ಅಹಮದಾಬಾದ್: ವಿಶ್ವಕಪ್ ಪಂದ್ಯಾವಳಿಯ ದೊಡ್ಡ ಕದನವೊಂದು ಶನಿವಾರ ಅಹಮದಾಬಾದ್ನ(Ahmedabad) ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ(Narendra Modi Stadium) ನಡೆಯಲಿದೆ. ಇದಕ್ಕೆ ಸಾಕ್ಷಿಯಾಗಲಿರುವ ತಂಡಗಳೆಂದರೆ ಭಾರತ(IND vs PAK) ಮತ್ತು ಪಾಕಿಸ್ತಾನ. ಎರಡೂ ತಂಡಗಳು ಈವರೆಗೆ ಅಜೇಯವಾಗಿ ಉಳಿದಿರುವುದರಿಂದ ಹಾಗೂ ಎರಡೂ ಬಲಿಷ್ಠ ಪಡೆಗಳಾಗಿರುವುದರಿಂದ ಸಹಜವಾಗಿಯೇ ಈ ಪಂದ್ಯದ ತೂಕ ಹೆಚ್ಚು. ಭಾರತ ಈಗಾಗಲೇ ಅಫಘಾನಿಸ್ತಾನ ಮತ್ತು ಬಲಿಷ್ಠ ಆಸ್ಟ್ರೇಲಿಯಾವನ್ನು ಮಗುಚಿ ಹಾಕಿದರೆ, ಬಾಬರ್ ಪಡೆ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾವನ್ನು ಮಣಿಸಿದೆ.
ನವರಾತ್ರಿ ಆರಂಭದ ಮುನ್ನ ದಿನ ನಡೆಯುವ ಈ ಪಂದ್ಯದಲ್ಲಿ ಭಾರತ ತಂಡ ಪಾಕ್ ಪಡೆಯನ್ನು ಸದೆಬಡಿದು ಎರಡು ವಾರಗಳ ಮುಂಚಿತವಾಗಿಯೇ ವಿಜಯದಶಮಿ ಸಂಭ್ರಮಾಚರಣೆ ಮಾಡಲಿ ಎನ್ನುವುದು ಶತಕೋಟಿ ಭಾರತೀಯರ ಆಶಯವಾಗಿದೆ. ಆದರೆ ಪಾಕ್ ಸವಾಲನ್ನು ಅಷ್ಟು ಹಗುರವಾಗಿ ಪರಿಣಿಸಬಾರದು. ಏಕೆಂದರೆ ಇತ್ತೀಚಿನ ಕೆಲ ವರ್ಷಗಳಿಂದ ಪಾಕ್ ಆಟಗಾರರು ಭಾರತ ವಿರುದ್ಧ ಒತ್ತಡವನ್ನು ನಿಭಾಯಿಸಿ ಆಡುವ ಕಲೆಯನ್ನು ಮನಗಂಡಿದ್ದಾರೆ.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯ ನಡೆಯುವುದು ಅನುಮಾನ
ವಿಶ್ವಕಪ್ ಎತ್ತಿದಷ್ಟೇ ಸಂಭ್ರಮ
ಇಲ್ಲಿ ಗೆದ್ದವರು ವಿಶ್ವಕಪ್ ಎತ್ತಿದಷ್ಟೇ ಸಂಭ್ರಮದಲ್ಲಿ ಬೀಗಲಿದ್ದಾರೆ. ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯಲಿದ್ದಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳಲಿದ್ದಾರೆ. ಪಾಕಿಸ್ತಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು. ಸೋಲಿನ ದಾಖಲೆಯನ್ನೇ ಹೊಂದಿರುವುದರಿಂದ ವಿಶ್ವಕಪ್‌ನಲ್ಲಿ ಭಾರತವನ್ನು ಎದುರಿ ಸುವುದೆಂದರೆ ಪಾಕಿಸ್ತಾನಕ್ಕೆ ಅವ್ಯಕ್ತ ಭೀತಿ.
ವಿಶ್ವಕಪ್ ಇತಿಹಾಸದಲ್ಲಿ ಇಂಡೋ-ಪಾಕ್ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ! ಬಗೆದಷ್ಟೂ ರೋಚಕ ಘಟನಾವಳಿ, ರೋಮಾಂಚನ ಹಾಗೂ ಉದ್ವೇಗದ ಕ್ಷಣಗಳು ಉಕ್ಕಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ, ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಮುಖಾಮುಖೀಯಲ್ಲಿ ಭಾರತ ಸೋಲರಿಯದ ಸರದಾರನಾಗಿ ಮೆರೆದಿರುವುದು. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಏಳೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ!
