ಇಂದೋರ್: ಅನುಭವಿ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಬಲಿಷ್ಠ ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸಾರಥ್ಯದ ಭಾರತ ತಂಡ (India vs Australia, 2nd ODI) 99 ರನ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಜತೆಗೆ ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಸದ್ಯ ಟೀಮ್ ಇಂಡಿಯಾದ ಒಂದು ಹಂತದ ಸಮಸ್ಯೆ ಪರಿಹಾರ ಕಂಡಿದೆ ಎನ್ನಲಡ್ಡಿಯಿಲ್ಲ. ಸರಣಿಯ ಅಂತಿಮ ಪಂದ್ಯ ಬುಧವಾರ ರಾಜ್‌ಕೋಟ್‌ನಲ್ಲಿ ನಡೆಯಲಿದೆ.
ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ಶ್ರೇಯಸ್ ಅಯ್ಯರ್(105) ಮತ್ತು ಶುಭಮನ್ ಗಿಲ್(104) ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್ ರಾಹುಲ್(52) ಹಾಗೂ ಸೂರ್ಯಕುಮಾರ್ ಯಾದವ್(72*) ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಪೇರಿಸಿ ಸವಾಲೊಡ್ಡಿತು. ಆಸೀಸ್ ಬೃಹತ್ ಮೊತ್ತವನ್ನು ಬೆನ್ನಟ್ಟುವ ವೇಳೆ ಪಂದ್ಯಕ್ಕೆ ಮಳೆಯಿಂದ ಹಲವು ಬಾರಿ ಅಡಚಣೆಯಾಗಿತು. ಹೀಗಾಗಿ ಡಕ್ವರ್ತ್-ಲೂಯಿಸ್ ನಿಯಮವನ್ನು ಜಾರಿಗೆ ತರಲಾಯಿತು. ಅದರಂತೆ ಈ ನಿಯಮದನ್ವಯ ಆಸೀಸ್ ತಂಡಕ್ಕೆ 33 ಓವರ್ಗಳಲ್ಲಿ 317 ರನ್ಗಳ ಗುರಿ ನೀಡಲಾಯಿತು. ಆದರೆ ಆಸೀಸ್ 28.2 ಓವರ್ಗಳಲ್ಲಿ 217 ರನ್ಗಳಿಗೆ ಸರ್ವ ಪತನ ಕಂಡು ಹೀನಾಯ ಸೋಲು ಅನುಭವಿಸಿತು.
ಅವಳಿ ಆಘಾತವಿಕ್ಕಿದ ಪ್ರಸಿದ್ಧ್ ಕೃಷ್ಣ
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಆಡಲಿಳಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಮ್ಮ ಮೊದಲ ಓವರ್ನಲ್ಲಿಯೇ ಅವಳಿ ಆಘಾತವಿಕ್ಕಿದರು. ಮ್ಯಾಥ್ಯೂ ಶಾರ್ಟ್(9) ಮತ್ತು ಹಂಗಾಮಿ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಆಸೀಸ್ 9 ರನ್ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.
ವಾರ್ನರ್-ಅಬಾಟ್ ಆಸರೆ
ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದವರೆಂದರೆ ಡೇವಿಡ್ ವಾರ್ನರ್ ಮತ್ತು ಸೀನ್ ಅಬಾಟ್. ಉಭಯ ಆಟಗಾರರು ಅರ್ಧಶತಕ ಬಾರಿಸದೇ ಹೋಗಿದ್ದರೆ ತಂಡ 150 ರನ್ಗಳ ಗಡಿ ಕೂಡ ದಾಟುವುದು ಅಸಾಧ್ಯವಾಗುತ್ತಿತ್ತು. ವಾರ್ನರ್ 53 ರನ್ ಬಾರಿಸಿ ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದರು. ಅಂಪೈರ್ ಧರ್ಮಸೇನಾ ನೀಡಿದ ತಪ್ಪು ತೀರ್ಮಾನದಿಂದ ವಾರ್ನರ್ ವಿಕೆಟ್ ಕಳೆದುಕೊಂಡರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸೀನ್ ಅಬಾಟ್ 36 ಎಸೆತದಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿ 54 ರನ್ ಬಾರಿಸಿದರು. ಈ ವಿಕೆಟ್ ಜಡೇಜಾ ಪಾಲಾಯಿತು.
