ಪರ್ತ್: ಐಸಿಸಿ ಟಿ20 ವಿಶ್ವ ಕಪ್‌ನ ಸೂಪರ್ 12 ಹಂತದ ಮೊದಲೆರಡು ಪಂದ್ಯಗಳಲ್ಲಿ ಈಗಾಗಲೇ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ, ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಟಿಕೆಟ್ ಖಾತ್ರಿ ಪಡಿಸುವುದು ರೋಹಿತ್ ಪಡೆಯ ಯೋಜನೆಯಾಗಿದೆ. ಇನ್ನೊಂದೆಡೆ ಹರಿಣಗಳ ಪಡೆ ಕಳೆದ ಭಾರತ ಪ್ರವಾಸದ ಟಿ20 ಸರಣಿ ಸೋಲಿಗೆ ಇಲ್ಲಿ ಸೇಡು ತೀರಿಸಲು ಕಾಯುತ್ತಿದೆ. ಈ ನಿಟ್ಟಿನಲ್ಲಿ ಈ ಪಂದ್ಯ ಹೈವೋಲ್ಟೇಜ್ನಿಂದ ಕೂಡಿರಲಿದೆ ಎನ್ನಲಡ್ಡಿಯಿಲ್ಲ.
ಭಾರತ ತಂಡದ ಪರ ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧ ಶತಕ ದಾಖಲಿಸುವ ಮೂಲಕ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧವೂ ಈ ಆಟಗಾರರಿಂದ ಅಂತಹದ್ದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ. ಆದರೆ ಕನ್ನಡಿಗ ರಾಹುಲ್ ಮಾತ್ರ ಇನ್ನೂ ಬ್ಯಾಟಿಂಗ್ ಫಾರ್ಮ್ಗೆ ಮರಳದಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವರ ಸ್ಥಾನಕ್ಕೆ ಪಂತ್ ಉತ್ತಮ ಆಯ್ಕೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಈ ಪಂದ್ಯದಲ್ಲಿ ರಾಹುಲ್ ಆಡಲಿದ್ದಾರೆ ಎಂದು ಪಂದ್ಯಕ್ಕೂ ಮುನ್ನವೇ ತಿಳಿಸಿದ್ದಾರೆ. ಈ ಅವಕಾಶವನ್ನು ರಾಹುಲ್ ಎರಡೂ ಕೈಗಳಿಂದ ಬಾಚಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ.
ಇತ್ತಂಡಗಳ ಬೌಲಿಂಗ್ ಬಲಿಷ್ಠ
ಬೌಲಿಂಗ್ ವಿಚಾರದಲ್ಲಿ ನೋಡುವುದಾದರೆ ಉಭಯ ತಂಡದ ಬೌಲರ್ಗಳು ಸಮರ್ಥರಿದ್ದಾರೆ. ಭಾರತ ಪರ ಭುವನೇಶ್ವರ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಶಮಿ ಬಲಿಷ್ಠವಾಗಿ ಗೋಚರಿಸಿದರೆ. ಅತ್ತ ಕಗಿಸೊ ರಬಾಡ, ಆನ್ರಿಚ್ ನೋರ್ಜೆ ಘಾತಕ ಸ್ಪೆಲ್ ನಡೆಸಬಲ್ಲರು. ಉಳಿದಂತೆ ಸ್ಪಿನ್ ವಿಭಾಗದಲ್ಲಿ ಆರ್.ಅಶ್ವಿನ್, ತಬ್ರೆಜ್ ಶಂಸಿ, ಕೇಶವ್ ಮಹಾರಾಜ್ ಕೂಡ ಉತ್ತಮ ಲಯದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಇತ್ತಂಡಗಳ ಬೌಲಿಂಗ್ ವಿಭಾಗ ಹೆಚ್ಚು ಶಕ್ತಿಶಾಲಿ.
ಡೇಂಜರಸ್ ರಿಲಿ ರೊಸೊ
ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ರಿಲಿ ರೊಸೊ ಈ ಕೂಟದ ಡೇಂಜರಸ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ಭಾರತ ಪ್ರವಾಸದ ವೇಳೆಯೂ ಶತಕ ಸಿಡಿಸಿ ಮಿಂಚಿದ್ದರು. ಅವರನ್ನು ಹೆಚ್ಚು ಕಾಲ ಕ್ರೀಸ್ನಲ್ಲಿ ಇರದಂತೆ ಭಾರತೀಯ ಬೌಲರ್ಗಳು ನೋಡಿಕೊಳ್ಳಬೇಕಿದೆ. ಉಳಿದಂತೆ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಕೂಡ ಉತ್ತಮ ಫಾರ್ಮ್ನಲ್ಲಿರುವುದು ತಂಡಕ್ಕೆ ಹೆಚ್ಚು ಬಲ ನೀಡಿದೆ. ಜತೆಗೆ ಡೇವಿಡ್ ಮಿಲ್ಲರ್ ಅವರನ್ನೂ ಕಡೆಗಣಿಸುವಂತಿಲ್ಲ. ಅವರು ಕೆಲವೊಮ್ಮೆ ಮ್ಯಾಚ್ ಕಿಲ್ಲರ್ ಆಗಿ ಕಾಣಿಸಿಕೊಂಡ ಹಲವು ನಿದರ್ಶನವಿದೆ. ಆದ್ದರಿಂದ ಮಿಲ್ಲರ್ ಮೇಲು ನಿಗಾ ಇರಿಸಬೇಕಿದೆ.
ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 23 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 13 ಪಂದ್ಯವನ್ನ ಜಯಿಸಿದರೆ, ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ ಗೆಲವು ಸಾಧಿಸಿದೆ. 1 ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ.
ಪಂದ್ಯ ಆರಂಭ:
ಸಮಯ: ಸಂಜೆ 04: 30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಪರ್ತ್ ಸ್ಟೇಡಿಯಂ, ಪರ್ತ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಇದನ್ನೂ ಓದಿ | T20 World Cup | ಗ್ಲೆನ್ ಫಿಲಿಪ್ಸ್ ಶತಕ; ಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ 65 ರನ್ ಗೆಲುವು