ಇದನ್ನೂ ಓದಿ ‘ಮಂಕಿ’ಯಾದ ಮಿಯಾಂದಾದ್, ಬೆಂಕಿಯಾದ ವೆಂಕಿ; ಇದು ಇಂಡೋ-ಪಾಕ್ ಕದನ ಕತೆ
ಪಾಕಿಗಳು ಅಪಾಯಕಾರಿ
ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಮೊಹಮ್ಮದ್ ರಿಜ್ವಾನ್, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ ಅಬ್ದುಲ್ಲ ಶಫೀಕ್, ಇಮಾಮ್ ಉಲ್ ಹಕ್, ಬಾಬರ್ ಅಜಂ, ಆಲ್‌ರೌಂಡರ್ ಶಾದಾಬ್ ಖಾನ್, ಘಾತಕ ವೇಗಿ ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್ ಅವರೆಲ್ಲ ಎದುರಾಳಿಗೆ ಆತಂಕ ತಂದೊಡ್ಡಬಲ್ಲರು. ಆದರೆ ನಮ್ಮ ರೋಹಿತ್, ಕೊಹ್ಲಿ, ರಾಹುಲ್, ಪಾಂಡ್ಯ, ಬುಮ್ರಾ, ಜಡೇಜಾ ಅವರೆಲ್ಲ ಇದನ್ನು ಮೆಟ್ಟಿ ನಿಲ್ಲಬಲ್ಲರೆಂಬ ವಿಶ್ವಾಸ ನಮ್ಮವರದ್ದು.
ಇದನ್ನೂ ಓದಿ IND vs PAK: ಪಾಕ್ ವಿರುದ್ಧ ಭಾರತ ಸೋಲಿಲ್ಲದ ಸರದಾರ; ದಾಖಲೆಯ ಪಟ್ಟಿ ಬಲು ರೋಚಕ
ಟಾರ್ಗೆಟ್ ಶಾಹೀನ್ ಅಫ್ರಿದಿ
ಎರಡೂ ಕಡೆ ಸ್ವಿಂಗ್ ಮಾಡಬಲ್ಲ, ಹೊಸ ಚೆಂಡಿನಲ್ಲಿ ಅಪಾಯಕಾರಿಯಾದ ಶಾಹೀನ್ ಅಫ್ರಿದಿ ಅವರಿಗೆ ಹೆದರಿಕೊಂಡು ಆಡಬಾರದು. ಆರಂಭದಿಂದಲೇ ಅವರ ಎಸೆತಕ್ಕೆ ಮುನ್ನುಗ್ಗಿ ಬಾರಿಸಬೇಕು. ಶಾಹೀನ್ ಅವರ ದೊಡ್ಡ ವಿಕ್ನೆಸ್ ಎಂದರೆ, ಆರಂಭದಲ್ಲೇ ಅವರಿಗೆ ಬಾರಿಸಿದರೆ ಗಲಿಬಿಲಿಯಾಗಿ ಸಂಪೂರ್ಣವಾಗಿ ಲಯ ಕಳೆದುಕೊಳ್ಳುತ್ತಾರೆ. ಒಂದೊಮ್ಮೆ ಅವರಿಗೆ ಹೆದರಿ ಆಡಿದರೆ ಇದನ್ನೇ ಅಸ್ತ್ರವಾಗಿ ಅವರು ಬಳಸಿಕೊಳ್ಳುತ್ತಾರೆ. ಆದ್ದರಿಂದ ಭಾರತದ ಆರಂಭಿಕ ಆಟಗಾರ ರೋಹಿತ್ ಮತ್ತು ಅವರ ಜತೆಗಾರನಾಗಿ ಆಡುವ ಬ್ಯಾಟರ್ ಮೈ ಚಳಿ ಬಿಟ್ಟು ಬ್ಯಾಟ್ ಬೀಸಬೇಕು.
ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಪ್ರಚಂಡ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯ ಮೇಲೆ ಈ ಪಂದ್ಯದಲ್ಲೂ ನಿರೀಕ್ಷೆ ಇರಿಸಲಾಗಿದೆ. ಆದರೆ ಡೆಂಗ್ಯೂ ಜ್ವರದಿಂದ ಚೇತರಿಕೆ ಕಂಡಿರುವ ಶುಭಮನ್ ಗಿಲ್ ಅವರು ಈ ಪಂದ್ಯದಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ. ಗುರುವಾರ ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದರೂ ಅವರ ಲಭ್ಯತೆಯ ಬಗ್ಗೆ ಬಿಸಿಸಿಐ ಇದುವರೆಗೂ ಯಾವುದೇ ಅಪ್ಡೇಟ್ ನೀಡಿಲ್ಲ.