Site icon Vistara News

SAFF Championship : 9ನೇ ಬಾರಿ ಸ್ಯಾಫ್​​ ಟ್ರೋಫಿ ಮುಡಿಗೇರಿಸಿಕೊಂಡ ಭಾರತ ಫುಟ್ಬಾಲ್​ ತಂಡ

Indian Football Team

ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಎಸ್ಎಎಫ್ಎಫ್ ಚಾಂಪಿಯನ್​ಷಿಪ್ (SAFF Championship)​ ಫೈನಲ್​ ಪಂದ್ಯದಲ್ಲಿ ಕುವೈತ್​ ತಂಡವನ್ನು ಸಡನ್​ ಡೆತ್​ ನಿಯಮದಂತೆ ​ 5-4 ಗೋಲ್​ಗಳಿಂದ ಸೋಲಿಸಿದ ಭಾರತ ತಂಡ 9ನೇ ಬಾರಿ ಟ್ರೋಫಿ ಗೆದ್ದುಕೊಂಡಿತು. ಜಿದ್ದಾಜಿದ್ದಿನಿಂದ ನಡೆದ ಪಂದ್ಯದಲ್ಲಿ ಭಾರತದ ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧು ಎದುರಾಳಿ ತಂಡದ ಕೊನೇ ಗೋಲ್ ಅವಕಾಶವನ್ನು ವಿಫಲಗೊಳಿಸುವ ಮೂಲಕ ಭಾರತಕ್ಕೆ ಎಸ್ಎಎಫ್ಎಫ್ ಚಾಂಪಿಯನ್​​ಷಿಪ್​ ಕಿರೀಟ ಉಳಿಸಿಕೊಳ್ಳುವಲ್ಲಿ ನೆರವಾದರು. ಈ ಮೂಲಕ ಭಾರತ ತಂಡ 30 ದಿನಗಳ ಅಂತರದಲ್ಲಿ ಎರಡನೇ ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿತು. ಕಳೆದ ತಿಂಗಳು ಇಂಟರ್ ಕಾಂಟಿನೆಂಟಲ್ ಕಪ್ ಟ್ರೋಫಿಯನ್ನು ಭಾರತ ತನ್ನದಾಗಿಸಿಕೊಂಡಿತು. ಅದೇ ರೀತಿ ಟೂರ್ನಿಯಲ್ಲಿ ದಾಖಲೆಯ ಒಂಬತ್ತನೇ ಪ್ರಶಸ್ತಿ ಗೆದ್ದ ದಾಖಲೆ ಮಾಡಿತು.

ಫೈನಲ್ ಪಂದ್ಯದ120 ನಿಮಿಷಗಳಲ್ಲಿ ಪೂರ್ಣ ಅವಧಿಯಲ್ಲಿ ಉಭಯ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿತು. ಹೀಗಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಮೊರೆ ಹೋಗಲಾಯಿತು. ಪ್ರತಿ ತಂಡವೂ ಐದು ಪ್ರಯತ್ನಗಳ ಬಳಿಕ 4-4 ಗೋಲ್​ಗಳ ಡ್ರಾ ಮಾಡಿಕೊಂಡಿತು. ಬಳಿಕ ಸಡನ್​ ಡೆತ್​ ನಿಯಮವನ್ನು ಅನುಸರಿಸಲಾಯಿತು. ಮಹೇಶ್ ನೌರೆಮ್ ಭಾರತಕ್ಕೆ ಗೋಲ್ ತಂದುಕೊಟ್ಟರೆ, ಭಾರತದ ಗೋಲ್​ಕೀಪರ್​ ಗುರ್ಪ್ರೀತ್ ಖಲೀದ್ ಹಾಜಿಯಾ ಅವರು ಗೋಲ್​ಪೋಸ್ಟ್​ನೆಡೆಗೆ ಒದ್ದ ಚೆಂಡನ್ನು ತಡೆದು ಭಾರತಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಗುರ್ಪ್ರಿತ್​ ಅವರು ಸತತ ಎರಡನೇ ಬಾರಿ ಪೆನಾಲ್ಟಿಯಲ್ಲಿ ಗೋಲ್​ ತಡೆದು ಭಾರತ ತಂಡವನ್ನು ಗೆಲ್ಲಿಸಿ ಕೊಟ್ಟ ಸಾಧನೆ ಮಾಡಿದರು. ಸೆಮಿಫೈನಲ್​ನಲ್ಲಿ ಲೆಬನಾನ್ ವಿರುದ್ಧ ಅವರು ಪೆನಾಲ್ಟಿ ಶೂಟೌಟ್​ ವೇಳೆ ಗೋಲ್​ ತಡೆದು ಗೆಲವು ತಂದಿದ್ದರು.

ಇದನ್ನೂ ಓದಿ : Team India : ಭಾರತ ಪುರುಷರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

ಪಂದ್ಯದ 16ನೇ ನಿಮಿಷದಲ್ಲಿ ಕುವೈತ್ ತಂಡದ ಶಬೈಬ್ ಅಲ್ ಖಲ್ದಿ ಗೋಲು ಬಾರಿಸಿದರೆ, 39ನೇ ನಿಮಿಷದಲ್ಲಿ ಭಾರತದ ಲಾಲಿಯನ್ಜುವಾಲಾ ಚಾಂಗ್ಟೆ ಗೋಲು ಬಾರಿಸಿ ಸಮಬಲ ಸಾಧಿಸಿದರು. ಪಂದ್ಯದ ಆರಂಭದಲ್ಲೇ ಕುವೈತ್ ತಂಡ ಶಬೀಬ್ ಅಲ್ ಖಲ್ದಿ ಗೋಲು ಬಾರಿಸುವ ಮೂಲಕ ಮುನ್ನಡೆ ಸಾಧಿಸಿತ್ತು. ಬಳಿಕ ಚೇತರಿಸಿಕೊಂಡ ಭಾರತ ಜಯ ತನ್ನದಾಗಿಸಿಕೊಂಡಿತು.

ಇಡೀ ಟೂರ್ನಮೆಂಟ್ ನಮಗೆ ಕಠಿಣವಾಗಿತ್ತು. ಅದು ಅಷ್ಟು ಸುಲಭವಾಗಿರಲಿಲ್ಲ. ನಾವು ಏಳೆಂಟು ವಾರಗಳಿಂದ ಒಟ್ಟಿಗೆ ಇದ್ದೇವೆ. ಆದರೆ ಕೊನೆಯಲ್ಲಿ ನಮಗೆ ಗೆಲುವು ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಗೋಲ್ಡನ್ ಬಾಲ್ ಮತ್ತು ಗೋಲ್ಡನ್ ಬೂಟ್ ಬಗ್ಗೆ ತಿಳಿದಿದ್ದ ಭಾರತದ ನಾಯಕ ಸುನೀಲ್​ ಛೆಟ್ರಿ ಹೇಳಿದ್ದಾರೆ.

Exit mobile version