ನವ ದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಷಭ್ ಪಂತ್ಗೆ ಹಿರಿಯ ಕಿರಿಯ ಕ್ರಿಕೆಟಿಗರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಸಂಕಷ್ಟದ ಸ್ಥಿತಿಯಲ್ಲಿ ಅವರು ಸಮಯೋಚಿತ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಆಪತ್ಭಾಂದವ ಎನಿಸಿಕೊಂಡಿದ್ದರು.
ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿಯೂ ಹಲವು ಬಾರಿ ಭಾರತ ತಂಡದ ಕುಸಿತ ತಪ್ಪಿಸಿ ಜಯ ತಂದುಕೊಟ್ಟಿದ್ದರು. 2011ರ ಏಕದಿನ ವಿಶ್ವ ಕಪ್ ಅದಕ್ಕೆ ಸೂಕ್ತ ಉದಾಹರಣೆ. ಅಂತೆಯೇ ರಿಷಭ್ ಪಂತ್ ಕೂಡ ಭಾರತ ತಂಡಕ್ಕೆ ವಿಕೆಟ್ಕೀಪಿಂಗ್ ಹಾಗೂ ಬ್ಯಾಟಿಂಗ್ ಮೂಲಕ ನೆರವಾಗಲಿದ್ದಾರೆ ಎಂಬುದು ಭಾರತ ಕ್ರಿಕೆಟ್ ಪ್ರೇಮಿಗಳ ಭರವಸೆಯಾಗಿದೆ.
ಧೋನಿ ರೆಕಾರ್ಡ್ ಮುರಿಯುವರೇ ರಿಷಭ್
24 ವರ್ಷದ ಯುವ ಕ್ರಿಕೆಟಿಗ ರಿಷಭ್ ಪಂತ್ ಜುಲೈ 1ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಭಾರತದ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಕೇವಲ 89 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು (146 ರನ್). ಈ ಮೂಲಕ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿದ್ದ ದಾಖಲೆ ಮುರಿದಿದ್ದರು. 2006ರಲ್ಲಿ ಪಾಕಿಸ್ತಾನದ ವಿರುದ್ಧ ಧೋನಿ 93 ಎಸೆತಗಳಲ್ಲಿ ಶತಕ ಬಾರಿಸಿ ಭಾರತ ಪರ ದಾಖಲೆ ಸೃಷ್ಟಿಸಿದ್ದರು.
ಇದುವರೆಗೆ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ವಿಕೆಟ್‌ಕೀಪರ್ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಧೋನಿಯವರ ಈ ದಾಖಲೆಯನ್ನು ಮುರಿಯಲು ರಿಷಭ್ಗೆ ಇನ್ನೊಂದು ಶತಕ ಬೇಕಾಗಿದೆ.
ಇಂಗ್ಲೆಂಡ್ ವಿರುದ್ಧ ಅಬ್ಬರಿಸುವ ರಿಷಭ್
ರಿಷಭ್ ಪಂತ್ ಕ್ರಿಕೆಟ್ ಮೈದಾನದಲ್ಲಿ ಬಿರುಸಿನಿಂದ ಬ್ಯಾಟ್ ಬೀಡುವ ಆಟಗಾರ. ಇದನ್ನು ಅವರು ಮತ್ತೆ ಮತ್ತೆ ಸಾಬೀತು ಮಾಡುತ್ತಾ ಬಂದಿದ್ದಾರೆ. ಟೆಸ್ಟ್ ಪಂದ್ಯದಲ್ಲಿಯೂ ಆಕ್ರಮಣಕಾರಿ ಆಟವಾಡುವ ಎಡಗೈ ಬ್ಯಾಟರ್. ಈವರೆಗೆ ರಿಷಭ್ ಪಂತ್ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಒಟ್ಟು 6 ಶತಕಗಳನ್ನು ಬಾರಿಸಿದ್ದಾರೆ. ಅವುಗಳಲ್ಲಿ 4 ಶತಕಗಳನ್ನು ಇಂಗ್ಲೆಂಡ್ ತಂಡದ ವಿರುದ್ಧ ಬಾರಿಸಿದ್ದು ಗಮನಾರ್ಹ(1 ಏಕದಿನ, 3 ಟೆಸ್ಟ್).
ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ರಿಷಭ್ ಪಂತ್ ಇಂಗ್ಲೆಂಡ್ ನೆಲದಲ್ಲಿ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಪ್ರಥಮ ಭಾರತೀಯ ವಿಕೆಟ್‌ಕೀಪರ್ ಎಂಬ ಸಾಧನೆಗೆ ಹೆಸರಾದರು.
