ಮುಂಬಯಿ: ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪ್ರತಿ ಸರಣಿಯಲ್ಲಿಯೂ ದಾಖಲೆ ಬರೆಯುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ(Virat Kohli) ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಹಲವು ದಾಖಲೆ ಬರೆಯುವ ಅವಕಾಶವಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ(ಮಾರ್ಚ್ 17) ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಹಲವು ದಿಗ್ಗಜ ಕ್ರಿಕೆಟಿಗರ ಸಾಧನೆಯನ್ನು ಸರಿಗಟ್ಟುವ ಮತ್ತು ಮುರಿಯುವ ಅವಕಾಶವಿದೆ.
ಸಚಿನ್ ದಾಖಲೆ ಮುರಿಯುತ್ತಾರ ವಿರಾಟ್?
ವಿರಾಟ್ ಕೊಹ್ಲಿ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 8 ಶತಕಗಳನ್ನು ಬಾರಿಸಿದ್ದಾರೆ. ಒಂದು ವೇಳೆ ಕೊಹ್ಲಿ ಈ ಸರಣಿಯಲ್ಲಿ 2 ಶತಕ ಬಾರಿಸಿದರೆ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್(sachin tendulkar) ಹೆಸರಿನಲ್ಲಿದ್ದ ದಾಖಲೆ ಮುರಿಯಲಿದ್ದಾರೆ. ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ 9 ಶತಕಗಳನ್ನು ಗಳಿಸಿದ್ದಾರೆ. ಒಂದೊಮ್ಮೆ ವಿರಾಟ್ ಒಂದು ಶತಕ ಬಾರಿಸಿದರೆ ತೆಂಡೂಲ್ಕರ್ ದಾಖಲೆ ಸರಿಗಟ್ಟಲಿದ್ದಾರೆ.
ಪಾಂಟಿಂಗ್ ದಾಖಲೆ ಮೇಲೆ ಕಣ್ಣು
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್(ricky ponting) ಹೆಸರಿನಲ್ಲಿದೆ. ಈ ದಾಖಲೆಯನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿಗೆ 82 ರನ್ ಅಗತ್ಯವಿದೆ. ಕೊಹ್ಲಿ ಈ ಗಡಿ ದಾಟಿದರೆ ಪಾಂಟಿಂಗ್ ಅವರ 2,164 ರನ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ. ಸದ್ಯ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 2,083 ರನ್ ಗಳಿಸಿದ್ದಾರೆ.
ಇದನ್ನೂ ಓದಿ IND VS AUS: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಸರಣಿಯಲ್ಲಿ 191 ರನ್ ಗಳಿಸಿದರೆ ಮತ್ತೊಂದು ದಾಖಲೆ
ವಿರಾಟ್ ಸದ್ಯ 271 ಏಕದಿನ ಪಂದ್ಯಗಳಲ್ಲಿ 57.7 ಸರಾಸರಿಯಲ್ಲಿ 12,809 ರನ್ ಗಳಿಸಿದ್ದಾರೆ. ಕೊಹ್ಲಿ ಈ ಸರಣಿಯಲ್ಲಿ 191 ರನ್ ಗಳಿಸಿದರೆ 13,000 ರನ್ ಪೂರೈಸಲಿದ್ದಾರೆ. ಈ ಮೂಲಕ ಏಕದಿನದಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಮತ್ತು ವಿಶ್ವದ 5ನೇ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.