ಇಂದೋರ್: ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ನಿಯಮದ ಅನ್ವಯ 99 ರನ್ಗಳ ಗೆಲುವು ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಗೆಲುವಿನ ಮೂಲಕ ಇಂದೋರ್ನಲ್ಲಿ ಭಾರತ ತಂಡ ತನ್ನ ಅಜೇಯ ಗೆಲುವಿನ ನಾಗಲೋಟವನ್ನು ಮುಂದುವರಿಸಿದೆ. ಟೀಮ್ ಇಂಡಿಯಾ ಇಲ್ಲಿ ಆಡಿದ 7 ಏಕದಿನ ಪಂದ್ಯದಲ್ಲಿಯೂ ಜಯ ಸಾಧಿಸಿದಂತಾಗಿದೆ. ಇದಲ್ಲದೆ ಈ ಪಂದ್ಯದಲ್ಲಿ ಹಲವು ದಾಖಲೆಗಳು ಕೂಡ ನಿರ್ಮಾಣಗೊಂಡಿದೆ.
3 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಗೆಲುವು
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆಯದಾಗಿ ತವರಿನಲ್ಲಿ ಏಕದಿನ ಸರಣಿ ಗೆದ್ದದ್ದು 2020ರಲ್ಲಿ. ಅದು ಮೂರು ಪಂದ್ಯಗಳ ಸರಣಿಯಾಗಿತ್ತು. ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು. ಇದೀಗ 3 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಗೆದ್ದ ಸಾಧನೆ ಮಾಡಿದೆ. ಸದ್ಯ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದ್ದು ಅಂತಿಮ ಪಂದ್ಯ ಬುಧವಾರ ರಾಜ್ಕೋಟ್ನಲ್ಲಿ ನಡೆಯಲಿದೆ. ಇದನ್ನೂ ಗೆದ್ದರೆ ಕ್ಲೀನ್ಸ್ವೀಪ್ ಸಾಧನೆ ಮಾಡಲಿದೆ.
7 ಸರಣಿ ಗೆಲುವು
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿ ತವರಿನಲ್ಲಿ ಸರಣಿ ಜಯಿಸಿದ್ದು 1986ರಲ್ಲಿ ಇಲ್ಲಿ ಭಾರತ 3-2 ಅಂತರದಿಂದ ಗೆದ್ದು ಬೀಗಿತ್ತು. ಒಂದು ಪಂದ್ಯ ರದ್ದುಗೊಂಡಿತ್ತು. ಒಟ್ಟಾರೆ ಭಾರತ ಆಸೀಸ್ ವಿರುದ್ಧ ತವರಿನಲ್ಲಿ 7 ಬಾರಿ ಸರಣಿ ಜಯಿಸಿದ ಸಾಧನೆ ಮಾಡಿದೆ.
ದಾಖಲೆ ಬರೆದ ಅಶ್ವಿನ್
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್ ಕಿತ್ತ ಸಾಧನೆಗೆ ಆರ್.ಅಶ್ವಿನ್(Ravichandran Ashwin) ಪಾತ್ರರಾದರು. ಅವರು 144 ಕಿತ್ತು ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕುಂಬ್ಳೆ ಆಸೀಸ್ ವಿರುದ್ಧ 142 ವಿಕೆಟ್ ಕಿತ್ತದ್ದು ಇದುವರೆಗಿನ ದಾಖಲೆಯಾಗಿತ್ತು. ಅಶ್ವಿನ್ ಈ ಪಂದ್ಯದಲ್ಲಿ 41 ರನ್ ನೀಡಿ 3 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಪರ ಸೀನ್ ಅಬೋಟ್ ಮತ್ತು ಜೋಶ್ ಹ್ಯಾಜಲ್ವುಡ್ 9ನೇ ವಿಕೆಟ್ಗೆ 77 ರನ್ ಒಟ್ಟುಗೂಡಿಸಿ ಈ ಸಾಧನೆ ಮಾಡಿದ 4ನೇ ಜೋಡಿ ಎನಿಸಿಕೊಂಡರು.
ಸಚಿನ್,ಕೊಹ್ಲಿ ಜತೆ ಎಲೈಟ್ ಪಟ್ಟಿಗೆ ಸೇರಿದ ಗಿಲ್
ಶುಭಮನ್ ಗಿಲ್(Shubman Gill) ಅವರು ಈ ಶತಕ ಬಾರಿಸುವ ಕ್ಯಾಲೆಂಡರ್ ವರ್ಷವೊಂದರಲ್ಲಿ 5ಕ್ಕಿಂತ ಹೆಚ್ಚು ಶತಕ ಬಾರಿಸಿದ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಜತೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರು. ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು 5 ಶತಕ ಬಾರಿಸಿ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ ಕೊಹ್ಲಿ ಒಟ್ಟು (2012, 2017, 2018, 2019) ನಾಲ್ಕು ಬಾರಿ 5ಕ್ಕಿಂತ ಹೆಚ್ಚು ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ (1996, 1998) ಅವರು 2 ಬಾರಿ, ಭಾರತ ತಂಡದ ನಾಯಕ ರೋಹಿತ್ ಶರ್ಮ(2017, 2018, 2019) ಅವರು ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ IND vs AUS: ಸರಣಿ ವಶಪಡಿಸಿಕೊಂಡ ಭಾರತ; ದ್ವಿತೀಯ ಪಂದ್ಯದಲ್ಲಿ 99 ರನ್ ಗೆಲುವು
ಧವನ್ ದಾಖಲೆ ಮುರಿದ ಗಿಲ್
ಭಾರತ ತಂಡದ ಪರ ಅತಿ ಕಡಿಮೆ ಇನಿಂಗ್ಸ್ನಲ್ಲಿ 6 ಶತಕವನ್ನು ಪೂರ್ತಿಗೊಳಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಶುಭಮನ್ ಗಿಲ್ ಭಾಜನರಾದರು. ಇದಕ್ಕೂ ಮುನ್ನ ಈ ದಾಖಲೆ ಶಿಖರ್ ಧವನ್ ಹೆಸರಿನಲ್ಲಿತ್ತು. ಧವನ್ 46 ಇನಿಂಗ್ಸ್ನಲ್ಲಿ ಈ ಮೈಲುಗಲ್ಲು ತಲುಪಿದ್ದರು. ಆದರೆ ಈಗ ಗಿಲ್ 35 ಇನಿಂಗ್ಸ್ನಲ್ಲಿ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ. 25 ವರ್ಷಗಳ ಒಳಗಡೆ ಕ್ಯಾಲೆಂಡರ್ ವರ್ಷವೊಂದರಲ್ಲಿ 5ಕ್ಕಿಂತ ಹೆಚ್ಚು ಶತಕ ಬಾರಿಸಿದ ಭಾರತದ ಮೂರನೇ ಮತ್ತು ವಿಶ್ವದ 5ನೇ ಆಟಗಾರ ಎನಿಸಿಕೊಂಡರು.