ಮತ್ತೆ ಕಳಪೆ ಫೀಲ್ಡಿಂಗ್
ಪಂದ್ಯ ಗೆದ್ದರೂ ಭಾರತ ತಂಡದ ಕಳಪೆ ಫೀಲ್ಡಿಂಗ್ ಈ ಪಂದ್ಯದಲ್ಲಿಯೂ ಕಂಡು ಬಂದಿತು. ಶಾರ್ದೂಲ್ ಠಾಕೂರ್, ಗಾಯಕ್ವಾಡ್ ಹಲವು ಕ್ಯಾಚ್ ಜತೆಗೆ ಮಿಸ್ ಫೀಲ್ಡಿಂಗ್ ಮೂಲಕ ಬೌಂಡರಿ ಬಿಟ್ಟುಕೊಟ್ಟರು. ಮೊದಲ ಪಂದ್ಯದಲ್ಲಿಯೂ ಇದೇ ರೀತಿಯ ಕಳಪೆ ಕ್ಷೇತ್ರ ರಕ್ಷಣೆ ತೋರಿದ್ದರು. ವಿಶ್ವಕಪ್ ಟೂರ್ನಿಗೂ ಮುನ್ನ ಈ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಭಾರತ ಪರ ಬೌಲಿಂಗ್ನಲ್ಲಿ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಕೆಡವಿದರು. ಪ್ರಸಿದ್ಧ್ ಕೃಷ್ಣ 2 ಮತ್ತು ಮೊದಲ ಪಂದ್ಯದಲ್ಲಿ 5 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆದರು.
ಆಸೀಸ್ ಬೌಲರ್ಗಳ ಬೆವರಿಳಿಸಿದ ಅಯ್ಯರ್-ಗಿಲ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ದ್ವಿತೀಯ ವಿಕೆಟ್ಗೆ ಜತೆಯಾದ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಆಸೀಸ್ ಬೌಲರ್ಗಳ ಬೆವರಿಳಿಸಿದರು.
ಗಿಲ್ ಅವರಿಗಿಂತ ಕೊಂಚ ಮಟ್ಟಿನ ಬಿರುಸಿನ ಆಟವಾಡಿದ ಶ್ರೇಯಸ್ ಅಯ್ಯರ್ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ಮೂರನೇ ಏಕದಿನ ಶತಕವಾಗಿದೆ. ಬೆನ್ನು ನೋವಿನಿಂದ ಚೇತರಿಕೆ ಕಂಡ ಬಳಿಕ ತೋರಿದ ಶ್ರೇಷ್ಠ ಪ್ರದರ್ಶನ ಇದಾಗಿದೆ. ಅವರ ಈ ಪ್ರಚಂಡ ಬ್ಯಾಟಿಂಗ್ ಕಂಡು ಆಯ್ಕೆ ಸಮಿತಿ ನಿಟ್ಟುಸಿರು ಬಿಟ್ಟಿದೆ. ಏಕೆಂದರೆ ವಿಶ್ವಕಪ್ಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಅಯ್ಯರ್ ಅವರ ಗಾಯ ಮತ್ತು ಫಾರ್ಮ್ ಬಗ್ಗೆ ಆಯ್ಕೆ ಸಮಿತಿ ಇದುವರೆಗೂ ಚಿಂತಿಸುತ್ತಿತ್ತು. ಈ ಪ್ರದರ್ಶನ ಕಂಡ ಬಳಿಕ ಸದ್ಯ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಅಯ್ಯರ್ ಮೇಲೆ ಆತ್ಮವಿಶ್ವಾಸವೊಂದು ಮೂಡಿದೆ.
ಇದನ್ನೂ ಓದಿ IND vs AUS: ಇಂಗಾಲ ಹೊರಸೂಸುವಿಕೆ ತಗ್ಗಿಸಲು ಹೋಳ್ಕರ್ ಸ್ಟೇಡಿಯಂಗೆ ಸೋಲಾರ್ ಪ್ಯಾನೆಲ್ ಅಳವಡಿಕೆ
ಶತಕದ ಮೂಲಕ ದಾಖಲೆ ಬರೆದ ಗಿಲ್
ಅಯ್ಯರ್ ಅವರು ಶತಕ ಪೂರ್ತಿಗೊಳಿಸಿದ್ದೇ ತಡ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಗಿಲ್ ಕೂಡ ಶತಕ ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ 6ನೇ ಶತಕವನ್ನು ಪೂರೈಸಿದರು. ಅಲ್ಲದೆ ಕ್ಯಾಲೆಂಡರ್ ವರ್ಷವೊಂದರಲ್ಲಿ 5ಕ್ಕಿಂತ ಅಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅವರನ್ನೊಳಗೊಂಡ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರು. ಇದೇ ವೇಳೆ ಅತಿ ಕಡಿಮೆ ಇನಿಂಗ್ಸ್ನಲ್ಲಿ ಭಾರತ ಪರ 6 ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಧವನ್ ಅವರ ಹೆಸರಿನಲ್ಲಿತ್ತು. ಧವನ್ 46 ಇನಿಂಗ್ಸ್ನಲ್ಲಿ ಈ ದಾಖಲೆ ಬರೆದಿದ್ದರು. ಆದರೆ ಗಿಲ್ ಕೇವಲ 35 ಇನಿಂಗ್ಸ್ನಲ್ಲಿ ಈ ದಾಖಲೆ ಮೀರಿನಿಂತರು.
