೆಲುವು ಕಂಡಿತ್ತು. ಭಾರತಕ್ಕೆ ಇದು ಹೋಮ್‌ ಗ್ರೌಂಡ್‌ ಅರ್ಥಾತ್‌ ತವರು ಮನೆಯ ಅಂಗಣ. ಇಂಡಿಯಾ ಟೀಮ್ 13‌0 ಕೋಟಿ ಅಭಿಮಾನಿಗಳ ಹರಕೆ ಹಾರೈಕೆ ನಿರೀಕ್ಷೆಗಳ ಭಾರವನ್ನು ಹೊತ್ತಿದೆ. ಜತೆಗೆ ಈ ಟೂರ್ನಿಯಲ್ಲಿ ಭಾರತ ಒಂದು ಪಂದ್ಯವನ್ನೂ ಸೋತಿಲ್ಲ. ಹೀಗಾಗಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಈ ಆತ್ಮವಿಶ್ವಾಸ ಅತಿಯಾಗದೆ, ಪರಿಣಾಮಕಾರಿಯಾಗಿ ತಂಡವನ್ನು ಮುನ್ನಡೆಸಿ ಗೆಲ್ಲಿಸಬೇಕಿದೆ.

ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ, ಹಿರಿಯ ಹಾಗೂ ಅನುಭವಿಯಾದ ವಿರಾಟ್‌ ಕೊಹ್ಲಿ, ಕಳೆದ ಪಂದ್ಯದಲ್ಲಿ ಅತಿ ಶ್ರೇಷ್ಠ ಪ್ರದರ್ಶನ ನೀಡಿದ ಮಹಮ್ಮದ್‌ ಶಮಿ ತಂಡದ ಗೆಲುವಿನ ಭಾರವನ್ನು ತಾವೇ ಹೊತ್ತುಕೊಂಡಂತೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎಲ್ಲ ಆಟಗಾರರೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹಾಲಿ ಆವೃತ್ತಿಯಲ್ಲಿ ಭಾರತ ಟೀಮ್‌ ತಂಡಸ್ಫೂರ್ತಿಯಿಂದ ಆಡುತ್ತಿದೆ. ಹಿಂದಿನ ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮರ್ಥ ಪ್ರದರ್ಶನ ನೀಡಿದೆ. ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ತಂಡಕ್ಕೆ ಗೆಲುವಿಗೆ ಬೇಕಾದ ರನ್‌ಗಳ ಮೊತ್ತವನ್ನು ಕಲೆಹಾಕುತ್ತಿದ್ದಾರೆ. ಭಾರತದ ವೇಗದ ಬೌಲಿಂಗ್ ಪರಿಣಾಮಕಾರಿಯಾಗಿದೆ. ಮೊಹಮ್ಮದ್ ಶಮಿ 6 ಪಂದ್ಯಗಳಲ್ಲಿ 23 ವಿಕೆಟ್​​ಗಳನ್ನು ಪಡೆದಿದ್ದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ನೇತೃತ್ವದ ಬೌಲಿಂಗ್ ವಿಭಾಗವು 10 ಪಂದ್ಯಗಳಲ್ಲಿ 96 ವಿಕೆಟ್​ಗಳನ್ನು ಉರುಳಿಸಿವೆ. ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ಎಲ್ಲರೂ ಉತ್ತಮ ಬ್ಯಾಟಿಂಗ್-‌ ಫೀಲ್ಡಿಂಗ್‌ಗಳ ಮೂಲಕ ಸಾಥ್‌ ನೀಡುತ್ತಿದ್ದಾರೆ.

ಇದನ್ನೂ ಓದಿ: ICC World Cup 2023: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ಪೂಜೆ; ಶುಭ ಕೋರಿದ ಸಿಎಂ

ಭಾರತಕ್ಕೆ ಪಾಕಿಸ್ತಾನ ತಂಡ ಸಾಂಪ್ರದಾಯಿಕ ಎದುರಾಳಿ ಎಂದು ಹೇಳಲಾಗುತ್ತಿದ್ದರೂ ಅದರ ಎದುರು ಆಡಿ ಗೆಲ್ಲುವುದು ಎಂದಿಗೂ ಕಷ್ಟವೆನಿಸಿಲ್ಲ; ಆದರೆ ಆಸ್ಟ್ರೇಲಿಯ ತಂಡದ ಎದುರು ನಮ್ಮ ಆಟಗಾರರು ಸ್ವಲ್ಪ ಆತಂಕವನ್ನು ಅನುಭವಿಸುತ್ತಾರೆ. ಆಸ್ಟ್ರೇಲಿಯಾ ತಂಡ ಕೂಡ ಈ ಹಿಂದೆ ಸ್ಲೆಡ್ಜಿಂಗ್‌ ಮುಂತಾದ ವಿಕಾರಗಳಿಂದ ಭಾರತವನ್ನು ಮಣಿಸಲು ನೋಡುತ್ತಿತ್ತು. ಆದರೆ ಆ ದಿನಗಳು ಮುಗಿದಿವೆ. ಸೌರವ್‌ ಗಂಗೂಲಿ, ಸಚಿನ್‌ ತೆಂಡುಲ್ಕರ್, ವಿರಾಟ್‌ ಕೊಹ್ಲಿ ಮುಂತಾದವರು ಆಸ್ಟ್ರೇಲಿಯ ತಂಡದ ನೀರಿಳಿಸಿಬಿಟ್ಟ ಉದಾಹರಣೆಗಳಿವೆ. ನಮ್ಮ ಇಂದಿನ ಆಟಗಾರರು ಆ ಪರಂಪರೆಯನ್ನು ಮುಂದುವರಿಸಲಿ ಎಂದು ಆಶಿಸೋಣ. ಎರಡು ಬಾರಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದಿದ್ದೇವೆ. ಕಪಿಲ್‌ ದೇವ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದಲ್ಲಿ ಅದು ನಮಗೆ ಒದಗಿದೆ. ಈ ಬಾರಿ ನಮ್ಮ ಆಟಗಾರರ ಶ್ರೇಷ್ಠ ಕ್ರೀಡಾಕೌಶಲ ಮತ್ತೆ ನಮಗೆ ಕಪ್‌ ತರಲಿ ಎಂದು ಹಾರೈಸೋಣ. ಫಲಿತಾಂಶ ಏನೇ ಆಗಿರಲಿ, ಕ್ರಿಕೆಟ್‌ ಆಟ ನಮ್ಮ ಮನರಂಜಿಸಲಿ. ಕ್ರೀಡಾಸ್ಫೂರ್ತಿ ಎಲ್ಲರ ಧ್ಯೇಯವಾಗಿರಲಿ.‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version