ರಾಜ್ಕೋಟ್: ಪ್ರವಾಸಿ ಶ್ರೀಲಂಕಾ(IND VS SL) ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 91 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಸರಣಿ ವಶಪಡಿಸಿಕೊಂಡಿದೆ. ವರ್ಷಾರಂಭದಲ್ಲಿ ನಡೆದ ಮೊದಲ ಸರಣಿಯಲ್ಲೇ ಯಶಸ್ಸು ಸಾಧಿಸುವ ಮೂಲಕ ಟೀಮ್ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 228 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಶ್ರೀಲಂಕಾ16.4 ಓವರ್ಗಳಲ್ಲಿ 137 ರನ್ ಗಳಿಸಿ ಸರ್ವಪತನ ಕಂಡಿತು.
ಬೃಹತ್ ಮೊತ್ತವನ್ನು ಕಂಡು ದಂಗಾದ ಶ್ರೀಲಂಕಾ ಆರಂಭದಲ್ಲೇ ವಿಕೆಟ್ ಕೈಚೆಲ್ಲಿ ಸಂಕಷ್ಟಕ್ಕೆ ಸಿಲುಕಿತು. ತಂಡದ ಮೊತ್ತ ನೂರು ಆಗುವಷ್ಟರಲ್ಲೇ ಪ್ರಮುಖ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಅಂತಿಮವಾಗಿ 16.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ಲಂಕಾ ಪರ ನಾಯಕ ದಸುನ್ ಶನಕ ಮತ್ತು ಕುಸಲ್ ಮೆಂಡಿಸ್ ತಲಾ 23 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಲಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಪರ ಸೂರ್ಯಕುಮಾರ್(ಅಜೇಯ 112 ), ಶುಭಮನ್ ಗಿಲ್(46) ಬ್ಯಾಟಿಂಗ್ ಪ್ರದರ್ಶನ ತೋರಿದರು. ಬೌಲಿಂಗ್ ನಲ್ಲಿ ಭಾರತ ಪರ ಕಳೆದ ಪಂದ್ಯದಲ್ಲಿ 5 ನೋಬಾಲ್ ಎಸೆದು ದುಬಾರಿಯಾಗಿದ್ದ ಅರ್ಶ್ದೀಪ್ ಸಿಂಗ್ 2.4 ಓವರ್ ಎಸೆದು 20ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ಉಳಿದಂತೆ ಉಮ್ರಾನ್ ಮಲಿಕ್, ಯಜುವೇಂದ್ರ ಚಹಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಉರುಳಿಸಿದರು.
ಸೂರ್ಯ ಸ್ಫೋಟಕ ಬ್ಯಾಟಿಂಗ್
ಭಾರತ ಪರ ಹೊಡಿಬಡಿ ಆಟಗಾರ ಸೂರ್ಯಕುಮಾರ್ ಯಾದವ್ ಆರಂಭದಿಂದಲೇ ಲಂಕಾ ಬೌಲರ್ಗಳ ಮೇಲೆರಗಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. ನಟರಾಜ ಭಂಗಿಯಲ್ಲಿ ಬ್ಯಾಟ್ ಬೀಸಿದ ಅವರು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು. ಇದೇ ವೇಳೆ ಟಿ20 ಕ್ರಿಕೆಟ್ನಲ್ಲಿ ಮೂರನೇ ಶತಕ ಬಾರಿಸಿ ಮಿಂಚಿದರು. ಒಟ್ಟು 51 ಎಸೆತ ಎದುರಿಸಿದ ಅವರು 9ಸಿಕ್ಸರ್ ಮತ್ತು7ಬೌಂಡರಿ ಬಾರಿಸಿ ಅಜೇಯ 112 ರನ್ ಗಳಿಸಿದರು. ಅಂತಿಮ 7ನೇ ಕ್ರಮಾಂಕದಲ್ಲಿ ಆಡಲಿಳಿದ ಅಕ್ಷರ್ ಪಟೇಲ್ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 9 ಎಸೆತಗಳಿಂದ ಅಜೇಯ21 ರನ್ ಚಚ್ಚಿದರು. ಉಳಿದಂತೆ ಶುಭಮನ್ ಗಿಲ್ 46 ರನ್ ಬಾರಿಸಿ ಮಿಂಚಿದರು.
ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣ ಪಂದ್ಯವನ್ನಾಡಿದ ರಾಹುಲ್ ತ್ರಿಪಾಠಿ ಈ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ಒಂದು ಜೀವದಾನ ಪಡೆದರು. ಈ ಲಾಭವನ್ನು ಉಪಯುತ್ತವಾಗಿ ಬಳಿಸಿಕೊಂಡ ಅವರು ಲಂಕಾ ಬೌಲರ್ಗಳನ್ನು ಕಾಡಲಾರಂಭಿಸಿದರು. ಒಂದು ಹಂತದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದು ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ 35 ರನ್ ಗಳಿಸಿದ ವೇಳೆ ಚಮಿಕ ಕರುಣರತ್ನೆ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಅವರ ಸ್ಫೋಟಕ ಇನಿಂಗ್ಸ್ ವೇಳೆ 5 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.
ಇಶಾನ್ ಕಿಶನ್, ಪಾಂಡ್ಯ ವೈಫಲ್ಯ
ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಮಿಂಚಿದ್ದ ಇಶಾನ್ ಕಿಶನ್ ಲಂಕಾ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಆಡಿದ ಮೂರು ಪಂದ್ಯಗಳಲ್ಲಿಯೂ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅಂತಿಮ ಪಂದ್ಯದಲ್ಲಿ 1 ರನ್ ಗಳಿಸಲಷ್ಟೇ ಶಕ್ತರಾದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ ಕೂಟ ಈ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್ಗಳಲ್ಲಿ 5 ವಿಕೆಟ್ಗೆ 228: ಸೂರ್ಯಕುಮಾರ್(ಅಜೇಯ 112) , ರಾಹುಲ್ ತ್ರಿಪಾಠಿ(35), ಶುಭಮನ್ ಗಿಲ್(46).
ಶ್ರೀಲಂಕಾ: 16.4 ಓವರ್ಗಳಲ್ಲಿ 137ಕ್ಕೆ ಆಲೌಟ್(ದಸುನ್ ಶನಕ 23, ಕುಸಲ್ ಮೆಂಡಿಸ್ 23, ಅರ್ಶ್ದೀಪ್ ಸಿಂಗ್ 20ಕ್ಕೆ 3). ಪಂದ್ಯಶ್ರೇಷ್ಠ: ಸೂರ್ಯಕುಮಾರ್ ಯಾದವ್. ಸರಣಿಶ್ರೇಷ್ಠ: ಅಕ್ಷರ್ ಪಟೇಲ್
ಇದನ್ನೂ ಓದಿ | IND VS SL | ಜಿಮ್ನಲ್ಲಿ ವರ್ಕೌಟ್ ಜತೆಗೆ ನೃತ್ಯ ಮಾಡಿದ ರೋಹಿತ್ ಶರ್ಮಾ; ವಿಡಿಯೊ ವೈರಲ್