ಭರ್ಜರಿ ಜತೆಯಾಟ
ಶ್ರೇಯಸ್ ಅಯ್ಯರ್ ಮತ್ತು ಗಿಲ್ ಸೇರಿಕೊಂಡು ದ್ವಿತೀಯ ವಿಕೆಟ್ಗೆ ಭರ್ತಿ 200 ರನ್ಗಳ ಜತೆಯಾಟ ನಡೆಸಿದರು. ಅಯ್ಯರ್ ಅವರು 90 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 105 ರನ್ ಬಾರಿಸಿದರೆ, ಶುಭಮನ್ ಗಿಲ್ 97 ಎಸೆತದಿಂದ 104 ರನ್ ಬಾರಿಸಿದರು. ಈ ವೇಳೆ 6 ಬೌಂಡಿ ಮತ್ತು 4 ಸಿಕ್ಸರ್ ಸಿಡಿಯಿತು.
ಸಿಡಿದ ರಾಹುಲ್-ಸೂರ್ಯ
ಅಯ್ಯರ್ ಮತ್ತು ಗಿಲ್ ಅವರ ವಿಕೆಟ್ ಪತನದ ಬಳಿಕ ಜತೆಯಾದ ನಾಯಕ ಕೆ.ಎಲ್ ರಾಹುಲ್ ಮತ್ತು ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಕೂಡ ಆಸೀಸ್ ಬೌಲರ್ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿ ಸುರಿಮಳೆ ಸುರಿದರು. ಕ್ಯಾಮರೂನ್ ಗ್ರೀನ್ ಅವರ ಓವರ್ ಒಂದರಲ್ಲಿ ಸೂರ್ಯಕುಮಾರ್ ಸತತ 4 ಸಿಕ್ಸರ್ ಚಚ್ಚಿ ಮಿಂಚಿದರು. ರಾಹುಲ್ ಅವರು ಸಿಕ್ಸರ್ ಮೂಲಕವೇ ಖಾತೆ ತೆರೆದರು. ಮೊದಲ ಪಂದ್ಯದಂತೇ ಈ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿ ನಾಯಕನ ಆಟವಾಡಿದರು. ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 52 ರನ್ ಗಳಿಸಿ ಗ್ರೀನ್ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಮತ್ತು ಸೂರ್ಯ ಸೇರಿಕೊಂಡು 5ನೇ ವಿಕೆಟ್ಗೆ 53 ರನ್ ರಾಶಿ ಹಾಕಿದರು. ಇಶಾನ್ ಕಿಶನ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ 18 ಎಸೆತದಲ್ಲಿ 31 ರನ್ ಪೇರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.
A thorough all-round performance 👊
— ICC (@ICC) September 24, 2023
India take an unassailable 2-0 series lead against Australia with a big win in Indore 👏
📝 #INDvAUS: https://t.co/pO3kSaXW6C pic.twitter.com/MlSxsRVvxN
ಸೂರ್ಯಕುಮಾರ್ ಅವರು ಕೊನೆಯ ತನಕ ನಿಂತು ಉತ್ತಮ ಆಡವಾಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅವರು ಅಂತಿವಾಗಿ ತಲಾ 6 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಅಜೇಯ 72 ರನ್ ಗಳಿಸಿದರು. ಜಡೇಜಾ 13 ರನ್ ಬಾರಿಸಿ ಅಜೇಯರಾಗಿ ಉಳಿದರು. ಒಟ್ಟಾರೆ ಭಾರತ ತಂಡ ಈ ಪಂದ್ಯದಲ್ಲಿ 18 ಸಿಕ್ಸರ್ ಬಾರಿಸಿತು. ಈ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ನಡಿದಿದ್ದ ಏಕದಿನ ಪಂದ್ಯದಲ್ಲಿ ಭಾರತ 19 ಸಿಕ್ಸರ್ ಬಾರಿಸಿದ ಸಾಧನೆ ಮಾಡಿತ್ತು. ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದ ಋತುರಾಜ್ ಗಾಯಕ್ವಾಡ್ ಆರಂಭದಲ್ಲಿ ಸತತ 2 ಬೌಂಡರಿ ಬಾರಿಸಿದರೂ ಇದೇ ಜೋಶ್ ಮುಂದುವರಿಸುವಲ್ಲಿ ಎಡವಿದರು. 8 ರನ್ ಗಳಿಸಿದ್ದ ವೇಳೆ ಜೋಶ್ ಹ್ಯಾಜಲ್ವುಡ್ಗೆ ವಿಕೆಟ್ ನೀಡಿ ನಿರಾಸೆ ಮೂಡಿಸಿದರು.