ರಾಜ್‌ಕೋಟ್ (ಗುಜರಾತ್): ಭಾರತದ ಬೌಲರ್‌ಗಳು ಮಾಡಿದ ಕಮಾಲ್‌ನಿಂದ ಭಾರತವು ದಕ್ಷಿಣ ಆಫ್ರಿಕಾದ ವಿರುದ್ಧದ ಟಿ20 ಸರಣಿಯ (Ind vs Sa T20) ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ 82 ರನ್‌ಗಳ ಗೆಲುವು ಸಾಧಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ 2-2 ಪಂದ್ಯ ಗೆದ್ದು ಸಮವಾಗಿದೆ. ಸರಣಿಯನ್ನು ಸಮಗೊಳಿಸಿ ಭಾರತವು ಈ ಸರಣಿಯನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದಿದೆ. ಇನ್ನು 19 ಬಾಲ್‌ಗಳು ಬಾಕಿ ಇರುವಾಗಲೇ ಭಾರತವು ಗೆದ್ದಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸರಣಿಯನ್ನು ಗೆಲ್ಲಲು ಈಗ ಎರಡೂ ತಂಡಗಳೂ ಐದನೇ ಪಂದ್ಯದಲ್ಲಿ ಹೋರಾಡಲಿವೆ.
ಮೊದಲ ಇನ್ನಿಂಗ್ಸ್:
ಸತತವಾಗಿ ನಾಲ್ಕನೇ ಬಾರಿ ಟಾಸ್ ಸೋತ ಪಂತ್ ಪಡೆ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳ ದಾಳಿಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರು ಔಟಾದರು. ಹತ್ತನೇ ಓವರ್‌ನ ಹೊತ್ತಿಗೆ ಮೂವರು ಪೆವಿಲಿಯನ್ ಸೇರಿಯಾಗಿತ್ತು. ಋತುರಾಜ್ ಗಾಯಕ್‌ವಾಡ್ ಕೇವಲ 5 ರನ್ ಗಳಿಸಿ ಪವಿಲಿಯನ್ ಸೇರಿದರೆ, ಶ್ರೇಯಸ್ ಐಯ್ಯರ್ ಕೇವಲ 4 ರನ್‌ಗೆ ಔಟಾದರು. ನಂತರ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಉತ್ತಮ ಜತೆಯಾಟದ ಪ್ರಯತ್ನದಲ್ಲಿದ್ದರು. ಆದರೆ ರಿಷಭ್ 23 ಬಾಲ್‌ಗೆ ಕೇವಲ 17 ರನ್ ಬಾರಿಸಿ ಔಟಾದರು. ಕಳೆದ ಮೂರೂ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್ ಕಿಶನ್ ಕೂಡ ನಿರಾಸೆ ಮೂಡಿಸಿದ್ದರು. 26 ಎಸೆತಗಳನ್ನು ಎದುರಿಸಿದ ಅವರು 27 ರನ್ ಮಾತ್ರ ಬಾರಿಸಿ ವಿಕೆಟ್ ಒಪ್ಪಿಸಿದರು. ಪಂದ್ಯಕ್ಕೆ ನಿಜವಾಗಿಯೂ ತಿರುವು ನೀಡಿದ್ದು ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್.
13 ಓವರ್‌ನ ಅಂತಿಮದಲ್ಲಿ ಭಾರತದ ಸ್ಕೋರ್: 81-4
ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ ಪಾಂಡ್ಯ ಸೇರಿ ಪಿಚ್‌ನಲ್ಲಿ ಅಬ್ಬರಿಸಿದರು. ದಿನೇಶ್ ಅವರ ಬ್ಯಾಟಿಂಗ್ ರಭಸಕ್ಕೆ ದಕ್ಷಿಣ ಆಫ್ರಿಕಾ ಬೌಲರ್‌ಗಳು ಸುಸ್ತಾಗಿಬಿಟ್ಟರು! ಕೇವಲ 27 ಬಾಲ್‌ಗೆ 55 ರನ್ ಬಾರಿಸಿ ಅವರು ಮಿಂಚಿದರು. ಇದು ಟಿ20 ಕ್ರಿಕೆಟ್ ಮಾದರಿಯಲ್ಲಿ ದಿನೇಶ್ ಅವರ ಮೊದಲ ಅರ್ಧಶತಕ. ಅವರಿಗೆ ಸಾಥ್ ನೀಡಿದ್ದು ಹಾರ್ದಿಕ್ ಪಾಂಡ್ಯ. 31 ಎಸೆತಗಳಲ್ಲಿ ಹಾರ್ದಿಕ್ 46 ರನ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದರು. ಇವರಿಬ್ಬರ ಅಬ್ಬರಕ್ಕೆ ಭಾರತದ ಸ್ಕೋರ್ 169ಕ್ಕೆ ಏರಿತು.
