ಪಲ್ಲೆಕೆಲೆ: ಟೀಮ್ ಇಂಡಿಯಾದ ನಾಯಕ ಪಾಕಿಸ್ತಾನ(IND vs PAK) ವಿರುದ್ಧ ಸಾಗುತ್ತಿರುವ ಏಷ್ಯಾಕಪ್(Asia Cup 2023) ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ನಡೆಸಿ ಎಲ್ಲಡೆ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ರೋಹಿತ್ ಶರ್ಮ(Rohit Sharma) ಅವರು ತಮ್ಮ ಈ ಕಳಪೆ ಪ್ರದರ್ಶನಕ್ಕೆ ಕ್ಷಮೆ ಕೋರಿರುವ ಟ್ವೀಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶ್ರೀಲಂಕಾದ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಶರ್ಮ ಅವರು ಮೊದಲ ಎರಡು ಓವರ್ಗಳಲ್ಲಿ ಉತ್ತಮ ಬ್ಯಾಟಿಂಗ್ ತೋರಿದರು. ಶಾಹೀನ್ ಅಫ್ರಿದಿ(Shaheen Afridi) ಅವರ ಮೊದಲ ಓವರ್ನಲ್ಲಿ ಒಂದು ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಅವರ ಈ ಬ್ಯಾಟಿಂಗ್ ಪ್ರತಾಪ ಹೆಚ್ಚು ಹೊತ್ತು ಸಾಗಲಿಲ್ಲ. ಮಳೆ ನಿಂತು ಪಂದ್ಯ ಆರಂಭವಾದ ಮೊದಲ ಓವರ್ನಲ್ಲಿಯೇ ಶಾಹೀನ್ ಅಫ್ರಿದಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಅಫ್ರಿದಿ ವಿರುದ್ಧ ಮತ್ತೆ ವೈಫಲ್ಯ ಕಂಡರು. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿಯೂ ಅವರು ಅಫ್ರಿದಿ ಎಸೆತದಲ್ಲಿ ಬೌಲ್ಡ್ ಆಗಿದ್ದರು.
ಕ್ಷಮೆಯಾಚಿಸಿದ ರೋಹಿತ್
ರೋಹಿತ್ ಅವರು ಈ ಪಂದ್ಯದಲ್ಲಿ 22 ಎಸೆತ ಎದುರಿಸಿ 2 ಬೌಂಡರಿ ನೆರವಿನಿಂದ 11 ರನ್ ಗಳಿಸಿ ಔಟಾದರು. ಅವರು ಪೆವಿಲಿಯನ್ ಸೇರಿದ ಕೆಲವೇ ಕ್ಷಣದಲ್ಲಿ ರೋಹಿತ್ ಅವರ ಕ್ಷಮೆಯಾಚನೆಯ ಟ್ವೀಟ್ ವೈರಲ್ ಆಗಿದೆ. ಅಸಲಿಗೆ ರೋಹಿತ್ ಅವರು ಈ ಪಂದ್ಯದ ಕಳಪೆ ಪ್ರದರ್ಶನಕ್ಕೆ ಮಾಡಿದ ಟ್ವೀಟ್ ಇದಾಗಿಲ್ಲ. ಬದಲಾಗಿ ಇದು ಹಳೆಯ ಟ್ವೀಟ್ ಆಗಿದೆ. 2010 ಏಪ್ರಿಲ್ 23ರಂದು ರೋಹಿತ್ ಶರ್ಮಾ ಅವರು ಕಳಪೆಯಾಗಿ ಔಟಾದ ಬೇಸರದಲ್ಲಿ ಭಾರತದ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ಈ ಟ್ವೀಟ್ ಈಗ ವೈರಲ್ ಆಗುತ್ತಿದೆ.
“ಎಲ್ಲರಿಗೂ ನಮಸ್ಕಾರ. ನನಗೆ ಗೊತ್ತು ಇಂದು ನಾನು ಹಲವರನ್ನು ನಿರಾಶೆಗೊಳಿಸಿದ್ದೇನೆ. ಆ ಕಳಪೆ ಶಾಟ್‌ಗೆ ನನ್ನನ್ನು ದೂಷಿಸಲಾಗಿದೆ, ಮತ್ತೊಮ್ಮೆ ಕ್ಷಮಿಸಿ ಗಯ್ಸ್,” ಎಂದು ಹೇಳಿದ್ದ ಟ್ವೀಟ್ ಪಾಕ್ ಪಂದ್ಯಕ್ಕೆ ಹೋಲಿಸಿ ನೆಟ್ಟಿಗರು ಇದನ್ನು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ IND vs PAK: ಶಮಿಗೆ ಅವಕಾಶ ನೀಡದ ಕುರಿತು ರೋಹಿತ್ಗೆ ಸಂಜಯ್ ಮಾಂಜ್ರೇಕರ್ ಚಾಟಿ
ಕಳಪೆ ದಾಖಲೆ ಬರೆದ ರೋಹಿತ್
2021ರಿಂದ ಏಕದಿನದಲ್ಲಿ ರೋಹಿತ್ ಶರ್ಮ ಅವರು 6 ಬಾರಿ ಎಡಗೈ ವೇಗಿಗೆ ವಿಕೆಟ್ ಒಪ್ಪಿಸಿದರು. ಒಟ್ಟು ಮೂರು ವರ್ಷಗಳ ಅವಧಿಯಲ್ಲಿ ರೋಹಿತ್ ಶರ್ಮ ಎಡಗೈ ವೇಗಿಯಿಂದ 147 ಎಸೆತಗಳನ್ನು ಎದುರಿಸಿ 138 ರನ್ ಕಲೆಹಾಕಿದ್ದಾರೆ.
ಆಡುವ ಬಳಗ
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್(ವಿಕೆಟ್ ಕೀಪರ್).