Site icon Vistara News

IPL 2023 : ಐಪಿಎಲ್​ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್​ ಟೈಟನ್ಸ್​ ತಂಡದಿಂದ ಬೌಲಿಂಗ್​ ಆಯ್ಕೆ

in-the-first-match-of-ipl-gujarat-titans-won-the-toss-and-chose-to-bowl

#image_title

ಅಹಮದಾಬಾದ್​: ಐಪಿಎಲ್​ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಹಾಲಿ ಚಾಂಪಿಯನ್​​ ಗುಜರಾತ್​ ಟೈಟನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ಮೊದಲು ಬ್ಯಾಟಿಂಗ್​ ಮಾಡಬೇಕಾಗಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಪಂದ್ಯ ಆಯೋಜನೆಗೊಂಡಿದ್ದು, ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಇದಕ್ಕೆ ಹಣಾಹಣಿಗೆ ಸಾಕ್ಷಿಯಾಗಲಿದ್ದಾರೆ.

ಐಪಿಎಲ್​ ಟ್ವೀಟ್​ ಇಲ್ಲಿದೆ

ಟಾಸ್​ ಗೆದ್ದ ಬಳಿಕ ಮಾತನಾಡಿದ ಗುಜರಾತ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಇಲ್ಲಿರುವ ದೊಡ್ಡ ಸಂಖ್ಯೆ ಪ್ರೇಕ್ಷಕರ ಮುಂದೆ ಆಡುವುದಕ್ಕೆ ಸಂತಸವಾಗುತ್ತಿದೆ. ಧೋನಿಯ ತಂಡದ ವಿರುದ್ಧವೇ ಮೊದಲ ಪಂದ್ಯವನ್ನು ಆಡುವುದು ಕೂಡ ಖುಷಿಯ ವಿಚಾರ. ಅವರು ನಮ್ಮ ದೇಶದ ಹಲವಾರು ಕ್ರಿಕೆಟ್​ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದವರು. ಇಂಪಾಕ್ಟ್​ ಪ್ಲೇಯರ್​ ನಿಯಮದೊಂದಿಗೆ ಆಡುವುದು ಖುಷಿಯ ವಿಚಾರ ಎಂದು ಹೇಳಿದರು.

ಮಹೇಂದ್ರ ಸಿಂಗ್ ಧೋನಿ ಮಾತನಾಡಿ, ನಾವು ಕೂಡ ಟಾಸ್​ ಗೆದ್ದರೆ ಬೌಲಿಂಗ್ ಆಯ್ಕೆ ಮಾಡುವ ಉದ್ದೇಶ ಹೊಂದಿದ್ದೆವು. ಯಾಕೆಂದರೆ ಇಲ್ಲಿನ ಪಿಚ್​ ವರ್ತನೆ ಬದಲಿಸುವ ಅವಕಾಶವಿದೆ. ನಮ್ಮ ತಂಡ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದೆ ಎಂದು ಹೇಳಿದರು.

ಪಂದ್ಯಕ್ಕೆ ಮೊದಲು ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಮಹೇಂದ್ರ ಸಿಂಗ್​ ಧೋನಿ ಹಾಗೂ ಗುಜರಾತ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಅವರನ್ನು ಮೆರವಣಿಗೆ ಮೂಲಕ ಮೈದಾನಕ್ಕೆ ಕರೆ ತರಲಾಯಿತು. ಕಳೆದ ಬಾರಿಯ ಚಾಂಪಿಯನ್​ ಹಾರ್ದಿಕ್ ಪಾಂಡ್ಯ ತಮ್ಮ ತಂಡದ ಬಳಿಯಿದ್ದ ಟ್ರೋಫಿಯನ್ನು ವೇದಿಕೆ ತಂದರು.

ತಂಡಗಳು ಇಂತಿವೆ

ಗುಜರಾತ್ ಟೈಟನ್ಸ್​: ಶುಭ್‌ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ ಲಿಟಲ್, ಅಲ್ಜಾರಿ ಜೋಸೆಫ್, ಯಶ್ ದಯಾಳ್.

ಇಂಪಾಕ್ಟ್​ ಪ್ಲೇಯರ್​ ಬದಲಿ ಆಟಗಾರರು: ಬಿ ಸಾಯಿ ಸುದರ್ಶನ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಅಭಿನವ್ ಮನೋಹರ್, ಕೆಎಸ್ ಭರತ್.

ನ್ನೈ ಸೂಪರ್​​ ಕಿಂಗ್ಸ್​: ಡೆವೊನ್ ಕಾನ್ವೆ, ರುತುರಾಜ್ ಗಾಯಕ್‌ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ, ಶಿವಂ ದುಬೆ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ ), ಮಿಚೆಲ್​ ಸ್ಯಾಂಟ್ನರ್, ದೀಪಕ್ ಚಾಹರ್, ರಾಜವರ್ಧನ್ ಹಂಗರ್​ಗೇಕರ್​.

ಇಂಪಾಕ್ಟ್​ ಪ್ಲೇಯರ್​ ಬದಲಿ ಆಟಗಾರರು: ತುಷಾರ್ ದೇಶಪಾಂಡೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ, ನಿಶಾಂತ್ ಸಿಂಧು.

ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ

ಕೋವಿಡ್‌ ನಂತರ ಮೊದಲ ಬಾರಿಗೆ ಅತ್ಯಂತ ವೈಭವದಿಂದ ನಡೆದ ಉದ್ಘಾಟನ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ(Tamannaah Bhatia) ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರೆ, ಅರಿಜಿತ್​ ಸಿಂಗ್(arijit singh)​ ಅವರ ಅದ್ಭುತ ಕಂಠಕ್ಕೆ ದಾಖಲೆಯ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ತಲೆದೂಗಿದರು. ಇದೇ ವೇಳೆ ನಡೆಸಿದ ಲೇಸರ್​ ಶೋ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿಸಿತು. ಆಸ್ಕರ್​ ಪ್ರಶಸ್ತಿ ಗೆದ್ದ ಆರ್​ಆರ್​ಆರ್​ ಸಿನೆಮಾದ ನಾಟು ನಾಟು ಹಾಡಿಗೆ ರಶ್ಮಿಕಾ ಕುಣಿದು ಕುಪ್ಪಳಿಸಿದರು.

ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ರವಿಶಾಸ್ತ್ರಿ, ಸುನೀಲ್​ ಗವಾಸ್ಕರ್​, ವಿದೇಶಿ ಮಾಜಿ ಆಟಗಾರರಾದ ಆರಾನ್​ ಫಿಂಚ್​, ಕೆವಿನ್​ ಪೀಟರ್ಸನ್​ ಸೇರಿ ಅನೇಕ ಕ್ರಿಕೆಟಿಗರು ಹಾಗೂ ಮತ್ತಿತರ ಬಿಸಿಸಿಐ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿದ್ದಾಜಿದ್ದಿನ ಪಂದ್ಯ ಸಾಧ್ಯತೆ

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ವಿದಾಯ ಹೇಳಲಿದ್ದಾರೆ ಎಂದು ವರದಿಯಾಗಿದೆ. ಮೆ.14 ರಂದು ಕೆಕೆಆರ್​ ವಿರುದ್ಧದ ಪಂದ್ಯವು ಸಿಎಸ್​ಕೆ ಪರ ಧೋನಿಯ ಕೊನೆಯ ಪಂದ್ಯವಾಗಿರಲಿದೆ ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಇನ್​ಸೈಡ್ ಸ್ಪೋರ್ಟ್ಸ್​ ತಿಳಿಸಿದೆ. ಈಗಾಗಲೇ ಧೋನಿ ಅವರ ವಿದಾಯಕ್ಕೆ ಚೆನ್ನೈ ತಂಡ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದು ಅದರಂತೆ ಮೇ.14ಕ್ಕೆ ಧೋನಿ ವಿದಾಯ ಪಂದ್ಯ ಆಡಲಿದ್ದಾರೆ ಎಂದು ತಂಡದ ಮೂಲವೊಂದು ತಿಳಿಸಿದೆ. ಹೀಗಾಗಿ ಧೋನಿಗೆ ಈ ಬಾರಿ ಗೆಲುವಿನ ವಿದಾಯ ನೀಡಬೇಕೆಂದು ತಂಡದ ಆಟಗಾರರೂ ಕೂಡ ಪಣ ತೊಟ್ಟಿದ್ದಾರೆ.

ಇದನ್ನೂ ಓದಿ IPL 2023: ಗುಜರಾತ್​ vs ಚೆನ್ನೈ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ​

ಇಂಗ್ಲೆಂಡ್​ ತಂಡ ಏಕದಿನ ಮತ್ತು ಟಿ20 ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅತ್ಯಂತ ಯಶಸ್ವಿ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಅವರು ಈ ಬಾರಿ ಚೆನ್ನೈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಅವರು ಸಂಪೂರ್ಣ ಫಿಟ್​ ಇಲ್ಲದಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಈಗಾಗಲೇ ತಂಡದ ಬ್ಯಾಟಿಂಗ್​ ಕೋಚ್​ ಮೈಕಲ್ ಹಸ್ಸಿ ಅವರು ಸ್ಟೋಕ್ಸ್​ ಬ್ಯಾಟಿಂಗ್​ ಮಾತ್ರ ನಡೆಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಚೆನ್ನೈ ಅನುಭವಿ ತಂಡಗಳನ್ನೇ ನೆಚ್ಚಿಕೊಂಡಿದೆ. ಇದರ ಜತೆಗೆ ಧೋನಿಯ ಮಾಸ್ಟರ್​ ಪ್ಲ್ಯಾನ್​ ಕೂಡ ತಂಡಕ್ಕೆ ನೆರವಾಗಲಿದೆ.

ಇದನ್ನೂ ಓದಿ IPL 2023: ಆರ್​ಸಿಬಿಗೆ ಆಘಾತ; ಮೊದಲ ಪಂದ್ಯಕ್ಕೆ ಸ್ಟಾರ್​ ಆಟಗಾರರು ಅಲಭ್ಯ

​ಯುವ ಪಡೆಯೇ ಗುಜರಾತ್​ ಬಲ

ಹಾರ್ದಿಕ್​ ಪಾಂಡ್ಯ ನಾಯಕತ್ವದ ಗುಜರಾತ್​ ತಂಡದಲ್ಲಿ ಹೆಚ್ಚಾಗಿ ಯುವ ಪಡೆಯೇ ಕಂಡು ಬಂದಿದೆ. ಶುಭಮನ್​ ಗಿಲ್​, ರಾಹುಲ್​ ತೆವಾಟಿಯ, ರಶೀದ್​ ಖಾನ್​, ಶಿವಂ ಮಾವಿ ಅವರನ್ನೊಳಗೊಂಡ ತಂಡ ಬಲಿಷ್ಠವಾಗಿ ಗೋಚರಿಸಿದೆ. ಇವರ ಜತೆಗೆ ಅನುಭವಿ ಆಟಗಾರರಾದ ಕೇನ್​ ವಿಲಿಯಮ್ಸನ್​ ಮತ್ತು ಮೊಹಮ್ಮದ್​ ಶಮಿ ಕೂಡ ಯುವ ಪಡೆಗೆ ಉತ್ತಮ ಸಾಥ್​ ನೀಡುವುದು ಖಚಿತ.

Exit mobile version