Site icon Vistara News

IND vs AUS: ಗಂಗೂಲಿ ಮಾಡಿದ ಎಡವಟ್ಟನ್ನು ರೋಹಿತ್​ ಶರ್ಮಾ ಮಾಡದಿರಲಿ…

2003-world-cup-final-

ಬೆಂಗಳೂರು: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್​ ಫೈನಲ್(India vs Australia Final)​ ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಇತ್ತಂಡಗಳ ಈ ಫೈನಲ್​ ಮುಖಾಮುಖಿ ಭಾನುವಾರ ಅಹಮದಾಬಾದ್​ನಲ್ಲಿ ಏರ್ಪಡಲಿದೆ. ಆದರೆ, 2003ರ ವಿಶ್ವಕಪ್‌ ಫೈನಲ್(2003 world cup final)​ ಪಂದ್ಯದಲ್ಲಿ ಸೌರವ್​ ಗಂಗೂಲಿ(sourav ganguly) ಮಾಡಿದ ಎಡವಟ್ಟೊಂದನ್ನು ರೋಹಿತ್​​ ಶರ್ಮಾ(rohit sharma) ಮಾಡದಿರಲಿ ಎನ್ನುವುದು ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಆಶಯ.

ಭಾರತ 1983ರಲ್ಲಿ ಇತಿಹಾಸ ನಿರ್ಮಿಸಿದ ಬಳಿಕ ಸರಿಯಾಗಿ 2 ದಶಕಗಳ ಬಳಿಕ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಕೂಟವಿದು. ದಿಟ್ಟ ನಾಯಕ ಸೌರವ್‌ ಗಂಗೂಲಿ ಸಾರಥ್ಯದಲ್ಲಿ ಕಣಕ್ಕಿಳಿದ ಭಾರತ ತಂಡ ಆಸ್ಟ್ರೇಲಿಯಾ ಬಿಟ್ಟು ಬೇರೆ ಯಾವ ತಂಡಕ್ಕೂ ಶರಣಾಗಲಿಲ್ಲ.

ಗಂಗೂಲಿ ಮಾಡಿದ ಎಡವಟ್ಟು

ಲೀಗ್​ ಹಂತದಲ್ಲಿ ಭಾರತ ಸೋತದ್ದು ಆಸ್ಟ್ರೇಲಿಯಾ ವಿರುದ್ಧ ಮಾತ್ರ. ಉಭಯ ತಂಡಗಳು ಫೈನಲ್​ ಪಂದ್ಯದಲ್ಲಿ ಮತ್ತೆ ಎದುರಾದವು. ನಾಯಕ ಗಂಗೂಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದರೆ ಭಾರತ ಜೊಹಾನ್ಸ್‌ಬರ್ಗ್‌ನಲ್ಲೇ 2ನೇ ಕಪ್‌ ಎತ್ತಿ ಮೆರೆಯಬಹುದಿತ್ತು. ಆದರೆ ಎಡವಟ್ಟು ಮಾಡಿಕೊಂಡ ಗಂಗೂಲಿ ಆಸೀಸ್​ ತಂಡಕ್ಕೆ ಬ್ಯಾಟಿಂಗ್​ ನೀಡಿ ಹೀನಾಯ ಸೋಲು ಕಾಣಬೇಕಾಯಿತು.

ಇದನ್ನೂ ಓದಿ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಇಲ್ಲಿದೆ 5 ಬಾರಿ ಚಾಂಪಿಯನ್ನರ ಸಾಹಸ… ​

ಎರಡೇ ವಿಕೆಟ್​ಗೆ ಬೃಹತ್​ ಮೊತ್ತ

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ಭಾರತದ ಬೌಲರ್‌ಗಳ ಮೇಲೆ ಘಾತಕವಾಗೆರಗಿತು. ಫೈನಲ್‌ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿತು. ನಾಯಕ ಪಾಂಟಿಂಗ್‌ ಅಜೇಯ 140, ಮಾರ್ಟಿನ್‌ ಅಜೇಯ 88, ಗಿಲ್‌ಕ್ರಿಸ್ಟ್‌ 57 ರನ್‌ ಬಾರಿಸಿ ತಂಡದ ಮೊತ್ತವನ್ನು ಎರಡೇ ವಿಕೆಟಿಗೆ 359ಕ್ಕೆ ಏರಿಸಿದರು. ಆಗಲೇ ಆಸೀಸ್‌ ಸತತ 2ನೇ ಕಪ್‌ ಮೇಲೆ ತನ್ನ ಹೆಸರು ಬರೆದಾಗಿತ್ತು.