20 ಓವರ್‌ಗೆ ಭಾರತದ ಸ್ಕೋರ್: 169-6
ಎರಡನೇ ಇನ್ನಿಂಗ್ಸ್:
ಸುಲಭದ ಟಾರ್ಗೆಟ್ ನಿರೀಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಟಾರ್ಗೆಟ್ ಒಂದು ಶಾಕ್ ನೀಡಿತ್ತು. ಬವುಮಾ ಹಾಗೂ ಡಿ ಕಾಕ್ ಒಳ್ಳೆಯ ಆಟವನ್ನು ಆಡುವ ಭರವಸೆಯಲ್ಲಿದ್ದರು. ಎರಡನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತಕ್ಕೆ ಡಿ ಕಾಕ್ ಎರಡು ಫೋರ್ ಕೂಡ ಹೊಡೆದಿದ್ದರು. ಆದರೆ 14 ರನ್ ಗಳಿಸಿದ ಡಿ ಕಾಕ್ 5ನೇ ಓವರ್‌ನಲ್ಲಿ ರನೌಟ್ ಆದರು. ಭುವನೇಶ್ವರ್ ಕುಮಾರ್ ಎಸೆದ ಬೌನ್ಸರ್‌ನಿಂದ ಬವುಮಾ ಅವರಿಗೆ ಪೆಟ್ಟಾದ ಕಾರಣದಿಂದ ಅವರು ನಿವೃತ್ತಿ ಹೊಂದಬೇಕಾಯಿತು. ಪ್ರಟೋರಿಯಸ್ ಒಂದೇ ಒಂದು ರನ್ ಗಳಿಸದೇ ಅವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಂತೆಯೇ ಈ ಬಾರಿಯೂ ಡೇವಿಡ್ ಮಿಲ್ಲರ್ ವಿಕೆಟನ್ನು ಹರ್ಷಲ್ ಪಟೇಲ್ ಪಡೆದರು.
13 ಓವರ್‌ಗೆ ದಕ್ಷಿಣ ಆಫ್ರಿಕ ತಂಡದ ಸ್ಕೋರ್: 73-5
ಅವೆಶ್ ಖಾನ್ ಅವರು ಈ ಬಾರಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ನಾಲ್ಕು ಓವರ್‌ನಲ್ಲಿ ಕೇವಲ 18 ರನ್ ನೀಡಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಈ ಪಂದ್ಯದಲ್ಲಿ ಕೆಲವು ಅದ್ಭುತ ಬೌನ್ಸರ್‌ಗಳು ಬ್ಯಾಟರ್‌ಗಳಿಗೆ ರನ್ ಹೊಡೆಯಲು ಪರದಾಡುವಂತಾಯಿತು. ಭಾರತದ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡವನ್ನು ಅತ್ಯಂತ ಕಡಿಮೆ ಸ್ಕೋರ್‌ಗೆ ಆಲೌಟ್ ಮಾಡಿ ಮೆಚ್ಚುಗೆಗೆ ಪಾತ್ರರಾದರು.
16.5 ಓವರ್‌ಗೆ ಕೇವಲ 87 ರನ್‌ಗೆ ಆಲೌಟ್ ಆದರು.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಟಿ20ಯ ಒಟ್ಟು 19 ಪಂದ್ಯಗಳು ನಡೆದಿದ್ದು, ಭಾರತ 9 ಪಂದ್ಯಗಳಲ್ಲಿ ಗೆದ್ದಿದ್ದರೆ ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆದ್ದಿದೆ. ಜೂನ್ 19 ರಂದು ಬೆಂಗಳೂರಿನಲ್ಲಿ ಈ ಸರಣಿಯ ಕೊನೆಯ ಪಂದ್ಯ ನಡೆಯಲಿದ್ದು, ಇದರಲ್ಲಿ ಟೀಮ್ ಇಂಡಿಯಾ ಗೆದ್ದರೆ ಭಾರತ ಸರಣಿ ಗೆದ್ದಂತಾಗಲಿದೆ ಮತ್ತು ಭಾರತವೂ 10 ಪಂದ್ಯಗಳಲ್ಲಿ ಗೆದ್ದಂತಾಗಲಿದೆ.
ಇದನ್ನೂ ಓದಿ: Ind vs Sa T20 | ಸತತ 4 ನೇ ಬಾರಿ ಟಾಸ್ ಗೆದ್ದ ದ.ಆಫ್ರಿಕಾ, ಮಹತ್ವದ ಪಂದ್ಯದಲ್ಲಿ ಮೊದಲು ಭಾರತದ ಬ್ಯಾಟಿಂಗ್