ಮುಂಬಯಿ: ಇಷ್ಟು ದಿನ ಟೆಸ್ಟ್ ಕ್ರಿಕೆಟ್ ಗುಂಗಿನಲ್ಲಿದ್ದ ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ತಂಡದ ಆಟಗಾರರು ಇದೀಗ ಸೀಮಿತ ಓವರ್ಗಳ ಕ್ರಿಕೆಟ್ನತ್ತ ಮುಖಮಾಡಿದ್ದಾರೆ. ಉಭಯ ತಂಡಗಳ ಮೊದಲ ಏಕದಿನ ಪಂದ್ಯ ಶುಕ್ರವಾರ(ಮಾರ್ಚ್ 17) ನಡೆಯಲಿದೆ. ಈ ಪಂದ್ಯಕ್ಕೆ ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂ ಅಣಿಯಾಗಲಿದೆ.
ಇದೇ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯ ಹಿನ್ನಲೆಯಲ್ಲಿ ಈ ಸರಣಿ ಇತ್ತಂಡಗಳಿಗೂ ಮಹತ್ವದಾಗಿದೆ. ತಂಡದ ಸಂಯೋಜನೆ ಸೇರಿ ಹಲವು ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎನ್ನಬಹುದು.
ಭಾರತ ಟಿ20 ಕ್ರಿಕೆಟ್ಗೆ ಮುಂದಿನ ನಾಯಕನೆಂದೆ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಈ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಹಾರ್ದಿಕ್ ಪಾಂಡ್ಯ ವರ್ಚಸ್ಸು ಕೂಡ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಅವರು ಟೀಮ್ ಇಂಡಿಯಾದ ಖಾಯಂ ನಾಯಕನಾಗಿ ಗುರುತಿಸಿಕೊಂಡರೂ ಅಚ್ಚರಿಯಿಲ್ಲ. ಹೀಗಾಗಿ ಪಾಂಡ್ಯ ಅವರಿಗೂ ಈ ಪಂದ್ಯ ವೈಯಕ್ತಿಕವಾಗಿ ಮಹತ್ವ ಎನಿಸಿದೆ.
ಪ್ಯಾಟ್ ಕಮಿನ್ಸ್ ಅವರ ಅನುಸ್ಥಿತಿಯಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕತ್ವದ ಹೊಣೆ ಹೊತ್ತ ಸ್ಟೀವನ್ ಸ್ಮಿತ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ 9 ವಿಕೆಟ್ಗಳ ಸೋಲಿನ ರುಚಿ ತೋರಿಸಿದ್ದರು. ಅಂತಿಮ ಪಂದ್ಯವನ್ನು ಡ್ರಾ ಗೊಳ್ಳುವಂತೆ ನೋಡಿಕೊಂಡರು. ಇದೀಗ ಏಕದಿನದಲ್ಲಿಯೂ ಅವರು ಕಮಾಲ್ ಮಾಡಲಿದ್ದಾರ ಎನ್ನುವುದು ಈ ಪಂದ್ಯದ ಕೌತುಕ.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ಪಿಚ್ ರಿಪೋರ್ಟ್
ರಾಹುಲ್ ಕೀಪರ್!
ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ನಿಂದ ಟೀಕೆಗೆ ಗುರಿಯಾಗಿ ಅಂತಿಮ ಎರಡು ಪಂದ್ಯಗಳಿಂದ ಹೊರ ಬಿದ್ದ ಕೆ.ಎಲ್ ರಾಹುಲ್ ಅವರು ಈ ಪಂದ್ಯದಲ್ಲಿ ಆಡುವುದು ಖಚಿತ. ಶುಭಮನ್ ಗಿಲ್ ಜತೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಿದರೂ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಜತೆಗೆ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಈಗಾಗಲೇ ಟೀಮ್ ಮ್ಯಾನೆಜ್ಮೆಂಟ್ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನೊಂಡೆದೆ ರಾಹುಲ್ ಬ್ಯಾಟಿಂಗ್ ಜತೆಗೆ ಕೀಪಿಂಗ್ ಅಭ್ಯಾಸವನ್ನೂ ಮಾಡಿದ್ದಾರೆ.