ರಿಷಭ್ ಪಂತ್ ಒಟ್ಟು ಶತಕಗಳ ಪಟ್ಟಿ:
ಮಾದರಿ | ಎದುರಾಳಿ | ಸ್ಕೋರ್ | ಸ್ಥಳ |
ಟೆಸ್ಟ್ | ಇಂಗ್ಲೆಂಡ್ | 114 | ಲಂಡನ್ |
ಟೆಸ್ಟ್ | ಆಸ್ಟ್ರೇಲಿಯಾ | 159* | ಸಿಡ್ನಿ, ಆಸ್ಟ್ರೇಲಿಯಾ |
ಟೆಸ್ಟ್ | ಇಂಗ್ಲೆಂಡ್ | 101 | ಅಹ್ಮದಾಬಾದ್, ಭಾರತ |
ಟೆಸ್ಟ್ | ದಕ್ಷಿಣ ಆಫ್ರಿಕಾ | 100* | ಕೇಪ್ ಟೌನ್ |
ಟೆಸ್ಟ್ | ಇಂಗ್ಲೆಂಡ್ | 146 | ಬರ್ಮಿಂಗ್‌ಹ್ಯಾಮ್ |
ಏಕದಿನ | ಇಂಗ್ಲೆಂಡ್ | 125 | ಮ್ಯಾಂಚೆಸ್ಟರ್ |
ರಿಷಭ್ ಪಂತ್ ಇತರ ಸಾಧನೆ:
2019ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಅಜೇಯ 159 ರನ್ ಬಾರಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಮಾದರಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಾತ್ರರಾದರು. ಅಲ್ಲದೆ, ಆಸ್ಟ್ರೇಲಿಯಾ ನೆಲದಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ಪ್ರಶಂಸೆಗೆ ಭಾಜನರಾದರು.
ಸಚಿನ್ ದಾಖಲೆ ಮುರಿದಿದ್ದ ರಿಷಭ್
ಇತ್ತೀಚೆಗೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ 100 ಸಿಕ್ಸರ್ ಬಾರಿಸಿದ್ದ ರಿಷಭ್ ಪಂತ್ ಕ್ರಿಕೆಟ್ ದಿಗ್ಗಜ ಸಚಿನ್ ಅವರ ದಾಖಲೆ ಮುರಿದಿದ್ದರು. ಭಾರತ ಪರ ೧೦೦ ಸಿಕ್ಸರ್‌ಗಳನ್ನು ಬಾರಿಸಿದ ಕಿರಿಯ ಬ್ಯಾಟರ್ ಎಂಬ ದಾಖಲೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ 25 ವರ್ಷವಿದ್ದಾಗ ಈ ದಾಖಲೆ ಮಾಡಿದ್ದರು. ಆದರೆ, ರಿಷಭ್ ಪಂತ್ 24 ವರ್ಷ 271 ದಿನದಲ್ಲಿ ಈ ದಾಖಲೆ ಸೃಷ್ಟಿಸಿದ್ದರು.
ರಿಷಭ್ ಪಂತ್ ಅವರು ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗದಲ್ಲಿ 1೦೦ ಸಿಕ್ಸರ್ ಬಾರಿಸಿದ ಎರಡನೇ ಆಟಗಾರ. ರಿಷಭ್ 116 ಇನಿಂಗ್ಸ್‌ಗಳಲ್ಲಿ 1೦೦ ಸಿಕ್ಸರ್ ಬಾರಿಸಿದ್ದಾರೆ. 101 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಹಾರ್ದಿಕ್ ಪಾಂಡ್ಯ ಮೊದಲ ಸ್ಥಾನದಲ್ಲಿದ್ದಾರೆ.
ಭಾರತ vs ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ರಿಷಭ್
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಭಾರತಕ್ಕೆ 260 ರನ್‌ಗಳ ಗುರಿ ನೀಡಿತ್ತು. ಭಾರತದ ಆರಂಭಿಕ ಬ್ಯಾಟರ್‌ಗಳು ಬೇಗನೆ ಪೆವಿಲಿಯನ್ ಸೇರಿದರು. ರಿಷಭ್ ಪಂತ್ ಕ್ರೀಸ್‌ಗೆ ಬರಬೇಕಾದರೆ ಭಾರತವು 2 ವಿಕೆಟ್ ನಷ್ಟಕ್ಕೆ 21 ರನ್ ಮಾತ್ರ ಗಳಿಸಿತ್ತು. ಅದಾಗಿ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಅಬ್ಬರಿಸಿದರು. ರಿಷಭ್ ಪಂತ್ 113 ಎಸೆತಗಳಲ್ಲಿ ಭರ್ಜರಿ 125 ರನ್ ಗಳಿಸಿ ಅಬ್ಬರಿಸಿದರು.
ಟೆಸ್ಟ್ ಮಾದರಿಯಲ್ಲಿ ರಿಷಭ್ 5 ಶತಕಗಳನ್ನು ಬಾರಿಸಿದ್ದಾರೆ. ಆದರೆ ಟಿ20 ಮಾದರಿಯಲ್ಲಿ ಇನ್ನೂ ಶತಕ ಬಾರಿಸಿಲ್ಲ. ಟಿ20 ಮಾದರಿಯಲ್ಲಿ ಶತಕ ಬಾರಿಸಿದರೆ ಮೂರು ಮಾದರಿಯಲ್ಲೂ ಶತಕ ಬಾರಿಸಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಮೂರು ಮಾದರಿಯ ಶತಕವೀರರು: ಸುರೇಶ್ ರೈನಾ, ರೋಹಿತ್ ಶರ್ಮ, ಕೆ.ಎಲ್ ರಾಹುಲ್
ಇದನ್ನೂ ಓದಿ: ಸಚಿನ್ sixer ದಾಖಲೆ ಮೀರಿದ ರಿಷಭ್ ಪಂತ್