ಚೇಸಿಂಗ್‌ ವೇಳೆ ಸಚಿನ್​ ತೆಂಡೂಲ್ಕರ್‌ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಹೋರಾಟ ಸಂಘಟಿಸಿದ್ದು ವೀರೇಂದ್ರ ಸೆಹವಾಗ್‌ ಮತ್ತು ಈಗಿನ ಭಾರತ ತಂಡದ ಕೋಚ್​ ರಾಹುಲ್​ ದ್ರಾವಿಡ್‌ ಮಾತ್ರ. ಭಾರತ 39.2 ಓವರ್​ಗಳಲ್ಲಿ 234ಕ್ಕೆ ಆಲೌಟಾಗಿ 125 ರನ್ನುಗಳ ಸೋಲಿಗೆ ತುತ್ತಾಯಿತು. ಬಹುಶಃ ಕೈಯಲ್ಲಿ ಒಂದಿಷ್ಟು ವಿಕೆಟ್‌ ಉಳಿದಿದ್ದರೆ, ದೊಡ್ಡ ಜತೆಯಾಟವೊಂದು ದಾಖಲಾಗಿದ್ದರೆ ಆಸ್ಟ್ರೇಲಿಯಾಕ್ಕೆ ನೀರು ಕುಡಿಸುವುದು ಅಸಾಧ್ಯವೇನೂ ಆಗಿರಲಿಲ್ಲ. ಆದರೆ ಗಂಗೂಲಿ ಪಡೆಗೆ ಲಕ್‌ ಇರಲಿಲ್ಲ. ಪಾಂಟಿಂಗ್‌ ಮೊದಲ ಸಲ ವಿಶ್ವಕ ಪ್‌ನಲ್ಲಿ ಆಸ್ಟ್ರೇಲಿಯವನ್ನು ಮುನ್ನಡೆಸಿ ಗೆಲುವಿನ ರೂವಾರಿಯಾದರು.

ವಾರ್ನ್ ಅಲಭ್ಯದ ಮಧ್ಯೆಯೂ ಆಸೀಸ್​ ಪರಾಕ್ರಮ

ಟೂರ್ನಿ ಆರಂಭಕ್ಕೂ ಮೊದಲೇ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಆಘಾತವೊಂದು ಎದುರಾಗಿತ್ತು. ತಂಡದ ಪ್ರಧಾನ ಸ್ಪಿನ್ನರ್‌ ಶೇನ್‌ ವಾರ್ನ್ ನಿಷೇಧಿತ ಮದ್ದು ಸೇವಿಸಿದ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಟೂರ್ನಿಯಿಂದ ಹೊರಬಿದ್ದರು. ವಿಶ್ವಕಪ್‌ ಇತಿಹಾಸದಲ್ಲಿ ಕ್ರಿಕೆಟಿಗನೊಬ್ಬ ಇಂಥ ಪ್ರಕರಣಕ್ಕೆ ಸಿಲುಕಿ ನಿಷೇಧಕ್ಕೊಳಗಾದ ಮೊದಲ ನಿದರ್ಶನ ಇದಾಗಿತ್ತು. ವಾರ್ನ್ ತೂಕ ಹೆಚ್ಚಿಸುವ ನಿಷೇಧಿತ ಔಷಧ ಸೇವಿಸಿ ಈ ಸಂಕಟಕ್ಕೆ ಸಿಲುಕಿದ್ದರು. ಆದರೂ ಕುಗ್ಗದ ಆಸ್ಟ್ರೇಲಿಯಾ ಕಪ್​ ಎತ್ತಿ ಮರೆದಾಡಿತ್ತು. ಇದು ಆಸೀಸ್​ ತಂಡದ ಪರಾಕ್ರಮಕ್ಕೆ ಉತ್ತಮ ನಿದರ್ಶನ.

ಇದನ್ನೂ ಓದಿ IND vs AUS: ಭಾರತ-ಆಸೀಸ್​ ವಿಶ್ವಕಪ್​ ಸಾಧನೆಯ ಅಂಕಿ ಅಂಶ ಹೇಗಿದೆ?

ರೋಹಿತ್​ ಮಾಡದಿರಲಿ ಎಡವಟ್ಟು

ಆಸ್ಟ್ರೇಲಿಯಾ ತಂಡ ಯಾವುದೇ ಫೈನಲ್​ ಪಂದ್ಯ ಇದ್ದರೂ ಇಲ್ಲಿ ಡಿಫರೆಂಟ್​ ಗೇಮ್​ ಆಡಿ ಗೆದ್ದು ಬರುತ್ತದೆ. ಪಿಚ್​ ಎಂತದ್ದೇ ಆಗಿರಲಿ ಟಾಸ್​ ಗೆದ್ದರೆ ತಪ್ಪಿಯೂ ಬೌಲಿಂಗ್​ ಆಯ್ಕೆಯೊಂದನ್ನು ಮಾಡಲು ಸಾಧ್ಯವೇ ಇಲ್ಲ. ಮೊದಲು ಬ್ಯಾಟಿಂಗ್​ ಆಯ್ದುಕೊಂಡು ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿ ಬೃಹತ್​ ಮೊತ್ತ ಕಲೆ ಹಾಕುವುದು ಆಸೀಸ್​ ತಂಡದ ಪ್ರಧಾನ ಗುರಿ. ಈ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿ ಅವರ ಆತ್ಮವಿಶ್ವಾಸ ಕುಗ್ಗಿಸುವುದು ಆಸೀಸ್​ ತಂಡದ ತಂತ್ರ. ಹೀಗಾಗಿ ರೋಹಿತ್​ ಶರ್ಮ ಟಾಸ್​ ಗೆದ್ದರೆ ಯಾವುದೇ ಕಾರಣಕ್ಕೂ ಬೌಲಿಂಗ್​ ಆಯ್ದುಕೊಳ್ಳಬಾರದು ಎನ್ನುವುದು ಅಭಿಮಾನಿಗಳ ಸಲಹೆಯಾಗಿದೆ.

Exit mobile version